ಅಂಕೋಲಾ:ಇತ್ತೀಚೆಗೆ ಮಾತೃಭಾಷೆಗಿಂತ ಅನ್ಯಭಾಷೆಗಳ (foreign languages) ಮೇಲೆ ಅವಲಂಬನೆ ಅಧಿಕವಾಗಿದ್ದು, ಅದನ್ನು ತೊರೆದು ಮಾತೃಭಾಷೆಯನ್ನು ಪ್ರೀತಿಸಬೇಕು.
ಅಲ್ಲದೇ ನಾವು ಬೆಳೆದ ವಾತಾವರಣದಲ್ಲಿ ಸ್ನೇಹಿತರ ಜತೆ ಸಹಯೋಗದ ಜೀವನ ನಡೆಸಬೇಕು. ಭಾವಿ ಶಿಕ್ಷಕರು ತರಬೇತಿ ಸಂದರ್ಭದಲ್ಲಿ ಸಮಗ್ರ ತರಬೇತಿ ಪಡೆದರೆ ಭವಿಷ್ಯ ಉಜ್ವಲವಾಗುವದು ಎಂದು ಮಕ್ಕಳ ಸಾಹಿತಿ ನಾಗೇಂದ್ರ ನಾಯಕ ತೊರ್ಕೆ ಹೇಳಿದರು.
ಇಲ್ಲಿನ ಕೆಎಲ್‌ಇ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಕನ್ನಡ ಬದಲಾಗುತ್ತಿರುವ ಶೈಕ್ಷಣಿಕ ಪರಿಸರ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಮಾಣು ನಾಯಕ ಸ್ಮರಣಾರ್ಥ ಪ್ರಾಯೋಜಿಸಿದ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕಸಾಪ ತಾಲೂಕ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ನೀತಿ ಬದಲಾವಣೆ ಆಗುತ್ತಿದ್ದು, ಅದಕ್ಕೆ ತಕ್ಕದಾಗಿ ಹೊಂದಿಕೊಳ್ಳುವ ಅನಿವಾರ್ಯತೆ ಇದೆ.
ಜತೆಗೆ ಕನ್ನಡ ಸಾಹಿತ್ಯದ ಮೇಲೆ ಆಸಕ್ತಿ ಮೂಡಿಸಿಕೊಳ್ಳಬೇಕೆ ವಿನಃ ಕನ್ನಡ ಮಾದ್ಯಮದ ಕುರಿತು ಕೀಳರಿಮೆ ಸಲ್ಲ ಎಂದರು.
ಶ್ರದ್ಧಾ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ವಿನಾಯಕ ಜಿ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸಕ ಮಂಜುನಾಥ ಇಟಗಿ ಬಹುಮಾನ ಯಾದಿ ಓದಿದರು. ಲೇಖಕ ಮಹಾಂತೇಶ ರೇವಡಿ, ತಿಮ್ಮಣ್ಣ ಭಟ್ಟ ಉಪಸ್ಥಿತರಿದ್ದರು. ಪ್ರಿಯಾಂಕ ನಾಯ್ಕ ಸಹಕರಿಸಿದರು.
ವಿಜೇತರು: ಬಿ.ಎನ್. ವರ್ಷ (ಪ್ರಥಮ), ವಿನುತಾ ನಾಯಕ (ದ್ವಿತೀಯ), ಕಾವ್ಯ ಖಂಡಪ್ಪನವರ (ತೃತೀಯ) ಹಾಗೂ 10 ವಿದ್ಯಾರ್ಥಿಗಳು ಸಮಾಧನಕರ ಬಹುಮಾನಪಡೆದರು.