Spirituality ಅಂತರಂಗದತ್ತ ಮನಸು ತಿರುಗಿಸುವುದೇ ಅಧ್ಯಾತ್ಮ

ಶಿರಸಿ ತಾಲೂಕಿನ ನಿಸರ್ಗಮನೆಯಲ್ಲಿ ಸತ್ಸಂಗ ನಡೆಯಿತು. ಡಾ. ಶ್ರೀಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಾಂತಮಲ್ಲ ಮಲ್ಲಿಕಾರ್ಜುನ ಸ್ವಾಮೀಜಿ, ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಡಾ. ವೆಂಕಟರಮಣ ಹೆಗಡೆ ಇತರರಿದ್ದರು.
ಶಿರಸಿ ತಾಲೂಕಿನ ನಿಸರ್ಗಮನೆಯಲ್ಲಿ ಸತ್ಸಂಗ ನಡೆಯಿತು. ಡಾ. ಶ್ರೀಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಾಂತಮಲ್ಲ ಮಲ್ಲಿಕಾರ್ಜುನ ಸ್ವಾಮೀಜಿ, ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಡಾ. ವೆಂಕಟರಮಣ ಹೆಗಡೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ
  • ಗುರುವಂದನೆ, ಸತ್ಸಂಗ ಕಾರ್ಯಕ್ರಮ

ಶಿರಸಿ:

ಅಧ್ಯಾತ್ಮ ಮತ್ತು ಆರೋಗ್ಯವು ಹೂವು ಮತ್ತು ಅದರ ಪರಿಮಳದಂತೆಯೇ ಅವಿನಾಭಾವ ಸಂಬಂಧ ಹೊಂದಿವೆ ಎಂದು ಬೆಂಗಳೂರಿನ ವಿಭೂತಿಪುರ ಮಠದ ಡಾ. ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಗಣೇಶನಗರದ ವೇದ ಆರೋಗ್ಯ ಕೇಂದ್ರದ ನಿಸರ್ಗಮನೆಯಲ್ಲಿ ಆಯೋಜಿಸಿದ್ದ ಗುರುವಂದನೆ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ನೀಡಿ ಅವರು ಆಶೀರ್ವಚನ ನೀಡಿದರು.
ಅಧ್ಯಾತ್ಮ ಎಂದರೆ ಸಂಸಾರವನ್ನು ತೊರೆದು ಕಾಡಿಗೆ ಹೋಗುವುದಲ್ಲ. ಸದಾ ಬಾಹ್ಯ ವಿಷಯಗಳಾದ ಶಬ್ದ, ಸ್ಪರ್ಶ, ರೂಪ, ರಸ ಹಾಗೂ ಗಂಧದ ಕಡೆಗೆ ಓಡುವ ಮನಸನ್ನು ಅಂತರಂಗದತ್ತ ತಿರುಗಿಸುವುದೇ ನಿಜವಾದ ಅಧ್ಯಾತ್ಮ. ಮನಸನ್ನು ನಿತ್ಯವೂ ಅಂತರಂಗದ ಕಡೆಗೆ ಒಯ್ಯಲು ಸಾಧ್ಯವಾದರೆ ಜೀವನದಲ್ಲಿ ಆರೋಗ್ಯ ಮತ್ತು ನೆಮ್ಮದಿ ನೆಲೆಸುತ್ತದೆ ಎಂದರು.
ಹುಕ್ಕೇರಿಯ ಹಿರೇಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನಿಸರ್ಗ ಮನೆಯು ವಿವಿಧ ಮಠಗಳ ಸ್ವಾಮೀಜಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿರುವುದು ವಿಶೇಷವಾಗಿದೆ. ಹಿಂದೆ 60ಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳು ಭಾಗವಹಿಸಿ ಇತಿಹಾಸ ನಿರ್ಮಿಸಿದ್ದರು. ಈ ಬಾರಿ ಎಂಟು ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದು, ಸತ್ಸಂಗಕ್ಕೆ ವಿಶೇಷ ಮೆರುಗು ತಂದಿದೆ ಎಂದರು.
ಕೊಟ್ಟೂರಿನ ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಭಿರುಚಿಗಳು ಬದಲಾಗುತ್ತಿರುವುದರಿಂದ ಆರೋಗ್ಯವೂ ಬದಲಾಗುತ್ತಿದೆ. ಆರೋಗ್ಯದ ಬಗ್ಗೆ ಅಲಕ್ಷ್ಯದಿಂದ ಭಾರತದಲ್ಲಿ ರಕ್ತದೊತ್ತಡದ ಸಮಸ್ಯೆ ಹೆಚ್ಚುತ್ತಿದೆ. ಸಿಟ್ಟು, ಕೋಪ ಹಾಗೂ ಮಾನಸಿಕ ಒತ್ತಡ ಇದಕ್ಕೆ ಪ್ರಮುಖ ಕಾರಣಗಳಾಗಿದ್ದು, ಮನಸಿಗೆ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದರು.
ಯಾದಗಿರಿ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹುಕ್ಕೇರಿ ಗುರುಗಳ ಪ್ರೇರಣೆಯಿಂದ ತಾವೂ ಗುರುಗಳಾಗಿದ್ದೇವೆ. ಹೊರಗಿನ ಪ್ರಕೃತಿಯಷ್ಟೇ ಒಳಗಿನ ಪ್ರಕೃತಿಯೂ ಮುಖ್ಯವಾಗಿದೆ ಎಂದರು.
ಹೆಡಗೆ ಶಾಂತಮಲ್ಲ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಪದವಿ ಪಡೆದವರು ಹೆಚ್ಚು, ಆದರೆ, ಪರಿಣಿತರು ಕಡಿಮೆ. ನಿಸರ್ಗಮನೆಯಲ್ಲಿ ಪ್ರಾಮಾಣಿಕತೆ ಇದೆ. ಇದು ಇಂದು ಗುರುಮನೆಯೂ ಆಗಿದೆ ಎಂದರು.
ಕೊಲ್ಲಾಪುರದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಲಬುರಗಿಯ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಲಿಂಗಸೂರಿನ ಶ್ರೀ ಕುಮಾರಸ್ವಾಮೀಜಿ, ನಾರಾಯಣ ಹೆಗಡೆ, ಭವಾನಿ ಹೆಗಡೆ, ಸಂಗೀತಾ ಹೆಗಡೆ ಇತರರಿದ್ದರು.
"

