ದಾಂಡೇಲಿ: ಒಂದು ಸಂಸ್ಥೆ ತನ್ನ ಕ್ರಿಯಾಶೀಲ ಚಟುವಟಿಕೆಗಳ ಜತೆಗೆ ಆಡಳಿತದಲ್ಲಿ ಪಾರದರ್ಶಕತೆಯನ್ನು ಇಟ್ಟುಕೊಳ್ಳುವುದು ಅತ್ಯವಶ್ಯ.
ಆ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಆಡಳಿತಾವಧಿಯ ಪರಿಷತ್ತಿನ ಲೆಕ್ಕಪತ್ರ ತೆರೆದ ಪುಸ್ತಕದಂತಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಹೇಳಿದರು.
ಪಟ್ಟಣದ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಜಿಲ್ಲಾ ಸಾಹಿತ್ಯ ಸಮ್ಮೇಳನದ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡಿಸಿ ಮಾತನಾಡಿ, ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಸಾಪ ಖಾತೆಯಲ್ಲಿದ್ದ ಹಿಂದಿನ ಶಿಲ್ಕು 4,20,428 ರೂ. ಹಾಗೂ ಸ್ಥಳೀಯ ದೇಣಿಗೆ ಸಂಗ್ರಹ 14,23,915 ರೂ. ಸೇರಿದಂತೆ ಒಟ್ಟು 18,44,303 ರೂ. ಸಂಗ್ರಹವಾಗಿತ್ತು.
ಸಮ್ಮೇಳನಕ್ಕೆ ಒಟ್ಟು 25,01,403 ರೂ. ಖರ್ಚು ಮಾಡಲಾಗಿದೆ. 6,57, 060 ರೂ. ಕೊರತೆಯಾಗಿದ್ದು ಅದನ್ನು ವೈಯಕ್ತಿಕವಾಗಿ ಹಾಗೂ ಕೆಲವು ದಾನಿಗಳ ಸಹಾಯದಿಂದ ಭರಿಸಲಾಗಿದೆ ಎಂದರು.
ಕಾರವಾರದ ನಿವೃತ್ತ ಪ್ರಾಚಾರ್ಯ ಜಿ.ಡಿ. ಮನೋಜೆ, ಹೊನ್ನಾವರದ ಮಹೇಶ್ ಭಂಡಾರಿ, ಕಾರವಾರದ ಯಮುನಾ ಗಾಂವಕರ ಮಾತನಾಡಿದರು.
ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾಹುಸೇನ ಆನೆಹೊಸೂರ ಸ್ವಾಗತಿಸಿದರು. ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ವಂದಿಸಿದರು.
ಜಿಲ್ಲೆಯ ಎಲ್ಲ ತಾಲೂಕು ಘಟಕದ ಅಧ್ಯಕ್ಷರು, ಜಿಲ್ಲಾ ಸಮಿತಿಯ ಸದಸ್ಯರು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಜೀವ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.