ನಿರಂತರ ಮಳೆಗೆ ಮಣ್ಣು ಸಡಿಲ, ಕುಸಿತದ ಆತಂಕ

ಯಲ್ಲಾಪುರ ತಾಲೂಕಿನ ಕಳಚೆ ರಸ್ತೆಯಲ್ಲಿ ಹೆಬ್ಬಾರಕುಂಬ್ರಿ ತಿರುವಿನ ಬಳಿ ಕಲ್ಲುಬಂಡೆಗಳು ಬಿದ್ದಿರುವುದು.
ಯಲ್ಲಾಪುರ ತಾಲೂಕಿನ ಕಳಚೆ ರಸ್ತೆಯಲ್ಲಿ ಹೆಬ್ಬಾರಕುಂಬ್ರಿ ತಿರುವಿನ ಬಳಿ ಕಲ್ಲುಬಂಡೆಗಳು ಬಿದ್ದಿರುವುದು.
Published on
ಯಲ್ಲಾಪುರ: ತಾಲೂಕಿನ ಕಳಚೆ ಭಾಗದಲ್ಲಿ ಜೋರಾದ ಮಳೆ ಸುರಿಯುತ್ತಿದ್ದು, ಬುಧವಾರ ರಾತ್ರಿ ಹೆಬ್ಬಾರಕುಂಬ್ರಿ ಬಳಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ಹೆಬ್ಬಾರಕುಂಬ್ರಿ ಬಳಿಯ ತಿರುವಿನಲ್ಲಿ ಕಳಚೆ ರಸ್ತೆಯ ಮೇಲೆ ದರೆಯ ಮೇಲಿನಿಂದ ಕಲ್ಲು ಬಂಡೆಗಳು, ಮಣ್ಣು ಕುಸಿದು ಬಿದ್ದಿವೆ. ಕಳೆದ ಎರಡು ದಿನಗಳಿಂದ ಮಳೆ ಜೋರಾಗಿದ್ದು, ಮಣ್ಣು ಸಡಿಲಗೊಂಡು ಈ ಘಟನೆ ಸಂಭವಿಸಿದೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಎಇಇ ರಾಮಲಿಂಗೇಶ್ವರ, ಕಿರಿಯ ಅಭಿಯಂತರ ರವಿ ಬೋವಿ, ಕಂದಾಯ ನಿರೀಕ ಕಾಜಪ್ಪ ಅರಕೇರಿ, ಗ್ರಾಮ ಆಡಳಿತಾಧಿಕಾರಿ ಯಲ್ಲಮ್ಮ ಪಾಟೀಲ್​ ಇತರರು ಭೇಟಿ ನೀಡಿ ಪರಿಶೀಲಿಸಿದರು. ರಸ್ತೆಗೆ ಬಿದ್ದಿದ್ದ ಮಣ್ಣನ್ನು ತಾತ್ಕಾಲಿಕವಾಗಿ ಪಕ್ಕಕ್ಕೆ ಸರಿಸಿ, ಪ್ರಸ್ತುತ ಸಾರ್ವಜನಿಕ ಹಾಗೂ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ರಸ್ತೆಯ ಬದಿಯಲ್ಲಿ ಇನ್ನುಳಿದಿರುವ ಮಣ್ಣು ಮತ್ತು ಅವಶೇಷಗಳನ್ನು ಜೆಸಿಬಿ ಯಂತ್ರಗಳ ಸಹಾಯದಿಂದ ಸಂರ್ಪೂಣವಾಗಿ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಉಂಟಾಗಿದ್ದ ಭಾರಿ ಭೂಕುಸಿತ, ಹಾನಿಯ ನೆನಪು ಇನ್ನೂ ಮಾಸದೇ ಇರುವುದರಿಂದ, ಮಳೆಗಾಲ ಆರಂಭವಾಗುತ್ತಿದ್ದಂತೆ ಸ್ಥಳಿಯರಲ್ಲಿ ಸಹಜವಾಗಿ ಆತಂಕ ಮೂಡುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net