ರಾಷ್ಟ್ರಪತಿಗಳಿಂದ ಶಹಬಾಸ್‌ಗಿರಿ ಪಡೆದ ಶಿರಸಿಯ ಹುಡುಗನ ಸಂಶೋಧನೆ

ಅಕ್ಷಯ ಮಾಶೇಲ್ಕರ್‌
ಅಕ್ಷಯ ಮಾಶೇಲ್ಕರ್‌
Published on

ಪ್ರಮುಖ ಮುಖ್ಯಾಂಶಗಳು

  • ಪೋರ್ಟಬಲ್‌ ಲೈಾಬ್‌ ಕಿಟ್‌ ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನ
  • ಶಿರಸಿಯಲ್ಲಿ ಓದಿ ಬೆಳೆದ ವಿದ್ಯಾರ್ಥಿ
ಕಾರವಾರ: ಶಿರಸಿಯಲ್ಲಿ ಓದಿ ಬೆಳೆದ ಯುವಕ ಅಕ್ಷಯ ಮಾಶೇಲ್ಕರ್ ಅವರ ಪೋರ್ಟಬಲ್ ಲ್ಯಾಬ್ ಕಿಟ್ ದೇಶ ಮಟ್ಟದಲ್ಲಿ ಗಮನ ಸೆಳೆದಿದೆ. ರಾಷ್ಟ್ರಪತಿ ಭವನದಲ್ಲಿ ಸೋಮವಾರ ಜರುಗಿದ ಕಾರ್ಯಕ್ರಮದಲ್ಲಿ ಅಕ್ಷಯ ಅವರ ಸಂಶೋಧನೆಯನ್ನು ಸ್ವತಃ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಳಿ, ಶ್ಲಾಘಿಸಿದರು.
ಸ್ಥಳೀಯ ಸವಾಲುಗಳನ್ನು ಎದುರಿಸಿ ದೇಶದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬದಲಾವಣೆಗಳನ್ನು ತರಬಹುದಾದ ತಳಮಟ್ಟದ 26 ಸಂಶೋಧಕರನ್ನು (ಗ್ರಾಸ್‌ರೂಟ್ ಇನ್ನೋವೆಟರ್ಸ್) ಭಾರತ ಸರ್ಕಾರದ ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್ (ಎಐಎಂ) ಗುರುತಿಸಿದೆ. ಅವರೆಲ್ಲರನ್ನು ಸೋಮವಾರ ರಾಷ್ಟ್ರಪತಿ ಭವನಕ್ಕೆ ಕರೆದು, ಸಂಶೋಧನೆಯ ಉದ್ದೇಶಗಳನ್ನು ಕೇಳಿ, ಗೌರವಿಸಲಾಯಿತು. ಆ 26 ಜನರಲ್ಲಿ ಕರ್ನಾಟಕದಿಂದ ಅಕ್ಷಯ ಮಾಶೇಲ್ಕರ್ ಕೂಡ ಒಬ್ಬರು ಎಂಬುದು ವಿಶೇಷ.
ಎಕ್ಸಪರಿಮೈಂಡ್ ಲ್ಯಾಬ್ಸ್ನ ಸ್ಥಾಪಕ ಹಾಗೂ ಸಿಇಒ ಅಕ್ಷಯ ಶಿರಸಿ ನಗರದ ನಿವಾಸಿ. ಶಿರಸಿಯ ಕಲಾ ಮತ್ತು ವಿಜ್ಞಾನ ಕಾಲೇಜ್‌ನಲ್ಲಿ ವಿಜ್ಞಾನ ಪದವಿ ಪಡೆದು ಬೆಳೆದ ಅವರು ಪ್ರಸ್ತುತ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ನೈಜ ಪ್ರಪಂಚದ ವಾಸ್ತವ ಹಾಗೂ ತರಗತಿಯ ಕಲಿಕೆ ನಡುವಿನ ಅಂತರವನ್ನು ಕಡಿಮೆ ಮಾಡಲು ಅಕ್ಷಯ ಅವರ ಅವರ ಎಕ್ಸ್ಪರಿಮೈಂಡ್ ಲ್ಯಾಬ್ಸ್ ವಿವಿಧ ಶಿಕ್ಷಣ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.
ಪ್ರಾಯೋಗಿಕ ಕಲಿಕಾ ವ್ಯವಸ್ಥೆ, ಶಿಕ್ಷಕರ ಸಾಮರ್ಥ್ಯ ವೃದ್ಧಿ, ಇನ್ನೋವೇಶನ್ ಲ್ಯಾಬ್‌ಗಳು, ಸುಲಭವಾಗಿ ಒಯ್ಯಬಹುದಾದ ಪೋರ್ಟಬಲ್ ಲ್ಯಾಬ್‌ಗಳು, ಶಿಕ್ಷಣ ಕಾರ್ಯಕ್ರಮಗಳು ಮತ್ತು ಯೋಜನೆ ಆಧಾರಿತ ಕಲಿಕಾ ಉಪಕ್ರಮಗಳ ಮೂಲಕ ವಿದ್ಯಾರ್ಥಿಗಳು ಸೈದ್ಧಾಂತಿಕ ಕಲಿಕೆಯಿಂದ ಹೊರಬಂದು ಸ್ವತಃ ಸಂಶೋಧಕರು, ಉದ್ಯಮಿಗಳಾಗಲು ಎಕ್ಸಪರಿಮೈಂಡ್ ಲ್ಯಾಬ್ಸ್ ಪ್ರೇರೇಪಿಸುತ್ತಿದೆ.
ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ (ಎಸ್‌ಟಿಇಎಂ) ಕೃತಕ ಬುದ್ಧಿಮತ್ತೆ (ಎಐ), ರೊಬಾಟಿಕ್ಸ್ ಮುಂತಾದ ಅಂಶಗಳನ್ನು ಒಳಗೊಂಡ ಅವರ ಪೋರ್ಟಬಲ್ ಲ್ಯಾಬ್ ಅನುಭವ ಆಧಾರಿತ ಕಲಿಕೆಗೆ ಅತ್ಯುಪಯುಕ್ತವಾಗಿದೆ. ಮಕ್ಕಳಲ್ಲಿ ಸೃಜನಶೀಲತೆ, ಡಿಸೈನ್ ಥಿಂಕಿಂಗ್, ಸ್ಪರ್ಧಾತ್ಮಕ ಕೌಶಲ್ಯಗಳು ಮತ್ತು ಉದ್ಯಮಶೀಲತೆಯನ್ನು ಬೆಳೆಸುವಲ್ಲಿ ಈ ಸಾಧನ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರವರು.
ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಲು, ಆವಿಷ್ಕಾರಕ್ಕೆ ಉತ್ತೇಜ ನೀಡಲು, ಪ್ರಯೋಗಳನ್ನು ಮಾಡಲು ಮತ್ತು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಂತೆ ಪ್ರೋತ್ಸಾಹಿಸಲು ಈ ಲ್ಯಾಬ್ ಅನುಕೂಲವಾಗಲಿದೆ. ಈ ಲ್ಯಾಬ್ ಸ್ಥಾಪನೆಗೆ ಪ್ರತ್ಯೇಕ ಕೊಠಡಿ ಕೂಡ ಅಗತ್ಯವಾಗಿಲ್ಲ ಎನ್ನುತ್ತಾರೆ ಅಕ್ಷಯ.

ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವಾಗಲಿ

ಉತ್ತರ ಕನ್ನಡದಂಥ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಾರೆ. ಆದರೆ, ಮೂಲ ಸೌಕರ್ಯ ಹಾಗೂ ಹಣಕಾಸಿನ ಕೊರತೆಯಿಂದ ಅನೇಕರು ಸಂಶೋಧನೆಯಂಥ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಥ ಶಾಲೆಗಳ ಮಕ್ಕಳಿಗೆ ಪೋರ್ಟಬಲ್ ಲ್ಯಾಬ್ ಅತ್ಯುತ್ತಮವಾದ ಸಾಧನವಾಗಿದೆ. ಲ್ಯಾಬ್ ಅಳವಡಿಸಿ, ಅದರ ಬಳಕೆಗೆ ನಾವೇ ಶಿಕ್ಷಕರಿಗೆ ತರಬೇತಿಯನ್ನೂ ನೀಡುತ್ತೇವೆ.ಸರ್ಕಾರಿ ಶಾಲೆಗಳ ಮಕ್ಕಳಿಗೆ ಇವುಗಳನ್ನು ಒದಗಿಸಲು ಉದ್ಯಮಿಗಳು, ಕಂಪನಿಗಳು ನೆರವಾಗಬೇಕು ಎನ್ನುತ್ತಾರೆ ಅಕ್ಷಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net