

ಕಾರವಾರ: ಕಳೆದ 55 ವರ್ಷಗಳಿಂದ ಜಿಲ್ಲೆಯಲ್ಲಿ ಅಕ್ಷರ ಸೇವೆಯಲ್ಲಿ ತೊಡಗಿರುವ ಹೊನ್ನಾವರದ ಜಿ.ಯು.ಭಟ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಹೆಸರಿನಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯ ವೈದ್ಯ ಡಾ.ಜಿ.ಎಸ್‌ಚಂದ್ರಶೇಖರ ಅವರ ಹೆಸರನ್ನು ಮೊದಲ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾದ ಕಾರಣ ಕೆಲವೇ ತಾಸಿನಲ್ಲಿ ಸರ್ಕಾರ ಆದೇಶ ಬದಲಿಸಿ, ಜಿ.ಯು.ಹೊನ್ನಾವರ ಅವರಿಗೆ ಪ್ರಶಸ್ತಿ ಘೋಷಿಸಿದೆ.
ಗಜಾನನ ಉಮಾಮಹೇಶ್ವರ ಭಟ್ ಅವರು 79 ವರ್ಷದ ಹಿರಿಯ ಪತ್ರಕರ್ತರು.ಮುದ್ರಕರು, ಪ್ರಕಾಶಕರು, ನಾಟಕಕಾರ, ಸಿನಿಮಾ ನಟ, ಸಾಮಾಜಿಕ ಹೋರಾಟಗಾರರಾಗಿದ್ದಾರೆ. ತಮ್ಮ ನೇರ ನಡೆ, ನಿಷ್ಠುರ ಬರಹದಿಂದ ಹೆಸರಾಗಿದ್ದಾರೆ. ಹೊನ್ನಾವರದಲ್ಲಿ ಸ್ವಂತ ಶ್ರೀಧರ ಪ್ರಿಂಟಿಂಗ್ ಪ್ರೆಸ್ ಹೊಂದಿರುವ ಅವರು ಹಲವು ಅಮೂಲ್ಯ ಪುಸ್ತಕಗಳನ್ನು ಮುದ್ರಿಸಿ, ಕಡಿಮೆ ಬೆಲೆಗೆ ನೀಡಿದ್ದರು. ಪತ್ರಕರ್ತರಾಗಿ ವಿವಿಧ ಪತ್ರಿಕೆಗಳಲ್ಲಿ , ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿದ್ದು, ಅರ್ಧ ಶತಮಾನಗಳಲ್ಲಿ ಲಕ್ಷಾಂತರ ಗಮನ ಸೆಳೆಯುವ ವರದಿಗಳನ್ನು, ಸಂದರ್ಶನಗಳನ್ನು ಮಾಡಿದ್ದಾರೆ. ಪ್ರಸ್ತುತ ಅವರ `ನಾರದ ಉವಾಚ' ಎಂಬ ಅಂಕಣ ಜಾಲತಾಣದಲ್ಲಿ ಪ್ರಸಿದ್ಧವಾಗಿದೆ. ಅಭಿವೃದ್ಧಿಪರ ನಿಲುವು, ದೂರಗಾಮಿ ಆಲೋಚನೆಗಳಿಂದ ಜಿಲ್ಲೆಯ ಅಭಿವೃದ್ಧಿಗೆ ಅವರು ಸಾಮಾಜಿಕ ಹೋರಾಟಗಳಲ್ಲಿ ತೊಡಗಿ, ಜಿಲ್ಲೆಯ ಅಭಿವೃದ್ಧಿಗೆ ನಿರಂತರ ಕೊಡುಗೆ ನೀಡಿದ್ದಾರೆ. ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾಗಿದ್ದರು.
ಜೋಕುಮಾರಸ್ವಾಮಿ, ಅಂಧಯುಗ, ಬೇಲಿ ಮತ್ತು ಹೊಲ, ಆಷಾಡದ ಒಂದು ದಿನ ನಾಟಕವನ್ನು ನಿರ್ದೇಶಿಸಿ, ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿರಿಯ ಚಿತ್ರ ಕಲಾವಿದ ಕಾಶಿನಾಥ ಅವರ ಅವರ ಅನುಭವ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಗಿರಿಬಾಲೆ, ವಿಷಾಲ ರಾಜ್ ನಿರ್ದೇಶನದ ದಂಡಿ, ಕೊಂಕಣಿಯ ಅಪ್ಸರಧಾರಾ ಮುಂತಾದ ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ.
ಉತ್ತರ ಕನ್ನಡ ಕಥೆ-ವ್ಯಥೆ, ಕರಾವಳಿ, ಇಳೆ ಕಾಡಿದೆ, ಮನ ಅರಳಿದೆ, ಮುರ್ಡೇಶ್ವರ ಮತ್ತು ಇಡಗುಂಜಿ ಕ್ಷೇತ್ರ ಪರಿಚಯ, ಕರ್ಮಯೋಗಿ ಡಾ.ಆರ್.ಎನ್.ಶೆಟ್ಟಿ, ಬಹುಮುಖಿ, ಅಕ್ಷರ ಭಾರತಿ, ಜನವಾಣಿ, ಜೀವನದಿ ಸೇರಿ ಅವರ ಹಲವು ಕೃತಿಗಳು ಪ್ರಕಟವಾಗಿವೆ.
ಜಿ.ಯು.ಭಟ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಡಿವಿಜಿ ಪ್ರಶಸ್ತಿ, ಜಿ.ಎಸ್.ದೊರೆಸ್ವಾಮಿ ಪ್ರಶಸ್ತಿ, ಡಾ.ಟಿಎಂಎ ಪೈ ಆರೋಗ್ಯ ಸೇವಕ ಅವಾರ್ಡ್, ಕೆಂಪೆಗೌಡ ಪ್ರಶಸ್ತಿ, ವಿ.ಸೀತಾರಾಮ ಮಾಧ್ಯಮ ಪ್ರಶಸ್ತಿ, ಶ್ಯಾಮರಾವ್ ದತ್ತಿನಿಽ ಪ್ರಶಸ್ತಿಗಳು ಅವರಿಗೆ ಸಂದಿವೆ.