ಟವರ್‌ಗಳ ವೈಫಲ್ಯಕ್ಕೆ ಆಕ್ರೋಶ TOWER

ನಾಲ್ಕಾರು ತಿಂಗಳಿಂದ ನಿರಂತರವಾಗಿ ತಾಲೂಕಿನ ಬಾಡ ಗುಡೇಅಂಗಡಿಯಲ್ಲಿರುವ ಬಿಎಸ್‌ಎನ್‌ಎಲ್ ಹಾಗೂ ಜಿಯೊ ಮೊಬೈಲ್ ಸಿಗ್ನಲ್ ಟವರ್‌ಗಳ ಸೇವಾ ವೈಫಲ್ಯತೆಯಿಂದ ಕೆವೈಸಿ ಒಟಿಪಿಗಳೂ ಬಾರದಂತಾಗಿ ಹೈರಾಣಾಗಿರುವ ಸುತ್ತಮುತ್ತಲಿನ ಸಾವಿರಾರು ಕುಟುಂಬಗಳು.
People Gathered in frount of Mobile Tower
ಕುಮಟಾ ತಾಲೂಕಿನ ಬಾಡದ ಗುಡೇಅಂಗಡಿ ಮೊಬೈಲ್ ಟವರ್ ಬಳಿ ಸಾರ್ವಜನಿಕರು ಜಮಾಯಿಸಿರುವುದು. ಜಗನ್ನಾಥ ನಾಯ್ಕ, ವಸಂತ ನಾಯ್ಕ, ರತ್ನಾಕರ ನಾಯ್ಕ, ಕೃಷ್ಣ ಭಟ್, ನಾರಾಯಣ ಭಟ್ ಇತರರು ಇದ್ದರು.
Published on

ಕುಮಟಾ: ಕಳೆದ ನಾಲ್ಕಾರು ತಿಂಗಳಿಂದ ನಿರಂತರವಾಗಿ ತಾಲೂಕಿನ ಬಾಡ ಗುಡೇಅಂಗಡಿಯಲ್ಲಿರುವ ಬಿಎಸ್‌ಎನ್‌ಎಲ್ ಹಾಗೂ ಜಿಯೊ ಮೊಬೈಲ್ ಸಿಗ್ನಲ್ ಟವರ್‌ಗಳ ಸೇವಾ ವೈಫಲ್ಯತೆಯಿಂದ ಕೆವೈಸಿ ಒಟಿಪಿಗಳೂ ಬಾರದಂತಾಗಿ ಹೈರಾಣಾಗಿರುವ ಸುತ್ತಮುತ್ತಲಿನ ಸಾವಿರಾರು ಕುಟುಂಬಗಳು ಹೋರಾಟದ ಮಾರ್ಗಕ್ಕೆ ಅಣಿಯಾಗಿದ್ದಾರೆ.

ಗುಡೇಅಂಗಡಿಯ ಶ್ರೀ ಕಾಂಚಿಕಾಂಬಾ ಮಂದಿರದ ಬಳಿ ಕಾರ್ಯಾಚರಿಸುತ್ತಿರುವ ಮೊಬೈಲ್ ಟಾವರ್‌ನಿಂದ ಬಿಎಸ್‌ಎನ್‌ಎಲ್ ಹಾಗೂ ಜಿಯೋ ನೆಟ್ವರ್ಕ್ ಸೇವೆ ಹಲವು ವರ್ಷಗಳಿಂದ ಚಾಲ್ತಿಯಲ್ಲಿತ್ತು. ಸುಮಾರು ಒಂದು ವರ್ಷದಿಂದ ಇಲ್ಲಿನ ನೆಟ್‌ವರ್ಕ ಸೇವೆ ಸರಿಯಾಗಿಲ್ಲ. ಕಳೆದ ನಾಲ್ಕು ತಿಂಗಳಿಂದ ಸಂಪೂರ್ಣವಾಗಿ ಎರಡೂ ನೆಟ್‌ವರ್ಕಗಳು ಕುಂಠಿತಗೊಂಡಿದ್ದು, ಕೇಳಿದರೆ ಅಂಟೆನಾ ದುರಸ್ತಿಯಾಗಬೇಕು ಎನ್ನುತ್ತಾರೆ. ಆದರೆ ಸರಿಪಡಿಸುತ್ತಿಲ್ಲ. ಜನರ ದೂರಿಗೆ ಬಿಎಸ್‌ಎನ್‌ಎಲ್‌ನವರಾಗಲೀ, ಜಿಯೋದವರಾಗಲೀ ಎಳ್ಳಿನಷ್ಟೂ ಕಾಳಜಿತೋರುತ್ತಿಲ್ಲ. ಮೊಬೈಲ್‌ಗೆ ಹಾಕಿದ ಕರೆನ್ಸಿಗಳು ವ್ಯರ್ಥವಾಗುತ್ತಿವೆ. ಯಾರೊಂದಿಗೂ ಸಮರ್ಪಕವಾಗಿ ಮಾತನಾಡಲಾಗುತ್ತಿಲ್ಲ. ಈಗೀಗ ನೆಟ್‌ವರ್ಕ್ ಕಂಪನಿಯ ಅಧಿಕಾರಿಗಳು ಬೇರೆಯದಕ್ಕೆ ಪೋರ್ಟ ಮಾಡಿಕೊಳ್ಳಿ ಎಂದು ಉಡಾೆಯ ಮಾತನಾಡುತ್ತಿದ್ದಾರೆ. ಹೀಗಾಗಿ ಭಾನುವಾರ ಗುಡೇಅಂಗಡಿಯ ಮೊಬೈಲ್ ಟಾವರ್ ಬಳಿ ಜಮಾಯಿಸಿ ಧಿಕ್ಕಾರ ಕೂಗಿದರಲ್ಲದೇ ತೀವ್ರ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸಿದರು.

ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ವಸಂತ ನಾಯ್ಕ ಬಾಡ, ಇಲ್ಲಿನ ಟವರ್ ನಾಲ್ಕೈದು ತಿಂಗಳಿಂದ ನಿರ್ವಹಣೆ ಇಲ್ಲ. ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಿಲ್ಲ. ಜಿಯೋದವರು ನಿರ್ವಹಣೆಗೆ ಸಿದ್ಧರಿಲ್ಲ, ಶೀಘ್ರವೇ ಎಲ್ಲರೂ ಸೇರಿ ತಾಲೂಕಿನಾದ್ಯಂತ ಹೋರಾಟ ಮಾಡಿ, ಜಿಯೋ ಹಾಗೂ ಬಿಎಸ್‌ಎನ್‌ಎಲ್ ವಿರುದ್ಧ ಧಿಕ್ಕಾರ ಕೂಗುತ್ತೇವೆ ಎಂದಿದ್ದಾರೆ.

ಜಿಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಮಾಜಿ ಸದಸ್ಯ ರತ್ನಾಕರ ನಾಯ್ಕ ಮಾತನಾಡಿ, ಕಳೆದ ನಾಲ್ಕೈದು ತಿಂಗಳಿಂದ ಇಲ್ಲಿ ಬಿಎಸ್‌ಎನ್‌ಎಲ್ ಅಥವಾ ಜಿಯೋ ಸಿಮ್‌ಗೆ ಕರೆನ್ಸಿ ಹಾಕುವುದು ಅವರಿಗೆ ದೇಣಿಗೆ ಕೊಟ್ಟಂತಾಗಿದೆ. ಜನ ಅವರಲ್ಲಿ ಸಮಸ್ಯೆ ಹೇಳಿಕೊಂಡರೆ ಪೋರ್ಟ ಆಗಲು ಹೇಳುತ್ತಿರುವುದು ಯಾಕೆ? ಯಾರಿಗೇ ಕರೆ ಮಾಡಿದರೆ ಒಂದು ಸೈಡ್ ಪ್ರತಿಕ್ರಿಯೆ, ಇಲ್ಲವೇ ಸಂಪರ್ಕವೇ ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಭೇಟಿಯಾಗಿ ಮನವಿ ಕೊಡುತ್ತೇವೆ. ನೆಟ್‌ವರ್ಕನವರು ಜನರ ಹಣವನ್ನು ತೆಗೆದುಕೊಂಡು ಕನಿಷ್ಟ ಸೇವೆ ನೀಡದೇ ಇರುವುದು ನಮಗೆ ಸಮಸ್ಯೆಯಾಗಿದೆ ಎಂದರು.

ಸ್ಥಳೀಯ ಕೃಷ್ಣ ಭಟ್ ಮಾತನಾಡಿ, ನಾವು ರಿಚಾರ್ಜ್ ಮಾಡಲು ಒಂದು ದಿನ ತಡವಾದರೆ ಸರ್ವಿಸ್ ಕಟ್ ಮಾಡುತ್ತಾರೆ. ನಾಲ್ಕೈದು ತಿಂಗಳಿಂದ ಟವರ್ ಸರ್ವಿಸ್ ಸರಿಯಿಲ್ಲ. ಆದ್ದರಿಂದ ಗ್ರಾಹಕರಿಗೆ ಅವರ ನಾಲ್ಕೈದು ತಿಂಗಳ ಸೇವಾ ಚ್ಯುತಿಯ ಹಣ ಭರಣ ಮಾಡಿಕೊಡಬೇಕು. ಇಲ್ಲದಿದ್ದರೆ ಗ್ರಾಹಕರ ರಕ್ಷಣಾ ವೇದಿಕೆ ಮೂಲಕ ಹೋರಾಡುತ್ತೇವೆ ಎಂದಿದ್ದಾರೆ.

