ಶಿರಸಿ: ಫೆ. 24ರಿಂದ ಆರಂಭಗೊಳ್ಳಲಿರುವ ಶ್ರೀ ಮಾರಿಕಾಂಬಾದೇವಿ Sri Marikambadevi ಜಾತ್ರೆಯಲ್ಲಿ ಯಾವುದೇ ಅವಘಡಕ್ಕೆ ಆಸ್ಪದ ನೀಡದಂತೆ ಪೊಲೀಸ್ ಇಲಾಖೆ ಸರ್ಪಗಾವಲು ಹಾಕಲು ನಿರ್ಧರಿಸಿದೆ. ಜಾತ್ರಾ ಜನಸಂದಣಿಯಲ್ಲಿ ತಮ್ಮ ಕರಾಮತ್ತು ತೋರಿಸುವ ಕಳ್ಳ ಕಾಕರ ಮೇಲೆ ಹದ್ದಿನ ಕಣ್ಣಿಡಲು ವಿಶೇಷ ಕಾರ್ಯತಂತ್ರ ರೂಪಿಸಿಕೊಂಡಿದೆ.
ನಗರದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡ ಎಸ್‌ಪಿ ದೀಪನ್ ಎಂ., ಪಿಕ್‌ಪಾಕೆಟ್, ಕಳ್ಳತನದಂತಹ ಕೃತ್ಯಗಳ ನಿಯಂತ್ರಣಕ್ಕೆ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದೇವೆ. ಈಗಾಗಲೇ ಹೊರ ಜಿಲ್ಲೆಯಿಂದಲೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗುತ್ತಿದೆ.
ಜಾತ್ರಾ ಪ್ರದೇಶಗಳು ಮತ್ತು ಮನರಂಜನಾ ಸ್ಥಳಗಳಲ್ಲಿ 100ಕ್ಕೂ ಅಧಿಕ ಕಡೆಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗುತ್ತಿದೆ.
ಅಪರಾಧ ಹಿನ್ನೆಲೆಯ ವ್ಯಕ್ತಿಗಳ ಮುಖ ಚಹರೆಯನ್ನು ಈಗಾಗಲೇ ಕಂಪ್ಯೂಟರ್‌ಗಳಿಗೆ ಅಳವಡಿಸಲಾಗಿದೆ. ಹೀಗಾಗಿ, ಸಿಸಿ ಟಿವಿಗಳು ಅಂತಹ ವ್ಯಕ್ತಿಗಳು ಜಾತ್ರಾ ಪೇಟೆಯಲ್ಲಿ ಸಂಚರಿಸಿದ ತಕ್ಷಣ ಪತ್ತೆ ಹಚ್ಚಿ ಕಂಟ್ರೋಲ್ ಕೊಠಡಿಗೆ ಮಾಹಿತಿ ರವಾನಿಸಲಿದೆ. ನಾವು ಅಂಥವರ ಚಲನವಲನದ ಬಗ್ಗೆ ತೀವ್ರ ನಿಗಾ ಇಡಲಿದ್ದೇವೆ ಎಂದರು.
ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಅಕ್ಕ ವಿಶೇಷ ರಕ್ಷಣಾ ತಂಡ ರಚಿಸಲಾಗಿದೆ. ಹಿರಿಯ ನಾಗರಿಕರ ರಕ್ಷಣೆಗಾಗಿ ಆಸರೆ ಪಡೆ ರಚಿಸಲಾಗಿದೆ. ಜಾತ್ರೆಗೆ ಆಗಮಿಸುವ ಭಕ್ತರು ಅತ್ಯಂತ ಜಾಗರೂಕರಾಗಿರಬೇಕು.
ಧರಿಸಿರುವ ಆಭರಣಗಳು ಹಾಗೂ ಜತೆಯಲ್ಲಿರುವ ಮಕ್ಕಳು, ವೃದ್ಧರು ಸುರಕ್ಷಿತವಾಗಿ ಮನೆಗೆ ತಲುವ ಬಗ್ಗೆ ಸಾರ್ವಜನಿಕರೂ ನಿಗಾ ವಹಿಸಬೇಕು ಎಂದರು.ಡಿವೈಎಸ್‌ಪಿ ಗೀತಾ ಪಾಟೀಲ ಇದ್ದರು.
ಈ ಬಾರಿಯ ವಿಶೇಷತೆಗಳು
*ಬಂದೋಬಸ್ತ್‌ನಲ್ಲಿ 3 ಡಿವೈಎಸ್ಪಿ, 10 ಸಿಪಿಐ, 74 ಪಿಎಸ್‌ಐ ಇದ್ದಾರೆ.
*110 ಎಸ್‌ಐ, 754 ಪೊಲೀಸ್ ಸಿಬ್ಬಂದಿ, 200 ಹೋಂ ಗಾರ್ಡ್‌ಗಳು
*ಮಂಗಳೂರು, ಕುಮಟಾ, ಸಾಗರ ಸಿದ್ದಾಪುರದಿಂದ ಬರುವವರಿಗೆ 7 ಕಡೆ ಕುಮಟಾ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ
*ಶಿವಮೊಗ್ಗ, ಶಿಕಾರಿಪುರ ಸೊರಬದ ಕಡೆಯಿಂದ ಬರುವವರಿಗೆ 5 ಕಡೆಗಳಲ್ಲಿ ಪಾರ್ಕಿಂಗ್
*ಹಾವೇರಿ, ಹುಬ್ಬಳ್ಳಿ, ಯಲ್ಲಾಪುರ ಕಡೆಯಿಂದ ಆಗಮಿಸುವವರಿಗೆ 13 ಕಡೆ ಪಾರ್ಕಿಂಗ್
*ಜಾತ್ರಾ ಪೇಟೆಯ 20ಕ್ಕೂ ಅಧಿಕ ಕಡೆ ಶೌಚಗೃಹ, ಕುಡಿಯುವ ನೀರಿನ ಸೌಲಭ್ಯ.
*ಜನಸಂದಣಿ ಇರುವಲ್ಲಿ ಪೊಲೀಸ್ ವಾಚ್‌ಟಾವರ್, ಅಂತರ್ ಜಿಲ್ಲಾ ಅಪರಾಧ ನಿಗೃಹ ತಂಡದಿಂದ ಸತತ ನಿಗಾ
*ನೂಕು ನುಗ್ಗಲು, ಕಾಲ್ತುಳಿತ ತಪ್ಪಿಸಲು ವಿಶೇಷ ಕಮಾಂಡೋ ಪಡೆ, ಕ್ಷಿಪ್ರ ಕಾರ್ಯಾಚರಣೆ ತಂಡ ರಚನೆ.
* ಕಾಣೆಯಾದ ಮಕ್ಕಳು, ಹಿರಿಯ ನಾಗರಿಕರ ಪತ್ತೆಗೆ 5 ಕೇಂದ್ರಗಳ ಸ್ಥಾಪನೆ.
*ನಗರಕ್ಕೆ ಆಗಮನ, ನಿರ್ಗಮನ ದ್ವಾರಗಳಲ್ಲಿ ಪೊಲೀಸ್ ಪಡೆ, ಸಂಶಯಾಸ್ಪದ ವ್ಯಕ್ತಿಗಳ ತನಿಖೆ.
*ರಥೋತ್ಸವ ಹಾಗೂ ಮುಕ್ತಾಯದ ದಿನ ವಿಶೇಷ ಡ್ರೋನ್ ಮೂಲಕ ತೀವ್ರ ನಿಗಾ.