ಶಿರಸಿ ತಾಲೂಕಿನಲ್ಲಿ ಹೆಚ್ಚಾದ ವಾಂತಿ, ಭೇದಿ ಪ್ರಕರಣ (vomit)

ಶಿರಸಿ ತಾಲೂಕಿನಲ್ಲಿ ಹೆಚ್ಚಾದ ವಾಂತಿ, ಭೇದಿ ಪ್ರಕರಣ.
ಶಿರಸಿ ತಾಲೂಕಿನಲ್ಲಿ ಹೆಚ್ಚಾದ ವಾಂತಿ, ಭೇದಿ ಪ್ರಕರಣ.
Published on

ಪ್ರಮುಖ ಮುಖ್ಯಾಂಶಗಳು

  • ವಾತಾವರಣ ಬದಲಾವಣೆ ಕಾರಣ
ಶಿರಸಿ: ಕಳೆದ ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ವಾಂತಿ, ಭೇದಿ ಪ್ರಕರಣಗಳು ಹೆಚ್ಚಾಗಿವೆ. ಬಹುತೇಕ ಮನೆಗಳಲ್ಲಿ ಒಬ್ಬಲ್ಲ ಒಬ್ಬರು ಈ ಸಮಸ್ಯೆ ಎದುರಿಸುತ್ತಿದ್ದು, ಆಸ್ಪತ್ರೆಗೆ ಧಾವಿಸುತ್ತಿದ್ದಾರೆ.
ಹೌದು. ತಾಲೂಕಿನಲ್ಲಿ ಈಗ ಮದುವೆ, ಮುಂಜಿಗಳ ಕಾರ್ಯಕ್ರಮ ಜೋರಾಗಿ ನಡೆಯುತ್ತಿದೆ. ಮದುವೆ, ಮುಂಜಿಗಳಲ್ಲಿ ಪಾಲ್ಗೊಂಡವರಲ್ಲಿ ಈ ಸಮಸ್ಯೆ ಜಾಸ್ತಿ ಆಗಿದೆ. ಆರೋಗ್ಯವಾಗಿದ್ದವರಿಗೂ ರಾತ್ರಿಯ ವೇಳೆ ಇದ್ದಕ್ಕಿದ್ದಂತೆಯೇ ಬೇಧಿ ಆರಂಭವಾಗುವುದು, ಹೊಟ್ಟೆ ತೊಳಸಿದಂತಾಗುವಿಕೆ, ಆಗಾಗ ವಾಂತಿಯ ಲಕ್ಷಣಗಳು ಕಾಣಿಸಿಕೊಂಡಿವೆ. ಮದುವೆ ಮನೆಯ ಊಟ ಮಾಡಿದ ಬಳಿಕ ವಾಂತಿ ಭೇದಿ ಆರಂಭವಾಗಿದೆ ಎಂಬ ಮಾತು ಈಗ ತಾಲೂಕಿನಲ್ಲಿ ಸಾಮಾನ್ಯವಾಗಿದೆ. ಖಾಸಗಿ ವೈದ್ಯರೂ ಸೇರಿದಂತೆ ಶಿರಸಿ ತಾಲೂಕಿನಲ್ಲಿ ಸುಮಾರು 450ಕ್ಕೂ ಅಧಿಕ ವೈದ್ಯರು, ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಕಳೆದ ಕೆಲ ದಿನಗಳಿಂದ ಈ ಕ್ಲಿನಿಕ್‌ಗೆ ಬರುವ ರೋಗಿಗಳಲ್ಲಿ ವಾಂತಿ, ಬೇಧಿ ಪ್ರಕರಣಗಳೇ ಜಾಸ್ತಿ ಆಗಿವೆ. ಪರೀಕ್ಷೆ ನಡೆಸುವ ವೈದ್ಯರು ರೋಗಿಗಳಿಗೆ ಧೈರ್ಯ ತುಂಬಿ ಔಷಧ ಕೊಡುತ್ತಿದ್ದಾರೆ. 
ಏಕೆ ಹೀಗೆ?
ಚಳಿಗಾಲ ಕಳೆದು ಬೇಸಿಗೆಯ ದಿನಗಳು ಆಗಮಿಸಿದಾಗ ಈ ರೀತಿಯ ವಾಂತಿ ಬೇಧಿ ಪ್ರಕರಣಗಳು ಸಾಮಾನ್ಯ ಎನ್ನುತ್ತಾರೆ ವೈದ್ಯರು. ವಾತಾವರಣ ಬದಲಾವಣೆಯಾದಾಗ ಮನುಷ್ಯನ ದೇಹ ಒಮ್ಮೆಲೇ ಬದಲಾದ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ. ವಾತಾವರಣದಲ್ಲಿ ಉತ್ಪನ್ನವಾಗುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ ಶಕ್ತಿ ಈ ದಿನಗಳಲ್ಲಿ ದೇಹಕ್ಕೆ ಕಡಿಮೆ ಇರುವ ಕಾರಣ ಅವು ವಾಂತಿ, ಬೇಧಿ ಸಮಸ್ಯೆಗೆ ಕಾರಣವಾಗುತ್ತವೆ ಎಂಬುದು ವೈದ್ಯರ ಅಭಿಮತ. ಯುವ ಜನತೆಗೆ ಈ ಸಮಸ್ಯೆಯನ್ನು ತಡೆದುಕೊಳ್ಳುವ ಶಕ್ತಿ ಜಾಸ್ತಿ ಇರುವುದರಿಂದ ಅಷ್ಟೊಂದು ಸಮಸ್ಯೆ ಆಗುವುದಿಲ್ಲ. ಆದರೆ, ಮಕ್ಕಳು ಮತ್ತು ವಯಸ್ಸಾದವರಲ್ಲಿ ವಾಂತಿ, ಬೇಧಿ ಸಮಸ್ಯೆ ಕಾಣಿಸುತ್ತಿದೆ. ಕಲುಷಿತ ನೀರು, ಆಹಾರ ಕ್ರಮದಲ್ಲಿಯ ಬದಲಾವಣೆ ಹಾಗೂ ಅತಿ ಬಿಸಿಲಿನಲ್ಲಿ ಸಂಚರಿಸಿದವರಲ್ಲಿ ವಾಂತಿ, ಬೇಧಿ ಪ್ರಕರಣಗಳು ಜಾಸ್ತಿಯಾಗಿ ಕಂಡುಬಂದಿವೆ. ಹಳ್ಳಿ ಔಷಧದ ಅನುಭವ ಇದ್ದ ಕೆಲ ಹಿರಿಯರು ಇಂತಹ ಪರಿಸ್ಥಿತಿಗಳಲ್ಲಿ ನೇರಳೆ ಮರದ ತೊಟೆಯನ್ನು ಕಷಾಯ ಮಾಡಿ ಸ್ವೀಕರಿಸುವ ಮೂಲಕವೂ ವಾಂತಿ, ಬೇಧಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ.
ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ವಾತಾವರಣ ವೈರುಧ್ಯ ಜಾಸ್ತಿ ಇದೆ. ಚಳಿಗಾಲದಲ್ಲಿ ಈ ವರ್ಷ 10 ಡಿಗ್ರಿ ಸೆಲ್ಶಿಯಸ್‌ವರೆಗೂ ದಾಖಲಾಗುತ್ತಿದ್ದ ತಾಪಮಾನ ಈಗ ಕಳೆದ ನಾಲ್ಕಾರು ದಿನಗಳಿಂದ ಒಮ್ಮೆಲೇ ಏರಿಕೆ ಆಗಿದೆ. ಹಗಲಿನ ವೇಳೆ 34 ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತಿದೆ. ಈ ರೀತಿಯ ವಾತಾವರಣ ಬದಲಾವಣೆ ಒಮ್ಮೆಲೇ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ.
ಪರಿಹಾರವೇನು?
"

ವಾಂತಿ, ಬೇಧಿಗೆ ಬ್ಯಾಕ್ಟೀರಿಯಾಗಳು ಕಾರಣವಾಗುತ್ತವೆ. ಹವಾಮಾನ ಬದಲಾಗುತ್ತಿರುವ ಈ ದಿನಗಳಲ್ಲಿ ದೇಹ ಹೊಂದಿಕೊಂಡಿರದ ಕಾರಣ ಈ ಸಮಸ್ಯೆ ಉದ್ಭವವಾಗುತ್ತದೆ. ಕೆಲ ದಿನಗಳಲ್ಲಿ ದೇಹ ತಾಪಮಾನದ ವಾತಾವರಣಕ್ಕೆ ಹೊಂದಿಕೊಂಡ ಬಳಿಕ ಈ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ವಾಂತಿ, ಬೇಧಿಯನ್ನು ನಿರ್ಲಕ್ಷಿಸದೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಡಾ. ಮಧುಕರ ಪಾಟೀಲತಾಲೂಕು ವೈದ್ಯಾಧಿಕಾರಿ ಶಿರಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net