ಕಾರವಾರ: ಕೈಗಾ ಅಣು ವಿದ್ಯುತ್ ಕೇಂದ್ರದಲ್ಲಿ ಅವಗಢಗಳು ಸಂಭವಿಸಿದರೆ ರಕ್ಷಣಾ ಕಾರ್ಯಗಳನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ತರಬೇತಿ ನೀಡುವ ಸಲುವಾಗಿ ಕಲ್ಪಿತ ಕಾರ್ಯಾಚರಣೆ ನಡೆಸಲು ಅಣು ವಿದ್ಯುತ್ ನಿಗಮವು ಜಿಲ್ಲಾಡಳಿತದ ಜತೆ ಸಿದ್ಧತೆ ಮಾಡಿಕೊಂಡಿದೆ.
ಎರಡು ವರ್ಷಗಳಿಗೊಮ್ಮೆ ನಡೆಯುವ ಕಲ್ಪಿತ ಕಾರ್ಯಾಚರಣೆ ಇದಾಗಿದ್ದು, ಈ ಬಾರಿ ಡಿಸೆಂಬರ್ 11 ರಂದು ಕಾರ್ಯಾಚರಣೆ ನಡೆಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಅಂದು ಕೈಗಾದಲ್ಲಿ ಅಣು ವಿಕಿರಣ ಸೋರಿಕೆಯಾಗಿದೆ ಎಂದು ಕಲ್ಪಿಸಿಕೊಂಡು, ಒಳಗಡೆ ಹಾಗೂ ಕೈಗಾ ಸುತ್ತಲಿನ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ (ಆನ್‌ಸೈಟ್ ಆಂಡ್ ಆಪ್‌ಸೈಟ್ ಎಮರ್ಜೆನ್ಸಿ ಘೋಷಿಸಲಾಗುತ್ತದೆ. ನಂತರ ಜನರನ್ನು ರಕ್ಷಿಸುವುದು ಹೇಗೆ ಎಂದು ಕಾರ್ಯಾಚರಣೆ ನಡೆಸಲಾಗುತ್ತದೆ. ಕೈಗಾ ಅಧಿಕಾರಿಗಳ ಜತೆಗೆ ಜಿಲ್ಲಾಡಳಿತವೂ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದೆ. ಹಾಗಾಗಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಕಾರ್ಯಾಚರಣೆ ಸಂಬಂಧ ಪೂರ್ವ ಸಿದ್ಧತಾ ಸಭೆ ನಡೆಸಿದರು.
ಪೂರ್ವ ಸಿದ್ಧತಾ ಸಭೆ:
ಡಿಸೆಂಬರ್ 11 ರಂದು ನಡೆಯುವ ಅಣಕು ಕಾರ್ಯಚರಣೆಯಲ್ಲಿ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ, ಯಾವುದೇ ಲೋಪಗಳಾಗದಂತೆ ಕಾರ್ಯನಿರ್ವಹಿಸಿ ಕಾರ್ಯಚರಣೆಯನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಕೈಗಾ ಅಣಕು ಕಾರ್ಯಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ
ವಹಿಸಿ ಮಾತನಾಡಿದರು. ಅಣಕು ಕಾರ್ಯಚರಣೆ ಸಂದರ್ಭದಲ್ಲಿ ದೈನಂದಿನ ಸಾರ್ವಜನಿಕ ವ್ಯವಸ್ಥೆಗೆ ಯಾವುದೇ ಅಡಚಣೆಯಾಗದಂತೆ ಮುನ್ನೆಚ್ಚರಿಕೆ
ಕ್ರಮಗಳನ್ನು ಕೈಗೊಂಡು ಕಾರ್ಯಚರಣೆಯಲ್ಲಿ ತೊಡಗಿಕೊಳ್ಳಬೇಕು, ಆರೋಗ್ಯ ಇಲಾಖೆ ,ಕಂದಾಯ ಇಲಾಖೆ, ಅಗ್ನಿಶಾಮಕ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ತಮಗೆ ವಹಿಸಲಾದ ಜವಾಬ್ದಾರಿಗಳಲ್ಲಿ ಯಾವುದೇ ಲೋಪಗಳಿಗೆ ಆಸ್ಪದ ನೀಡಬಾರದು ಎಂದರು.
ಕಾರ್ಯಚರಣೆಗೆ ಅಗತ್ಯವಿರುವ ವಾಹನಗಳ ವ್ಯವಸ್ಥೆ ಮಾಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆವತಿಯಿಂದ ಕಾಯಾಚರಣೆ ನಡೆಯುವ ವ್ಯಾಪ್ತಿಯ ಪ್ರದೇಶಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಣಕು ಕಾರ್ಯಚರಣೆ ಆದರೂ ಕೂಡಾ ಅಂತಿಮದಲ್ಲಿ ಕಾರ್ಯಚರಣೆಯ ಎಲ್ಲಾ ಹಂತದ ಕುರಿತು ಪರಾಮರ್ಶೆ ನಡೆಯಲಿದ್ದು, ಯಾವುದೇ ಹಂತದಲ್ಲಿ ಲೋಪಗಳು ಸಂಭವಿಸದಂತೆ ಎಚ್ಚರವಹಿಸಬೇಕು. ವಿಪತ್ತು ಸಂಭವಿಸಿದಾಗ ನೈಜ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ರೀತಿಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತ್ವರಿತವಾಗಿ ನಿಗಧಿತ ಸಮಯದಲ್ಲಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್ ಶಶಿ, ಉಪ ವಿಭಾಗಾಧಿಕಾರಿ ಶ್ರವಣ
ಕುಮಾರ್, ಡಿ.ಎಫ್.ಓ. ರವಿಶಂಕರ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಕೈಗಾದ ಹಿರಿಯ ಅಧಿಕಾರಿಗಳಾದ ಅಮೋಲ್ ಶುಕ್ಲಾ, ಚಿತ್ತರಂಜನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.