tadadi: ಹೂಳೆತ್ತುವ ಕಾಮಗಾರಿ ಸಮರ್ಪಕವಾಗಿರಲಿ

ಗೋಕರ್ಣದ ತದಡಿ ಬಂದರಿನಲ್ಲಿ ಅಸಮರ್ಪಕ ಹೂಳೆತ್ತುವ ಕಾಮಗಾರಿ ಸಂಬಂಧ ಮೀನುಗಾರಿಕೆ ಇಲಾಖೆ ನೇತೃತ್ವದಲ್ಲಿ ಬುಧವಾರ  ಕರೆಯಲಾಗಿದ್ದ ಇಲಾಖೆ ಅಧಿಕಾರಿಗಳು ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಪ್ರಮುಖರ ಸಭೆಯಲ್ಲಿ ತದಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಮಹೇಶ ಮೂಡಂಗಿ ಮಾತನಾಡಿದರು. ಅಧಿಕಾರಿಗಳಾದ ರವೀಂದ್ರ ತಳೇಕರ, ಜಿ.ಎಂ. ರಾಠೋಡ, ಅನಂತ ಪಟಗಾರ ಮತ್ತಿತರರಿದ್ದರು.
ಗೋಕರ್ಣದ ತದಡಿ ಬಂದರಿನಲ್ಲಿ ಅಸಮರ್ಪಕ ಹೂಳೆತ್ತುವ ಕಾಮಗಾರಿ ಸಂಬಂಧ ಮೀನುಗಾರಿಕೆ ಇಲಾಖೆ ನೇತೃತ್ವದಲ್ಲಿ ಬುಧವಾರ ಕರೆಯಲಾಗಿದ್ದ ಇಲಾಖೆ ಅಧಿಕಾರಿಗಳು ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಪ್ರಮುಖರ ಸಭೆಯಲ್ಲಿ ತದಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಮಹೇಶ ಮೂಡಂಗಿ ಮಾತನಾಡಿದರು. ಅಧಿಕಾರಿಗಳಾದ ರವೀಂದ್ರ ತಳೇಕರ, ಜಿ.ಎಂ. ರಾಠೋಡ, ಅನಂತ ಪಟಗಾರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುತ್ತಿಗೆದಾರರಿಗೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಕಟ್ಟಪ್ಪಣೆ
  • ತದಡಿ ಬಂದರಿನಲ್ಲಿ ವಿಶೇಷ ಸಭೆ
  • ಮೀನುಗಾರಿಕೆ ಜಂಟಿ ನಿರ್ದೇಶಕ ರವೀಂದ್ರ ತಳೇಕರ್ ನೇತೃತ್ವದಲ್ಲಿ ಸಭೆ
ಗೋಕರ್ಣ: ಕಳೆದ ಫೆಬ್ರವರಿಯಲ್ಲಿ ಇಲ್ಲಿನ ತದಡಿ (tadadi) ಮೀನುಗಾರಿಕೆ ಬಂದರಿನ ಅಳಿವೆ ಭಾಗದಲ್ಲಿ 2 ಕೋಟಿ 65 ಲಕ್ಷ ರೂ. ವೆಚ್ಚದಲ್ಲಿ ನಡೆಸಲಾದ ಕಾಮಗಾರಿಯ ಬಗ್ಗೆ ಮೀನುಗಾರರು, ಬೋಟ್ ನಿರ್ವಾಹಕರು ಮತ್ತು ವಿವಿಧ ಮೀನುಗಾರಿಕೆ ಸಂಘಟನೆಗಳಿಂದ ವ್ಯಾಪಕ ತಕರಾರು ವ್ಯಕ್ತವಾಗಿದ್ದರಿಂದ ಬುಧವಾರ ತದಡಿಯಲ್ಲಿ ಮೀನುಗಾರಿಕೆ ಜಂಟಿ ನಿರ್ದೇಶಕ ರವೀಂದ್ರ ತಳೇಕರ್ ನೇತೃತ್ವದಲ್ಲಿ ವಿಶೇಷ ಸಭೆ ಜರುಗಿತು.
ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಮಹೇಶ ಮೂಡಂಗಿ ಮಾತನಾಡಿ, ‘ಬಂದರು ಇಲಾಖೆಯ ನಿರ್ವಹಣೆಯಲ್ಲಿ ಕೇರಳದ ಮೆ. ಎಸಿಇ ಕಂಪನಿ ಮೀನುಗಾರಿಕೆಗೆ ಸಂಬಂಧಿಸಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅವೈಜ್ಞಾನಿಕವಾಗಿ ಕಳಪೆ ಕಾಮಗಾರಿ ನಡೆಸಿ ರಾತ್ರೋರಾತ್ರಿ ಸಮುದ್ರ ಮಧ್ಯದಿಂದ ಪರಾರಿಯಾಗಿದೆ. ಈ ಬಗ್ಗೆ ಮೀನುಗಾರರ ಸಂಘವು ವಿವಿಧ ಬೋಟ್ ಯೂನಿಯನ್ ಪ್ರಮುಖರು ಮತ್ತು ಮೀನುಗಾರರೊಂದಿಗೆ ಸೇರಿ ಆಧುನಿಕ ಇಕೋ-ಸೌಂಡರ್ ತಂತ್ರಜ್ಞಾನದ ಮೂಲಕ ಕಾಮಗಾರಿ ನಡೆಸಲಾದ ಅಳಿವೆ ಪ್ರದೇಶದ ಸಂಪೂರ್ಣ ತಾಂತ್ರಿಕ ಸಮೀಕ್ಷೆ ಕೈಗೊಂಡಾಗ ಮೀನುಗಾರಿಕೆ ಬೋಟ್ ಸಂಚಾರ ನಡೆಸುವ ಮುಖ್ಯ ಸ್ಥಳಗಳಲ್ಲಿ ಭಾರಿ ಪ್ರಮಾಣದಲ್ಲಿ ಹೂಳೆತ್ತದೆ ಹಾಗೇ ಬಿಟ್ಟಿರುವುದು ಸಚಿತ್ರ ದಾಖಲೆ ಸಹಿತ ಪತ್ತೆಯಾಗಿದೆ. ಹೀಗಾಗಿ ಹೂಳೆತ್ತುವ ಕಾಮಗಾರಿಯಿಂದ ಮೀನುಗಾರರಿಗೆ ಪ್ರಯೋಜನವಾಗುವ ಬದಲು ಇನ್ನಷ್ಟು ತೊಂದರೆ ಎದುರಾಗುವ ಆತಂಕ ಹೆಚ್ಚಾಗಿದೆ. ಆದ್ದರಿಂದ ಈ ಬಗ್ಗೆ ಸಂಬಂಧಿಸಿದ ಇಲಾಖೆಗಳು ಮುತುವರ್ಜಿ ವಹಿಸಿ ಗುತ್ತಿಗೆದಾರರ ಮೂಲಕ ಕಳಪೆ ಕಾಮಗಾರಿಯನ್ನು ತಕ್ಷಣ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.
ಸಭೆಯಲ್ಲಿ ಕಳಪೆ ಕಾಮಗಾರಿಯಿಂದ ನಿತ್ಯ ಬೋಟ್ ನಡೆಸುವವರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಪರ್ಸೀನ್ ಬೋಟ್ ಯೂನಿಯನ್ ಅಧ್ಯಕ್ಷ ಸುರೇಶ ಹರಿಕಂತ್ರ, ಬೋಟ್ ಯೂನಿಯನ್ ಕಾರ್ಯದರ್ಶಿ ಪ್ರಕಾಶ ಮೂಡಂಗಿ, ಬೋಟ್ ಮಾಲೀಕ ಜಗದೀಶ ಮೂಡಂಗಿ ಮಾತನಾಡಿ, ಬೋಟ್ ಮತ್ತು ಮೀನುಗಾರರ ಸುರಕ್ಷತೆಯ ದೃಷ್ಟಿಯಿಂದ ಕಾಮಗಾರಿಯನ್ನು ಪುನಃ ಸರಿಯಾದ ರೀತಿಯಲ್ಲಿ ನಡೆಸುವಂತೆ ಒತ್ತಾಯಿಸಿದರು.
