ಧರ್ಮದರ್ಶಿಗಳ ನೇಮಕ ಪ್ರಕ್ರಿಯೆ ಆರಂಭ

ಶಿರಸಿ ಮಾರಿಕಾಂಬಾ ದೇವಾಲಯ
ಶಿರಸಿ ಮಾರಿಕಾಂಬಾ ದೇವಾಲಯ
Published on
ಶಿರಸಿ: ರಾಜ್ಯದ ಶಕ್ತಿ ಪೀಠಗಳಲ್ಲಿ ಒಂದಾದ ಶಿರಸಿ ಮಾರಿಕಾಂಬಾ ದೇವಸ್ಥಾನದ ಹಾಲಿ ಆಡಳಿತ ಮಂಡಳಿ ಅವಧಿ ಜಾತ್ರೆಯೊಂದಿಗೇ ಮುಕ್ತಾಯಗೊಂಡಿದೆ. ಹೊಸದಾಗಿ ಐವರು ಧರ್ಮದರ್ಶಿಗಳ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ನೂರಕ್ಕೂ ಅಧಿಕ ಜನ ಆಸಕ್ತಿ ತೋರಿದ್ದಾರೆ.
ಎರಡು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಫೆ. 24ರಿಂದ 9 ದಿನ ಲಕ್ಷಾಂತರ ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಇದರ ಬೆನ್ನಲ್ಲೇ ಹೊಸ ಮಂಡಳಿ ರಚನೆಯ ಪ್ರಕಟಣೆ ಹೊರಬಿದ್ದಿದೆ.
ನಿವೃತ್ತ ವಲಯಾರಣ್ಯಾಧಿಕಾರಿ ಆರ್.ಜಿ. ನಾಯ್ಕ ಅಧ್ಯಕ್ಷರಾಗಿ ಹಾಗೂ ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಸುದೇಶ ಜೋಗಳೇಕರ್ ಉಪಾಧ್ಯಕ್ಷರಾಗಿ ಇದುವರೆಗೂ ಕಾರ್ಯ ನಿರ್ವಹಿಸಿದ್ದರು. ಈ ಆಡಳಿತ ಮಂಡಳಿ ಯಶಸ್ವಿಯಾಗಿ ಮೂರು ಜಾತ್ರೆಗಳನ್ನು ಪೂರೈಸಿರುವ ಜೊತೆ ಹಲವಾರು ಗಮನಾರ್ಹ ಅಭಿವೃದ್ದಿ ಕಾರ್ಯವನ್ನೂ ದೇವಸ್ಥಾನದಲ್ಲಿ ಕೈಗೊಂಡಿತ್ತು. ಹಾಲಿ ಧರ್ಮದರ್ಶಿ ಮಂಡಳದ ಸದಸ್ಯರ ಐದು ವರ್ಷಗಳ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈಗ ಹೊಸ ಸದಸ್ಯರ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

ಯಾರು ಅರ್ಹರು ?

ಮುಂದಿನ ಐದು ವರ್ಷಗಳ ಅವಧಿಗೆ ಐದು ಜನರ ಧರ್ಮದರ್ಶಿ ಮಂಡಳ ರಚಿಸಲು ಶಿರಸಿ ಸೀಮೆಯ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅದಕ್ಕಾಗಿ ಈ ಹಿಂದಿನಂತೆ ಶಿರಸಿ ಸೀಮೆ ವ್ಯಾಪ್ತಿಯು 46 ಹಳ್ಳಿಗಳ ಸಮೂಹವಾಗಿದ್ದು, ಅವುಗಳ ಯಾದಿಯನ್ನು ದೇವಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಮಾಹಿತಿಗೆ ದೇವಾಲಯದ ಕಚೇರಿ ಸಮಯದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೂಲಕ ಪಡೆಯಬಹುದು ಎಂದು ತಿಳಿಸಲಾಗಿದೆ.
ದೇವಾಲಯದ ಧರ್ಮದರ್ಶಿ ಮಂಡಳದ ಸದಸ್ಯರಾಗಲು ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದ್ದು, ಏಪ್ರಿಲ್ 11ರವರೆಗೆ ಸಲ್ಲಿಸಬಹುದಾಗಿದೆ. ಆಸಕ್ತರು ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ಹಾಗೂ ಸಂಜೆ 5ರಿಂದ ರಾತ್ರಿ 9ರವರೆಗೆ ದೇವಾಲಯದ ಕಚೇರಿಯಲ್ಲಿ ತಮ್ಮ ಹೆಸರಿನಲ್ಲಿ ಅರ್ಜಿ ನಮೂನೆ ಪಡೆಯಬೇಕು. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಏಪ್ರಿಲ್ 11ರವರೆಗೆ ಅವಕಾಶವಿದೆ. ಮಾರನೇ ದಿನ ಅರ್ಜಿದಾರರ ಯಾದಿಯನ್ನು ದೇವಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುತ್ತದೆ. ಅರ್ಜಿ ಹಿಂಪಡೆಯಲು ಅಥವಾ ಅಧಿಕೃತ ದಾಖಲೆ ಸಹಿತ ತಕರಾರು ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈಗಾಗಲೇ ದೇವಾಲಯದ ಧರ್ಮದರ್ಶಿಯಾಗಲು ನೂರಕ್ಕೂ ಅಧಿಕ ಜನರು ಅರ್ಜಿ ಫಾರಂಗಳನ್ನು ದೇವಾಲಯದಿಂದ ಪಡೆದಿದ್ದಾರೆ. ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಲು ನಗರ ಹಾಗೂ ಗ್ರಾಮೀಣ ಪ್ರದೇಶದ ಸೀಮಿತ ನಿಗದಿತ ಹಳ್ಳಿಗಳ ಆಸಕ್ತರಿಗೆ ಮಾತ್ರ ಅವಕಾಶವಿದೆ.
ಶ್ರೀ ಮಾರಿಕಾಂಬಾ ದೇವಾಲಯದ ಆಡಳಿತವು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರ ಸುಪರ್ದಿಗೆ ಒಳಪಟ್ಟಿದೆ. ದೇವಾಲಯದ ನೂತನ ಧರ್ಮದರ್ಶಿ ಮಂಡಳದ ಸದಸ್ಯರಾಗಲು ಅರ್ಜಿ ಸಲ್ಲಿಸಿದ ಅರ್ಹ ಅರ್ಜಿದಾರರ ಅರ್ಜಿ ಪರಿಶೀಲಿಸಿ ದೇವಾಲಯದ ಘಟನಾವಳಿ ಪ್ರಕಾರ ತೀರ್ಮಾನ ಕೈಗೊಂಡು ಐದು ಮಂದಿ ಸದಸ್ಯರನ್ನು ನೇಮಕ ಮಾಡಲಿದ್ದಾರೆ. ಆ ಬಳಿಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಗಳು ನಡೆಯಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net