Separate district ಪ್ರತ್ಯೇಕ ಜಿಲ್ಲಾ ಹೋರಾಟದಲ್ಲಿ ರಾಜಕೀಯ ಸಲ್ಲ

ಶಿರಸಿ ಪ್ರತ್ಯೇಕ ಜಿಲ್ಲೆ (Separate district)ಹೋರಾಟದ ಕುರಿತು ಶಿರಸಿಯಲ್ಲಿ ಸಭೆ ನಡೆಯಿತು.
ಶಿರಸಿ ಪ್ರತ್ಯೇಕ ಜಿಲ್ಲೆ (Separate district)ಹೋರಾಟದ ಕುರಿತು ಶಿರಸಿಯಲ್ಲಿ ಸಭೆ ನಡೆಯಿತು.
Published on
ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲಾ Separate district ಹೋರಾಟದಲ್ಲಿ ಯಾವುದೇ ರಾಜಕೀಯ ಇರಬಾರದು. ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು. ಪಕ್ಷಭೇದ ಬಿಟ್ಟು ಒಮ್ಮತದ ಹೋರಾಟದಿಂದ ಗೆಲುವು ಸಾಧ್ಯ ಎಂಬ ನಿರ್ಣಯವನ್ನು ನಗರದ ನೆಮ್ಮದಿ ರಂಗಧಾಮದಲ್ಲಿ ಗುರುವಾರ ಆಯೋಜಿಸಿದ್ದ ‘ಶಿರಸಿ ಜಿಲ್ಲೆಗಾಗಿ ನಾವು’ ಸಮಾಲೋಚನಾ ಸಭೆಯಲ್ಲಿ ಕೈಗೊಳ್ಳಲಾಯಿತು.
ಸಾಮಾಜಿಕ ಕಾರ್ಯಕರ್ತ ವೆಂಕಟೇಶ ಹೆಗಡೆ ಹೊಸಬಾಳೆ ಮಾತನಾಡಿ, ಶಿರಸಿ ಜಿಲ್ಲೆ ಅತಿ ಅವಶ್ಯಕವಾಗಿದೆ. ಜಿಲ್ಲಾ ಹೋರಾಟದ ವಿಚಾರದಲ್ಲಿ ರಾಜಕೀಯ ಬೇಡ. ರಾಜಕೀಯದ ಹೊರತಾಗಿ ಹೋರಾಟ ಮಾಡಬೇಕಿದೆ.
ಪಕ್ಷಾತೀತವಾದ ಸಂಘಟನೆ ರಚನೆಯಾಗಬೇಕು. ಆ ಸಂಘಟನೆಯಲ್ಲಿ ಎಲ್ಲ ಪಕ್ಷಗಳ ಶಾಸಕರು, ಜನಪ್ರತಿನಿಧಿಗಳು ಇರಬೇಕು. ಚರ್ಚೆಗಳು ನಡೆಯಬೇಕು. ಜಿಲ್ಲಾ ಹೋರಾಟದ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ, ಒಮ್ಮತದ ನಿರ್ಧಾರಕ್ಕೆ ಬರಬೇಕು. ನಾವೆಲ್ಲರೂ ಒಟ್ಟಾಗಿ ಸರ್ಕಾರದ ಗಮನಕ್ಕೆ ತರಬೇಕು ಎಂದರು.
ಕೃಷ್ಣಮೂರ್ತಿ ಪನ್ನೆ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಏಕೀಕರಣದ ಸಮಯದಲ್ಲೇ ಶಿರಸಿ ಜಿಲ್ಲೆಯನ್ನಾಗಿ ಮಾಡುವ ಅವಕಾಶ ವಿದ್ದರೂ ಸಹ ಜಿಲ್ಲೆಯನ್ನಾಗಿ ಘೋಷಣೆ ಮಾಡಲಿಲ್ಲ. 1956ರಲ್ಲಿ ಕೊಡಗು ಜಿಲ್ಲೆ ಮಾಡಲಾಗಿದೆ. ಅತೀ ಕಡಿಮೆ ಜನಸಂಖ್ಯೆ ಇದ್ದರೂ ಕೊಡಗನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗಿದೆ.
ಶಿರಸಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಎಲ್ಲ ಅರ್ಹತೆಗಳಿವೆ. ಹಲವು ಸಂಘಟನೆಗಳು ಶಿರಸಿ ಜಿಲ್ಲೆಗೆ ವಿರೋಧ ವ್ಯಕ್ತಪಡಿಸಿದ್ದರು. ಈಗಾಗಲೇ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಯಾವುದೇ ಹೊಸ ತಾಲೂಕು ಅಥವಾ ಜಿಲ್ಲೆಯ ರಚನೆಯ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ. ಶಾಸಕ ಭೀಮಣ್ಣ ನಾಯ್ಕ ಸಹ ಶಿರಸಿ ಜಿಲ್ಲಾ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಧಿವೇಶನದ ಸಂದರ್ಭದಲ್ಲಿ ಶಿರಸಿ ಜಿಲ್ಲೆಯ ಘೋಷಣೆ ಬಗ್ಗೆ ಒತ್ತಡ ಹಾಕಬೇಕಿದೆ ಎಂದರು.
ಪ್ರಭಾಕರ ಜೋಗಳೇಕರ ಮಾತನಾಡಿ, ಸೋಂದಾ ಅರಸರು ಹಾಗೂ ಕದಂಬ ರಾಜರು ಆಳಿದ ಪುಣ್ಯ ಭೂಮಿ ಶಿರಸಿ. ಬ್ರಿಟಿಷ್ ಕಾಲದಲ್ಲೇ ಶಿರಸಿ ಜಿಲ್ಲೆಯಾಗಬೇಕಿತ್ತು. ಶಿರಸಿಯನ್ನು ಕೇಂದ್ರವನ್ನಾಗಿಟ್ಟುಕೊಂಡು ಕದಂಬ ಜಿಲ್ಲೆಯೆಂದು ಘೋಷಣೆಯಾಗಲಿ ಎಂದರು.
ಆರ್.ವಿ. ಹೆಗಡೆ ಬಾಳೇಗದ್ದೆ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯನ್ನು ಒಡೆಯದೇ ಶಿರಸಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು. ಸಾಕಷ್ಟು ವೈಶಿಷ್ಟ್ಯವನ್ನು ನಮ್ಮ ಜಿಲ್ಲೆ ಹೊಂದಿದೆ ಎಂದರು.
ರಾಜು ಉಗ್ರಾಣಕರ್ ಮಾತನಾಡಿ, ಶಿರಸಿ ಜಿಲ್ಲಾ ಹೋರಾಟದಲ್ಲಿ ಉಳಿದ ತಾಲೂಕುಗಳೊಂದಿಗೆ ಸಮನ್ವಯ ಸಾಧಿಸುವಲ್ಲಿ ಹಿನ್ನೆಡೆ ಯಾದಂತಾಗಿದೆ. ಹಾಗಾಗಿ ಉಳಿದ ತಾಲೂಕುಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ ಎಂದರು.
ಚಿದಾನಂದ ಹರಿಜನ ಮುಂಡಗೋಡ ಮಾತನಾಡಿ, ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಎಲ್ಲರೂ ಧ್ವನಿಯೆತ್ತಬೇಕಿದೆ. ಗಟ್ಟಿ ಧ್ವನಿಯಾಗಿ ನಿಲ್ಲಬೇಕು. ಶಿರಸಿ, ಸಿದ್ದಾಪುರ, ಯಲ್ಲಾಪುರ ಮುಂಡಗೋಡ, ಹಳಿಯಾಳ, ದಾಂಡೇಲಿ ಹಾಗೂ ಜೊಯಿಡಾ ತಾಲೂಕಿನ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ನಮ್ಮ ಹೋರಾಟದ ಬಗ್ಗೆ ತಿಳಿಸಬೇಕು ಎಂದರು.
ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ, ರವಿ ಹೆಗಡೆ ಗಡಿಹಳ್ಳಿ ಮಾತನಾಡಿದರು. ಅನಿಲ ಕರಿ, ಶಿವಾನಂದ ದೀಕ್ಷಿತ, ಮಂಜುನಾಥ ಹೆಗಡೆ ನೇರ್ಲದ್ದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net