ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರಿಂದ ಚಾತುರ್ಮಾಸ್ಯ ಸಂಕಲ್ಪ
ಭಟ್ಕಳ: ಗೋಮಾಂತಕದ ಪವಿತ್ರ ಕುಶಾವತಿ ನದಿಯ ತಟದಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಕೇಂದ್ರ ಮಠದಲ್ಲಿ ಪರ್ತಗಾಳಿ ಚಾತುರ್ಮಾಸ್ಯಕ್ಕೆ ಬುಧವಾರ ಧಾರ್ಮಿಕ ವೈಭವ ಮತ್ತು ಭಕ್ತಿಭಾವದ ನಡುವೆ ಚಾಲನೆ ದೊರೆಯಿತು.
ಪರಮಪೂಜ್ಯ ಶ್ರೀಮದ್ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರ 10ನೇ ಚಾತುರ್ಮಾಸ್ಯ ವ್ರತ ಇದಾಗಿದ್ದು, ಪರ್ತಗಾಳಿ ಕೇಂದ್ರ ಮಠದಲ್ಲಿ ನಡೆಯುತ್ತಿರುವ ನಾಲ್ಕನೇ ಚಾತುರ್ಮಾಸ್ಯವೂ ಹೌದು. ಇತ್ತೀಚೆಗೆ ನಡೆದ 550ನೇ ವರ್ಷದ ಮಹೋತ್ಸವದ ಬಳಿಕ ನಡೆಯುತ್ತಿರುವ ಮೊದಲ ಚಾತುರ್ಮಾಸ್ಯ ಎಂಬ ಐತಿಹಾಸಿಕ ಮಹತ್ವವೂ ಇದಕ್ಕಿದೆ.
ಆ. 5ರಿಂದ ಸೆಪ್ಟೆಂಬರ್ 26ರವರೆಗೆ ನಡೆಯಲಿರುವ ಚಾತುರ್ಮಾಸ್ಯದ ಅವಧಿಯಲ್ಲಿ ಪ್ರತಿದಿನ ತ್ರಿಕಾಲ ಪೂಜೆ, ವೇದಪಾರಾಯಣ, ಧಾರ್ಮಿಕ ಪ್ರವಚನ, ಭಜನೆ, ಗುರುಭಿಕ್ಷೆ, ವಿವಿಧ ಸೇವೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ದೇಶ-ವಿದೇಶಗಳಿಂದ ಸಾವಿರಾರು ಶಿಷ್ಯರು ಹಾಗೂ ಭಕ್ತರು ಆಗಮಿಸಿ ಶ್ರೀಹರಿ-ವಾಯು ಗುರುಗಳ ದಿವ್ಯ ಅನುಗ್ರಹ ಪಡೆಯಲಿದ್ದಾರೆ.
370 ವರ್ಷಗಳ ಆಧ್ಯಾತ್ಮಿಕ ಪರಂಪರೆ ಹೊಂದಿರುವ ಪರ್ತಗಾಳಿ ಮಠವು ಶ್ರೀರಾಮ, ಸೀತಾದೇವಿ, ಲಕ್ಷ್ಮಣ ಹಾಗೂ ಹನುಮಂತ ದೇವರ ದಿವ್ಯ ಸಾನ್ನಿಧ್ಯ, ಪವಿತ್ರ ಗುರು ವೃಂದಾವನಗಳು, ಅಪರೂಪದ ವೇದ-ಧರ್ಮಗ್ರಂಥಗಳ ಭಂಡಾರ, ಗೋಶಾಲೆ, ಆದರ್ಶ ಧಾಮ, 77 ಅಡಿ ಎತ್ತರದ ಭವ್ಯ ಕಂಚಿನ ಶ್ರೀರಾಮಚಂದ್ರರ ಪ್ರತಿಮೆ ಹಾಗೂ ನವೀಕೃತ ಶ್ರೀರಾಮ ಮಂದಿರದಿಂದ ದೇಶದ ವಿವಿಧ ಭಾಗಗಳ ಭಕ್ತರನ್ನು ಆಕರ್ಷಿಸುತ್ತಿದೆ.
ವ್ಯಾಸಪೂಜೆಯೊಂದಿಗೆ ಸಂಕಲ್ಪ
ಚಾತುರ್ಮಾಸ್ಯ ವ್ರತ ಆರಂಭಕ್ಕೂ ಮುನ್ನ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರು ಸಂಪ್ರದಾಯಬದ್ಧವಾಗಿ ವ್ಯಾಸಪೂಜೆ ನೆರವೇರಿಸಿ ಚಾತುರ್ಮಾಸ್ಯ ಸಂಕಲ್ಪ ಸ್ವೀಕರಿಸಿದರು. ಮಠದ ಪೂಜಾಮಂಟಪದಲ್ಲಿ ಶ್ರೀ ವೇದವ್ಯಾಸರ ದಿವ್ಯ ಪ್ರತಿಮೆಗೆ ಅತ್ಯುನ್ನತ ಸ್ಥಾನ ಕಲ್ಪಿಸಲಾಗಿದ್ದು, ಶ್ರೀ ಸ್ವಾಮೀಜಿಯವರ ಸಮೀಪದಲ್ಲೇ ಪ್ರತಿಷ್ಠಾಪಿಸಲಾಗಿದೆ. ಶ್ರೀ ವೇದವ್ಯಾಸರು ನಾರಾಯಣಸ್ವರೂಪರು ಎಂಬ ಪರಂಪರೆಯ ನಂಬಿಕೆಗೆ ಇದು ಸಾಕ್ಷಿಯಾಗಿದೆ.
ಪರ್ತಗಾಳಿ ಚಾತುರ್ಮಾಸ್ಯ ಸಮಿತಿಯು ಶಿಷ್ಯರು ಹಾಗೂ ಭಕ್ತರು ಕುಟುಂಬ ಸಮೇತರಾಗಿ ಚಾತುರ್ಮಾಸ್ಯದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ಭ್ರಾತೃಸಹಿತ ಸೀತಾಪತಿ ರಾಮಚಂದ್ರ ವೀರವಿಠ್ಠಲ ದೇವರು ಹಾಗೂ ಪವಿತ್ರ ಗುರುಪರಂಪರೆಯ ಅನುಗ್ರಹ ಪಡೆಯುವಂತೆ ಮನವಿ ಮಾಡಿದೆ.