ಕೊಂಕಣ ರೈಲ್ವೆ ಅಭಿವೃದ್ಧಿಗೆ 7 ಕೋಟಿ ರೂ. ಅನುದಾನ

ಕುಮಟಾ ಕೊಂಕಣ ರೈಲ್ವೆ ನಿಲ್ದಾಣದಲ್ಲಿನ 2 ನೇ ಪ್ಲಾಟಫಾರ್ಮ ಕಾಮಗಾರಿಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ದಿನಕರ ಶೆಟ್ಟಿ ವೀಕ್ಷಿಸಿದರು. ಅಶಾ ಶೆಟ್ಟಿ, ಎನ್.ಎಸ್. ಹೆಗಡೆ, ಜಿ.ಐ.ಹೆಗಡೆ ಇತರರಿದ್ದರು.
ಕುಮಟಾ ಕೊಂಕಣ ರೈಲ್ವೆ ನಿಲ್ದಾಣದಲ್ಲಿನ 2 ನೇ ಪ್ಲಾಟಫಾರ್ಮ ಕಾಮಗಾರಿಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ದಿನಕರ ಶೆಟ್ಟಿ ವೀಕ್ಷಿಸಿದರು. ಅಶಾ ಶೆಟ್ಟಿ, ಎನ್.ಎಸ್. ಹೆಗಡೆ, ಜಿ.ಐ.ಹೆಗಡೆ ಇತರರಿದ್ದರು.
Published on
ಕುಮಟಾ: ಕೊಂಕಣ ರೈಲ್ವೆಯ ಚಿತ್ರಣವನ್ನು ಒಂದೆರಡು ವರ್ಷದಲ್ಲಿ ಸಂಪೂರ್ಣ ಬದಲಿಸುವುದು ಕೇಂದ್ರ ಸರ್ಕಾರದ ಇಚ್ಛೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರ ಮೂಲಭೂತ ಸೌಕರ್ಯಗಳ ಸುಧಾರಣೆಗೆ 7 ಕೋಟಿ ರೂ. ಅನುದಾನದಲ್ಲಿ ಅದ್ಯತಾನುಸಾರ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಕುಮಟಾದಲ್ಲಿ ಬಹುಬೇಡಿಕೆಯ 2ನೇ ಪ್ಲಾಟ್‌ಫಾರ್ಮ್ ಸಿದ್ಧಗೊಳ್ಳುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಇಲ್ಲಿನ ಕೊಂಕಣ ರೈಲ್ವೆ ನಿಲ್ದಾಣಕ್ಕೆ ಶುಕ್ರವಾರ ಕಾಮಗಾರಿ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೊಂಕಣ ರೈಲ್ವೆ ಮಾರ್ಗದಲ್ಲಿನ ಪ್ರಯಾಣಿಕರ ಪ್ರಾಥಮಿಕ ಅಗತ್ಯತೆಗಳನ್ನು ನೀಡಲು ಕ್ಷೇತ್ರದ ಸಂಸದನಾಗಿ ವಿಶೇಷ ಪ್ರಯತ್ನ ಮಾಡುತ್ತಿದ್ದೇನೆ. ಈ ಬಗ್ಗೆ ಕೊಂಕಣ ರೈಲ್ವೆ ಬಳಕೆದಾರರ ಸಮಿತಿ, ಕೊಂಕಣ ರೈಲ್ವೆ ಹಾಗೂ ಜನಾಗ್ರಹವನ್ನು ಸಭೆಗಳಲ್ಲಿ ಸಾಕಷ್ಟು ಚರ್ಚಿಸಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರಿಗೆ ಜಿಲ್ಲೆಯ ಮನದಟ್ಟು ಮಾಡಿದ್ದರ ಪರಿಣಾಮವಾಗಿ ಜಿಲ್ಲೆಯ ಕುಮಟಾ, ಗೋಕರ್ಣ, ಮರ್ಡೇಶ್ವರ ಹಾಗೂ ಭಟ್ಕಳ ನಿಲ್ದಾಣಗಳಲ್ಲಿ 7 ಕೋಟಿ ರೂ. ಅನುದಾನವನ್ನು ಮೂಲಭೂತ ಅಗತ್ಯತೆಗಳ ಸುಧಾರಣೆಗೆ ನೀಡಿದ್ದಾರೆ. ಇಲ್ಲಿ ಇಡೀ ದೇಶದಲ್ಲಿ ಇರುವಂತೆ ರಾಷ್ಟ್ರೀಯ ಗುಣಮಟ್ಟದ ಪ್ಲಾರ್ಟಫಾರ್ಮ್ ನಿರ್ಮಾಣ ನಡೆಯಲಿದೆ. ಮುಂದಿನ ಹಂತದಲ್ಲಿ ಮಳೆಗಾಲದಲ್ಲಿ ಅನುಕೂಲಕರವಾದ ಶೆಲ್ಟರ್ ಮಂಜೂರಿಯ ಪ್ರಯತ್ನ ನಡೆದಿದೆ.
