ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಆಶೀರ್ವಚನ
ಭಟ್ಕಳ: ದೇವರನ್ನು ಒಲಿಸಿಕೊಳ್ಳಲು ಸಂಪತ್ತಿಗಿಂತ ಶುದ್ಧ ಭಕ್ತಿಯೇ ಮುಖ್ಯ. ದೇವರು ಭಕ್ತನ ಸಂಪತ್ತನ್ನು ನೋಡುವುದಿಲ್ಲ, ಭಕ್ತಿಯನ್ನೇ ಪರಿಗಣಿಸುತ್ತಾನೆ ಎಂದು ಪರಮಪೂಜ್ಯ ಶ್ರೀಮದ್ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಆಶೀರ್ವಚನ ನೀಡಿದರು.
ಪರ್ತಗಾಳಿಯಲ್ಲಿ ಚಾತುರ್ಮಾಸ್ಯ-2026ರ ಅಂಗವಾಗಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಭಕ್ತ ಸಂಕುಲವನ್ನು ಹರಸಿ ಅವರು ಆಶೀರ್ವಚನ ನೀಡಿದರು. ಪೂರ್ವಜನ್ಮದ ಕರ್ಮಲ ಅನುಭವಿಸುತ್ತಿರುವ ನಾವು ಈ ಜನ್ಮದಲ್ಲಿ ಸತ್ಕರ್ಮ ಹಾಗೂ ದೇವಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡರೆ ದುಷ್ಕರ್ಮಗಳ ಲ ಕ್ಷೀಣಿಸಿ, ಜೀವನ ಸಾರ್ಥಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ನೂತನ ಅಧಿಕೃತ ವೆಬ್‌ಸೈಟ್ ಅನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಮಠದಲ್ಲಿ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ನಿತ್ಯ ಪಂಚಾಂಗ, ಅಪರೂಪದ ಗ್ರಂಥಗಳು, ಸೇವಾ ಬುಕಿಂಗ್, ಸ್ವಾಮೀಜಿಯವರ ಮೊಕ್ಕಾಂ ಸೇರಿದಂತೆ ಮಠದ ಸಮಗ್ರ ಮಾಹಿತಿಯನ್ನು ವಿಶ್ವದಾದ್ಯಂತ ಇರುವ ಶಿಷ್ಯವೃಂದಕ್ಕೆ ತಲುಪಿಸುವ ಉದ್ದೇಶದಿಂದ ವೆಬ್‌ಸೈಟ್ ಅಭಿವೃದ್ಧಿಪಡಿಸಲಾಗಿದೆ.
ಆದರ್ಶಧಾಮ ಹಾಗೂ ಶ್ರೀರಾಮ ಥೀಮ್ ಪಾರ್ಕ್ ನಿರ್ಮಾಣಕ್ಕೆ ದೇಣಿಗೆ ಸಲ್ಲಿಸಿದ ಮೂಲತಃ ಅಂಕೋಲಾದ, ಪ್ರಸ್ತುತ ಮುಂಬೈನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಶಶಿಕಾಂತ ರಾಯಪ್ಪ ಶಾನಭಾಗ ಅವರನ್ನು ಶ್ರೀಗಳು ಆಶೀರ್ವದಿಸಿದರು.
ಆ. 5ರಿಂದ ಸೆಪ್ಟೆಂಬರ್ 26ರವರೆಗೆ ನಡೆಯಲಿರುವ ಚಾತುರ್ಮಾಸ್ಯದ ಅವಧಿಯಲ್ಲಿ ನಾಗಪಂಚಮಿ, ಋಗ್ ಉಪಾಕರ್ಮ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಅನಂತ ಚತುರ್ದಶಿ ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳು ಜರುಗಲಿದ್ದು, ಪ್ರತಿ ಏಕಾದಶಿಯಂದು ಶ್ರೀಗುರುಗಳಿಂದ ತಪ್ತಮುದ್ರಾ ಧಾರಣೆಯೂ ನೆರವೇರಲಿದೆ.
ಇದರೊಂದಿಗೆ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ನೇತ್ರ ತಪಾಸಣೆ ಶಿಬಿರ ಸೇರಿದಂತೆ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳು ಹಾಗೂ ದೇಶದ ಖ್ಯಾತ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಯಲಿದೆ. ಎಲ್ಲ ಕಾರ್ಯಕ್ರಮಗಳ ನೇರಪ್ರಸಾರವನ್ನು ಮಠದ ಅಧಿಕೃತ ಜಾಲತಾಣ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಮಾಡಲಾಗುವುದು ಎಂದು ಮಠದ ಸಾಮಾಜಿಕ ಮಾಧ್ಯಮ ವಿಭಾಗ ತಿಳಿಸಿದೆ.
ಕಾರ್ಯಕ್ರಮದಲ್ಲಿ ಜೀವೋತ್ತಮ ವಿದ್ಯಾಪೀಠದ ವಿದ್ಯಾರ್ಥಿಗಳು, ವೈದಿಕರು, ಕರ್ನಾಟಕ, ಗೋವಾ, ಕೇರಳ ಹಾಗೂ ಮಹಾರಾಷ್ಟ್ರದ ವಿವಿಧ ದೇವಾಲಯಗಳ ಆಡಳಿತ ಮಂಡಳಿಯ ಸದಸ್ಯರು, ಪರ್ತಗಾಳಿ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಅನಿಲ ಪೈ ಹಾಗೂ ಸದಸ್ಯರು, ಗೋವಾ ಮಾಜಿ ಸಿಎಂ ದಿಗಂಬರ ಕಾಮತ, ಶ್ರೀ ಗೋಕರ್ಣ ಮಠ ಸೆಂಟ್ರಲ್ ಕಮಿಟಿ ಅಧ್ಯಕ್ಷ ಶ್ರೀನಿವಾಸ ದೆಂಪೊ, ಉಪಾಧ್ಯಕ್ಷ ಆರ್.ಆರ್. ಕಾಮತ, ವಿವಿಧ ಸಮಿತಿಗಳ ಸದಸ್ಯರು, ಗಣ್ಯರು ಹಾಗೂ ದೇಶ-ವಿದೇಶಗಳಿಂದ ಆಗಮಿಸಿದ್ದ ಸಹಸ್ರಾರು ಶಿಷ್ಯರು ಮತ್ತು ಭಕ್ತರು ಪಾಲ್ಗೊಂಡಿದ್ದರು.