ಈ ವೇಳೆ ಬಾಡ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಂಜುನಾಥ ಹೊಸಬಯ್ಯ ನಾಯ್ಕ, ವ್ಯಸೇಸ ಸದಸ್ಯ ಸಚಿನ ನಾಯ್ಕ, ಗಣೇಶ ನಾಯ್ಕ, ಭಾಸ್ಕರ ಪಟಗಾರ, ಪಂಚಾಯಿತಿ ಮಾಜಿ ಸದಸ್ಯ ಸುಬ್ರಮಣ್ಯ ನಾಯ್ಕ, ಪಂಚಾಯಿತಿ ಮಾಜಿ ಸದಸ್ಯ ಬಾಬು ನಾಯ್ಕ, ಉದ್ಯಮಿ ನಾಗರಾಜ ನಾಯ್ಕ, ವಿದ್ಯಾಧೀಶ ನಾಯ್ಕ, ಪ್ರವೀಣ ಭಟ್, ಸುರೇಶ ಶೇಟ್, ನಾರಾಯಣ ಭಟ್ಟ, ಎಸ್‌ಡಿಎಂಸಿ ಅಧ್ಯಕ್ಷ ಹರೀಶ ನಾಯ್ಕ, ಕಮಲಾಕ್ಷ ನಾಯ್ಕ, ಮಂಜುನಾಥ ಹರಿಕಂತ್ರ, ನಾಗರಾಜ ಮುಕ್ರಿ, ಉದ್ಯಮಿ ನಾರಾಯಣ ಪಟಗಾರ, ಮಹೇಶ ಹರಿಕಂತ್ರ, ಪ್ರಶಾಂತ ನಾಯ್ಕ, ಪ್ರಮೋದ, ಕಷ್ಣ ಭಟ್ಟ, ನಾಗರಾಜ ಮಡಿವಾಳ, ಭಾಸ್ಕರ ನಾಯ್ಕ ಇನ್ನಿತರರು ಇದ್ದರು.

ಶೇ. 73ರಷ್ಟು ಬಾಕಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 73.13ರಷ್ಟು ಇ ಕೆವೈಸಿ ಬಾಕಿ ಇದೆ. 2,16,453ರೇಶನ್ ಕಾರ್ಡ್‌ಗಳಿದ್ದು, 5,69,044 ಸದಸ್ಯರಿದ್ದಾರೆ. ಅದರಲ್ಲಿ 1,29,582 ಸದಸ್ಯರ ಇ ಕೆವೈಸಿ ಎಂದರೆ ಶೇ. 26.87 ರಷ್ಟು ಪೂರ್ಣವಾಗಿದೆ. ಇನ್ನೂ 4,16,131 ಜನರ ಇ ಕೆವೈಸಿ ಬಾಕಿ ಇದೆ. ಇನ್ನೊಂದು ತಿಂಗಳಲ್ಲಿ ಎಲ್ಲವನ್ನೂ ಮುಗಿಸಬೇಕಿದೆ.

ಇಲ್ಲಿನ ಟವರ್ ಕೋಡ್ ನಂ. 007ರಲ್ಲಿ ಬಿಎಸ್‌ಎನ್‌ಎಲ್ ಹಾಗೂ ಜಿಯೋ ನೆಟ್‌ವರ್ಕ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಜನರ ದಿನನಿತ್ಯದ ಬಳಕೆಗೆ, ರೇಷನ್-ಬ್ಯಾಂಕ್ ಕೆವೈಸಿ, ಒಟಿಪಿಗಳು, ಸರ್ಕಾರದ ಯೋಜನೆಗಳಿಗೆ ಅರ್ಜಿ, ಹೀಗೆ ಎಲ್ಲವೂ ಇಲ್ಲಿನ ಮೊಬೈಲ್ ಟವರ್ ಸಿಗ್ನಲ್ ಮೂಲಕವೇ ಸಾಧ್ಯವಾಗುತ್ತದೆ. ನಾಲ್ಕು ತಿಂಗಳಿಂದ ಜನರ ದೂರಿಗೆ ಸ್ಪಂದಿಸುತ್ತಿಲ್ಲ. ನಮ್ಮ ಕಿಸೆಯಿಂದ ದುಡ್ಡು ಕದ್ದಂತಾಗಿದೆ. ನಮ್ಮ ನಷ್ಟವನ್ನು ಅವರು ತುಂಬಿಕೊಡಬೇಕು. ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ನೆಟ್‌ವರ್ಕ ಕಂಪನಿಯ ಅಧಿಕಾರಿಗಳು ಬಂದಾಗ ಅವರನ್ನು ಮುತ್ತಿಗೆ ಹಾಕುತ್ತೇವೆ.
ಜಗನ್ನಾಥ ನಾಯ್ಕ ಬಾಡ, ತಾಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net