ಸ್ಟಿಂಗ್‌ ಆಪರೇಶನ್‌ ನಾಚಿಕೆಗೇಡಿನ ಸಂಗತಿ

ಕಾರ್ಮಿಕ ಸಚಿವ ಸಂತೋಷ ಲಾಡ್‌ ಅಭಿಪ್ರಾಯ
Santosh Lad
ಸಂತೋಷ ಲಾಡ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
Published on: 

ಕಾರವಾರ: ಕರೆಪ್ಶನ್ ವಿಷಯದಲ್ಲಿ ಸ್ಟಿಂಗ್ ಆಪರೇಶನ್‌ಗಳಿಂದ ದೇಶಕ್ಕೆ ಒಳ್ಳೆಯದಾಗುತ್ತದೆ. ಆದರೆ, ಇಂಥ ವಿಷಯಗಳಲ್ಲಿ ಸ್ಟಿಂಗ್ ಆಪರೇಶನ್ ನಾಚಿಕೆಗೇಡಿನ ಸಂಗತಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಸ್ಟಿಂಗ್ ಆಪರೇಶನ್ ವಿಷಯದಲ್ಲಿ ಎಫ್‌ಐಆರ್ ಮಾಡಲಾಗಿದೆ. ತನಿಖೆ ನಡೆಯುತ್ತದೆ. ಅದಕ್ಕಾಗಿಯೇ ಕುಮಾರಸ್ವಾಮಿ ಅವರಿಗೆ ಸಿಟ್ಟು ಬಂದಿದೆ. ಇದರ ಹೊರತಾಗಿ ನನಗೆ ಹೆಚ್ಚೇನೂ ತಿಳಿದಿಲ್ಲ ಎಂದರು. ಪ್ರತಿ ಪಕ್ಷದ ನಾಯಕ ಆರ್.ಅಶೋಕ ಅವರು ಸ್ಟಿಂಗ್ ಆಪರೇಶನ್ ತನಿಖೆಗೆ ಒತ್ತಾಯಿಸಿದಂತೆ ರಾಮ ಮಂದಿರ ಹುಂಡಿ ಕಳ್ಳತನ ಪ್ರಕರಣದ ತನಿಖೆಗೂ ಒತ್ತಾಯಿಸಲಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಸುಮಾರು 1 ಕೋಟಿ 30 ಲಕ್ಷದಷ್ಟು ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಅರ್ಹರಾದ ಎಲ್ಲರಿಗೆ ಸೌಲಭ್ಯ ಸಿಗುತ್ತಿದೆ. ಯಾವುದೇ ಸಮಸ್ಯೆಯಾಗಿದ್ದಲ್ಲಿ ಅದನ್ನು ಬಗೆಹರಿಸಲಾಗುವುದು ಎಂದರು.

ಕೇಂದ್ರ ಬಿಜೆಪಿ ಸರ್ಕಾರ ಅದಾನಿ, ಅಂಬಾನಿ ಕಪಿಮುಷ್ಠಿಯಲ್ಲಿದೆ. ಯಾರಾದರೂ ಅವರ ವಿರುದ್ಧ ಮಾತನಾಡಿದರೆ ಅವರ ಸಾಮಾಜಿಕ ಜಾಲತಾಣದ ಖಾತೆಯನ್ನು ನಿರ್ಬಂಽಸುವ ಕಾರ್ಯ ಮಾಡಲಾಗುತ್ತಿದೆ. ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದ ಸಿಜೆಪಿ ಹಾಗೂ ಯುವ ಸಮುದಾಯದ ಸುಮಾರು 1.65 ಲಕ್ಷ ಜನರ ಸಾಮಾಜಿಕ ಜಾಲತಾಣ ಖಾತೆಗಳನ್ನು ಬ್ಲಾಕ್ ಮಾಡಲಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರ ಪರವಾಗಿ ಪ್ರಚಾರ ನಡೆಸಿದ್ದೇನೆ. ಕೇಂದ್ರ ಬಿಜೆಪಿ ತಾನು ನೀಡಿದ ಭರವಸೆಗಳನ್ನು ಈಡೇರಿಸಿ ಮತ ಯಾಚನೆಗೆ ಬರುತ್ತಿಲ್ಲ. ಬದಲಾಗಿ ಭಾವನಾತ್ಮಕ ವಿಚಾರಗಳನ್ನು ಹೇಳಿ ಮತ ಕೇಳಲಾಗುತ್ತಿದೆ. ಉದ್ಯೋಗ ಸೃಷ್ಟಿಯಾಗಿಲ್ಲ. ಪರೀಕ್ಷಾ ಅಕ್ರಮಗಳಿಂದ ಕೋಟ್ಯಂತರ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಒಟ್ಟಿನಲ್ಲಿ ಬಿಜೆಪಿ ಪದವೀಧರರಿಗಾಗಿ ಯಾವುದೇ ಕೊಡುಗೆ ನೀಡಿಲ್ಲ ಎಂದರು.

ದೇಶದ ಜಿಡಿಪಿ ಹೆಚ್ಚಿದೆ ಎಂದು ಬಿಜೆಪಿಯಿಂದ ತಪ್ಪು ಲೆಕ್ಕ ಕೊಡಲಾಗುತ್ತಿದೆ ಎಂದು ಆರೋಪಿಸಿದ ಸಂತೊಷ ಲಾಡ್ ಅವರು, ನಿಜವಾಗಿ ಜಿಡಿಪಿ ಏರಿದ್ದರೆ ಷೇರು ಮಾರುಕಟ್ಟೆ ಏಕೆ ಕುಸಿಯುತ್ತಿದೆ ಎಂದು ಪ್ರಶ್ನಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ತೆಂಡುಲ್ಕರ್, ಪ್ರಮುಖರಾದ ವಿ.ಎಸ್.ಪಾಟೀಲ, ರಾಜೇಂದ್ರ ರಾಣೆ, ಅಲಿ ಖುರೇಶಿ, ಬಾಬು ಶೇಖ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net