ಕ್ರಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮದ್ ಮೊಹಿಸೀನ್

ಮೆಡಿಕಲ್‌ ಎಜುಕೇಶನ್‌ ಕಾರ್ಯದರ್ಶಿ ಮೊಹಮದ್ ಮೊಹಿಸೀನ್  ರೋಗಿಗಳ ಜತೆ ಮಾತುಕತೆ ನಡೆಸಿದರು.
ಮೆಡಿಕಲ್‌ ಎಜುಕೇಶನ್‌ ಕಾರ್ಯದರ್ಶಿ ಮೊಹಮದ್ ಮೊಹಿಸೀನ್ ರೋಗಿಗಳ ಜತೆ ಮಾತುಕತೆ ನಡೆಸಿದರು.
Published on
ಕಾರವಾರ: ರೋಗಿಗಳ ಚಿಕಿತ್ಸೆ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕ್ರಿಮ್ಸ್ನ ಡೀನ್ ಮತ್ತು ಡೈರೆಕ್ಟರ್ ಡಾ.ಪೂರ್ಣಿಮಾ ಅವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮದ್ ಮೊಹಿಸೀನ್ ಸೂಚನೆ ನೀಡಿದರು.
ಕ್ರಿಮ್ಸ್ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ರೋಗಿಗಳ ಜತೆ ಚರ್ಚಿಸಿದರು. ನಂತರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಉತ್ತಮ ರೀತಿಯ ಆರೈಕೆ ಮತ್ತು ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿದ್ದರೂ ಖಾಸಗಿ ಆಸ್ಪತ್ರೆಗಳಿಗೆ `ರೆಫರಲ್' ಮಾಡುವುದು ಕಂಡು ಬಂದಲ್ಲಿ ಅಂತಹ ವೈದ್ಯರನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು.
ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಅದ್ಯತೆ ನೀಡಿ. ವೈದ್ಯಕೀಯ ತ್ಯಾಜ್ಯಗಳನ್ನು ಸಮರ್ಪಕ ರೀತಿಯಲ್ಲಿ ನಿಗತ ಅವಽಯೊಳಗೆ ವಿಲೇವಾರಿ ಮಾಡಿ. ಪ್ರಸ್ತುತ ಹೊಸ ಕಟ್ಟಡದಲ್ಲಿ ಕೆಲವು ವಿಭಾಗಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ವಿಭಾಗಗಳನ್ನು ಸ್ಥಳಾಂತರಿಸಲು ಕ್ರಮ ವಹಿಸಿ ಎಂದರು.
ಖರೀದಿಸಿದ ಹಾಗೂ ಮುಂದೆ ಖರೀದಿಸುವ ವೈದ್ಯಕೀಯ ಉಪಕರಣಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಅತ್ಯಾಧುನಿಕ ಮತ್ತು ದೀರ್ಘ ಕಾಲ ಬಳಕೆಗೆ ಯೋಗ್ಯವಾಗಬಹುದಾದ ಉಪಕರಣಗಳನ್ನು ಸರ್ಕಾರದ ನಿಗದಿತ ಮಾನದಂಡದಲ್ಲಿ ಇರುವ ಬಗ್ಗೆ ಪರಿಶೀಲಿಸಿ, ಖರೀದಿಸಿ ಎಂದರು.
ಗುಣಮಟ್ಟದ ಚಿಕಿತ್ಸೆ ಹಾಗೂ ಶುಶ್ರೂಶೆ ನೀಡಿ, ಕ್ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುವ ಹೊರ ಮತ್ತು ಒಳರೋಗಿಗಳ ಸಂಖ್ಯೆ ಹೆಚ್ಚಳವಾಗಬೇಕು. ರೋಗಿಗಳಿಂದ ದೂರುಗಳು ಬಾರದಂತೆ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಡಾ.ದಿಲೀಶ್ ಶಶಿ, ಕ್ರಿಮ್ಸ್ ನ ಡೀನ್ ಡಾ.ಪೂರ್ಣಿಮಾ, ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರ ಆನಂದಸಾ ಹಬೀಬ್ ಹಾಗೂ ಕ್ರಿಮ್ಸ್ ನ ಎಲ್ಲ ವೈದ್ಯಕೀಯ ವಿಭಾಗಗಳ ಮುಖ್ಯಸ್ಥರು ಇದ್ದರು.
ದರ ಇನ್ನಷ್ಟು ಹೆಚ್ಚಳ..?
ಆಸ್ಪತ್ರೆಯ ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲದ ಕ್ರೂಢೀಕರಣಕ್ಕೆ ಸರ್ಕಾರದ ಮಾರ್ಗಸೂಚಿಯಂತೆ ದರಗಳನ್ನು ಪರಿಷ್ಕರಣೆ ಮಾಡುವಂತೆ ಇಲಾಖೆಯ ಕಾರ್ಯದರ್ಶಿ ಮೊಹಮದ್ ಮೊಹಿಸೀನ್ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net