ಹಳಿಯಾಳ: ಹುಬ್ಬಳ್ಳಿಯ ಫಿಟ್ನೆಸ್ ಜಿಮ್‌ನಲ್ಲಿ ನಡೆದಿರುವ ಸಂಘಟಿತ ಲೈಂಗಿಕ ಶೋಷಣೆ (harassment) ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂರಾಷ್ಟ್ರ ಸಮನ್ವಯ ಸಮಿತಿಯವರು ಪಟ್ಟಣದಲ್ಲಿ ತಹಸೀಲ್ದಾರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇಲ್ಲಿಯ ತಾಲೂಕು ಆಡಳಿತ ಕಚೇರಿಗೆ ಸೋಮವಾರ ಆಗಮಿಸಿದ ಹಿಂದೂರಾಷ್ಟ್ರ ಸಮನ್ವಯ ಸಮಿತಿಯವರು ಹುಬ್ಬಳ್ಳಿ ಜಿಮ್ ಪ್ರಕರಣದಲ್ಲಿ ಸಮೀರ್ ಮುಲ್ಲಾ ಮತ್ತು ತೈಸೀಮ್ ಮುಲ್ಲಾ ಪ್ರಮುಖ ಆರೋಪಿಗಳಾಗಿದ್ದು, ಯುವತಿಯರನ್ನು ಪರಿಚಯದ ಮೂಲಕ ಸೆಳೆದು ಶೋಷಣೆ ನಡೆಸಲಾಗಿದೆ.
ಪಾನೀಯಗಳಲ್ಲಿ ಮದ್ದು ಬೆರೆಸಿ ಅತ್ಯಾಚಾರ ನಡೆಸಿ, ಖಾಸಗಿ ಫೋಟೋ ಮತ್ತು ವೀಡಿಯೊಗಳನ್ನು ದಾಖಲಿಸಿ ಅವುಗಳ ಮೂಲಕ ಬ್ಲ್ಯಾಕ್‌ಮೇಲ್ ಹಾಗೂ ಮತಾಂತರಕ್ಕೆ ಒತ್ತಾಯ ಮಾಡಲಾಗಿದೆ.
ಪೊಲೀಸರ ತನಿಖೆಯಲ್ಲಿ ಆರೋಪಿಯ ಮೊಬೈಲ್‌ನಲ್ಲಿ ಹಲವು ಅರೆನಗ್ನ ಚಿತ್ರಗಳು ಪತ್ತೆಯಾಗಿದ್ದು, ಕೆಲ ಪೀಡಿತರು ಮುಂದೆ ಬಂದು ದೂರು ನೀಡಿದ್ದು, ಒಬ್ಬ ಮಹಿಳೆ ತನ್ನ ಖಾಸಗಿ ವಿಡಿಯೋ ಆಧರಿಸಿ ಹಣ ವಸೂಲಿ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾಳೆ.
ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಬ್ಲ್ಯಾಕ್‌ಮೇಲ್ ಮತ್ತು ಮೋಸದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ತಕ್ಷಣ ಕ್ರಮ ಕೈಗೊಳ್ಳಬೇಕು.
ವಿಶೇಷ ತನಿಖಾ ದಳ ರಚಿಸುವುದು, ಸಂಬಂಧಿತ ಜಿಮ್‌ಗಳನ್ನು ಸೀಜ್ ಮಾಡುವುದು, ಎಲ್ಲ ಜಿಮ್ ಸಿಬ್ಬಂದಿಗೆ ಪೊಲೀಸ್ ಪರಿಶೀಲನೆ ಕಡ್ಡಾಯಗೊಳಿಸುವುದು, ಮಹಿಳಾ ಸುರಕ್ಷತಾ ಕ್ರಮಗಳನ್ನು ಬಲಪಡಿಸುವುದರ ಜತೆಗೆ ಪೀಡಿತರ ಗೌಪ್ಯತೆ ಕಾಪಾಡಿ ಅವರಿಗೆ ಅಗತ್ಯ ರಕ್ಷಣೆ ಒದಗಿಸುವಂತೆ ಒತ್ತಾಯಿಸಲಾಗಿದೆ.