ಗೋಕರ್ಣದ ಪ್ಲಾಟಫಾರ್ಮ್‌ನ್ನು ಇದೇರೀತಿ ರಾಷ್ಟ್ರೀಯ ಗುಣಮಟ್ಟದ ಪ್ಲಾರ್ಟಫಾರ್ಮ ಮಾಡಲಾಗುತ್ತಿದೆ. ಅಲ್ಲಿ ಮೇಲ್ಸೇತುವೆ ಮಾಡುತ್ತಿದ್ದೇವೆ. ಭಟ್ಕಳದಲ್ಲಿ 2ನೇ ಪ್ಲಾರ್ಟಫಾರ್ಮ್ ವಿಸ್ತರಣೆ, ಮರ್ಡೇಶ್ವರದಲ್ಲಿ ಶೌಚಗೃಹ ಸಂಕೀರ್ಣ ಇನ್ನಿತರ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.
ಕಾರವಾರದಲ್ಲಿ ಇತ್ತೀಚೆಗೆ ಹವಾನಿಯಂತ್ರಿತ ಪ್ರಯಾಣಿಕರ ವೇಟಿಂಗ್ ಹಾಲ್ ಉದ್ಘಾಟನೆಯಾಗಿದೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಡಬಲ್‌ಲೈನ್ ಅಳವಡಿಕೆ ಮುಂತಾದ ಅಗತ್ಯಗಳ ಕ್ರಿಯಾಯೋಜನೆ ಸಿದ್ಧವಾಗಿದೆ. ಅದರ ಆಧಾರದಲ್ಲಿ ಮುಂದಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಬೇಡಿಕೆಗಳ ಬಗ್ಗೆ ರೈಲ್ವೆ ಸಚಿವರನ್ನು ಆಗ್ರಹಪೂರ್ವಕವಾಗಿ ಕೇಳಿಕೊಂಡಾಗ ಸ್ಪಂದಿಸಿದ್ದಾರೆ ಎಂದರು.
ಇದಕ್ಕೂ ಮುನ್ನ ಕೊಂಕಣ ರೈಲ್ವೆಯ ಆರ್‌ಆರ್‌ಎಂ ಆಶಾ ಶೆಟ್ಟಿ ಇನ್ನಿತರ ಅಧಿಕಾರಿಗಳೊಂದಿಗೆ ಕಾಮಗಾರಿಯ ಪ್ರಗತಿ ವೀಕ್ಷಿಸಿ, ಕಾಮಗಾರಿಯನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಹಾಗೂ ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ಮಂಡಲಾಧ್ಯಕ್ಷ ಜಿ.ಐ.ಹೆಗಡೆ, ಗಣೇಶ ಪಂಡಿತ, ವೆಂಕಟೇಶ ನಾಯಕ, ಎಂ.ಜಿ.ಭಟ್, ಡಾ. ಜಿ.ಜಿ.ಹೆಗಡೆ, ತುಳಸು ಗೌಡ, ಜಿ.ಎಸ್.ಗುನಗಾ, ಎಲ್.ಎಸ್.ಅಂಬಿಗ, ಜಯಾ ಶೇಟ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net