ಸಿದ್ದಾಪುರ: ಶಂಕರನೇ ಅವತರಿಸಿ ಧರಣಿಗೆ ಶಂಕರಾಚಾರ್ಯರಾಗಿ ಬಂದ ದಿನ ಶ್ರೀಶಂಕರ Sri Shankara ಜಯಂತಿ. ಆದಿಗುರು ಲೋಕಕ್ಕೆ ಇಳಿದು ಬಂದ ಸುದಿನ. ಗುರು ಸೂರ್ಯೋದಯವಾಗಿ ಅಂತರಂಗದ ಕತ್ತಲು ಕಳೆದ ದಿನ ಎಂದು ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಬಣ್ಣಿಸಿದರು.
ತಾಲೂಕಿನ ಭಾನ್ಕುಳಿಯ ಶ್ರೀ ರಾಮದೇವಮಠ ಗೋಸ್ವರ್ಗದಲ್ಲಿ ಆಯೋಜಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಮಹಾಪಾದುಕಾ ಪೂಜೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಿಪ್ರೋತ್ತಮ, ಗೋವು, ಆನೆ, ನಾಯಿ ದೂರ ದೃಷ್ಟಿಯಿಂದ ಬೇರೆ ಬೇರೆಯಾದರೂ ಇವರೆಲ್ಲರಲ್ಲಿಯೂ ಆಳದಲ್ಲಿ ಪರಮಾತ್ಮನಿದ್ದಾನೆ ಎಂದು ಕಂಡುಕೊಂಡವರು ಶಂಕರರು. ಸೂರ್ಯ ಪ್ರತಿಬಿಂಬ ಎಲ್ಲಡೆ ಬೀಳುವಂತೆ ಶಂಕರರು ಎಲ್ಲವನ್ನೂ ಸಮನಾಗಿ ಕಾಣಬಲ್ಲವರಾಗಿದ್ದರು ಎಂದರು.
ಜ್ಞಾನಿಗಳೆಲ್ಲರೂ ಬೇರೆಯವರಿಗೆ ಮುಕ್ತಿಯ ಮಾರ್ಗ ತೋರುತ್ತಾರೆ ಎನ್ನಲಾಗದು. ನೌಕೆ ಎಲ್ಲರನ್ನೂ ಆಚೆ ದಡ ತಲುಪಿಸುವಂತೆ ಸಂಸಾರ ಸಮುದ್ರ ದಾಟಲು ಮಾರ್ಗದರ್ಶಿ ಸೂತ್ರ ಕೊಟ್ಟ ಶ್ರೇಷ್ಠರು ಶಂಕರಾಚಾರ್ಯರು ಎಂದರು. ಎದೆಯಲ್ಲಿ ಆದಿಗುರುವನ್ನು ಶಾಶ್ವತವಾಗಿ ಸ್ಥಾಪಿಸಿಕೊಳ್ಳಿ. ಅವರು ನಮ್ಮ ಬದುಕನ್ನು ಬೆಳಗುವಂತಾಗಲಿ ಎಂದರು.
ವಿದ್ವಾನ್ ಶ್ರೀನಿವಾಸ ಭಟ್ಟ ಮೈಸೂರು ಅವರ ಆಚಾರ್ಯತ್ವದಲ್ಲಿ ಮಹಾಪಾದುಕಾ ಪೂಜೆ ಜರುಗಿತು.