ಬಂದರು ಇಲಾಖೆ ಹಿರಿಯ ಅಧಿಕಾರಿ ಜಿ.ಎಂ. ರಾಠೋಡ್ ಮಾತನಾಡಿ, ‘ಮೀನುಗಾರರು ಮತ್ತು ಮೀನುಗಾರಿಕೆ ನಡೆಸುವವರಿಗೆ ಕಾಮಗಾರಿ ತೃಪ್ತಿಕರವಾಗಿಲ್ಲದ ಕಾರಣ ಮೀನುಗಾರಿಕೆಗೆ ಸಂಬಂಧಿಸಿದ ಮುಖ್ಯಸ್ಥರನ್ನು ಜತೆಗೂಡಿಸಿಕೊಂಡು ಗುತ್ತಿಗೆದಾರ ಸಂಸ್ಥೆಯವರು ನಿತ್ಯ ಬೋಟ್‌ಗಳು ಸಂಚರಿಸುವ ಅಳಿವೆ ಭಾಗದ ವೈಜ್ಞಾನಿಕ ಸರ್ವೆ ನಡೆಸಬೇಕು. ಮೀನುಗಾರರು ತೋರಿಸುವ ಭಾಗಗಳಲ್ಲಿನ ಹೂಳನ್ನು ಪೂರ್ಣವಾಗಿ ಸ್ವಚ್ಛಗೊಳಿಸಿ ಬೋಟ್‌ಗಳಿಗೆ ಮತ್ತು ಮೀನುಗಾರಿಕೆ ನಿರ್ವಹಿಸುವವರಿಗೆ ಸುರಕ್ಷೆ ಮತ್ತು ಸಂತೃಪ್ತಿ ಒದಗಿಸುವ ರೀತಿಯಲ್ಲಿ ಜವಾಬ್ದಾರಿಯಿಂದ ಕೆಲಸ ಕೈಗೊಳ್ಳಬೇಕು’ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಗುತ್ತಿಗೆದಾರ, ಮೆ. ಎಸಿಇ ಕಂಪನಿ ಪ್ರತಿನಿಧಿಗಳು ಪ್ರತಿಕ್ರಿಯಿಸಿ, ಬಂದರು ಇಲಾಖೆಯ ಅಧಿಕಾರಿಗಳ ಆದೇಶಕ್ಕೆ ಒಪ್ಪಿಗೆ ಸೂಚಿಸಿದರು. ಇಲಾಖೆ ಅಧಿಕಾರಿಗಳ ನಿರ್ದೇಶನದಂತೆ ಹೂಳೆತ್ತುವ ಕಾಮಗಾರಿಯನ್ನು ಸರಿಪಡಿಸುವ ಭರವಸೆ ನೀಡಿದರು.

ಸಹಿಗೆ ನಿರಾಕರಣೆ:

ಸಭೆಯಲ್ಲಿ ಹಾಜರಿದ್ದವರ ಸಹಿ ಸಂಗ್ರಹಕ್ಕೆ ಇಲಾಖೆ ಮುಂದಾದಾಗ ಇದಕ್ಕೆ ಸರ್ವಾನುಮತದಿಂದ ವಿರೋಧ ವ್ಯಕ್ತವಾಗಿ ಎಲ್ಲರೂ ಸಹಿ ನೀಡಲು ನಿರಾಕರಿಸಿದ ಪ್ರಸಂಗ ನಡೆಯಿತು.
ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ತಳೇಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕೆ ಇಲಾಖೆಯ ಸ.ನಿರ್ದೇಶಕ ಸಚಿನ್ ಪುತ್ರನ್ ಉಪಸ್ಥಿತರಿದ್ದರು. ಇಂಜಿನಿಯರ್ ಅನಂತ ಪಟಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net