ಹೊಟ್ಟೆ ನಮ್ಮ ಎದೆಗಿಂತ ಮುಂದೆ ಬರದಂತೆ ನೋಡಿಕೊಂಡರೆ ನೂರು ವರ್ಷ ಸುಖವಾಗಿ ಬದುಕಬಹುದು. ಹೊಟ್ಟೆ ಬೆಳೆದರೆ ಅನಾರೋಗ್ಯವೂ ಬೆಳೆಯುತ್ತದೆ. ಅಡುಗೆ ಮನೆಯನ್ನೇ ಔಷಧಾಲಯವನ್ನಾಗಿ ಮಾಡಬೇಕು ಎಂದು ಡಾ. ವೆಂಕಟರಮಣ ಹೆಗಡೆ ಸದಾ ಹೇಳುತ್ತಾರೆ. ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ಜೀವನಶೈಲಿ ಮತ್ತು ಆಧ್ಯಾತ್ಮಿಕ ಚಿಂತನೆ ಒಂದಾದಾಗ ಉತ್ತಮ ಆರೋಗ್ಯ ಸಾಧ್ಯ.

— ಡಾ. ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಿಭೂತಿಪುರ ಮಠ

ಭಜನೆಯು ಭಗವಂತನತ್ತ ಕೊಂಡೊಯ್ಯುವ ಮಾರ್ಗವಾದರೆ, ಪ್ರಾರ್ಥನೆಯು ಭಗವಂತನೊಂದಿಗೆ ಸಂವಾದ ನಡೆಸುವುದು ಹಾಗೂ ಧ್ಯಾನವು ಭಗವಂತನು ಮನುಷ್ಯನೊಂದಿಗೆ ಮಾತನಾಡುವ ಅನುಭವವಾಗಿದೆ.

— ಹುಕ್ಕೇರಿ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net