ಪೊಲೀಸರ ವೇಷ ಧರಿಸಿ, ವಿಡಿಯೋ ಕರೆ ಮಾಡಿ ಒಂಟಿ ಮಹಿಳೆಗೆ ವಂಚಿಸಿದ ಘಟನೆ ನಡೆದಿದ್ದು, ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದಾಶಿವಗಡ ಬೆತ್‌ನಾಯ್ಕವಾಡದಲ್ಲಿ ವಾಸವಿರುವ ಒಂಟಿ ಮಹಿಳೆಗೆ ಕಳೆದ ಜ.23 ರಂದು ವ್ಯಕ್ತಿಯೊಬ್ಬ ಅವರಿಗೆ ಕರೆ ಮಾಡಿ ನಿಮ್ಮ ಹೆಸರಿಗೆ ಪಾರ್ಸಲ್ ಒಂದು ಬಂದಿದೆ. ಅದರಲ್ಲಿ ಮೊಬೈಲ್ ಐಫೋನ್ ಹಾಗೂ ಬಂಗಾರದ ಸರ ಇದೆ ಎಂದಿದ್ದ. ಆದರೆ, ಅವುಗಳು ನನ್ನದಲ್ಲ ಎಂದಾಗ ನಿಮ್ಮ ಹೆಸರು ಹಾಗೂ ಮೊಬೈಲ್ ಫೋನ್ ಬಳಸಿಕೊಂಡು ವಂಚನೆ ಮಾಡಲಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದಿದ್ದ.
ಇತ್ತೀಚೆಗೆ ಮತ್ತೆ ವಾಟ್ಸ್ಆ್ಯಪ್ ವಿಡಿಯೋ ಕರೆ ಮಾಡಿದ ವ್ಯಕ್ತಿಯೊಬ್ಬ ನಿಮ್ಮ ಹೆಸರಿನಲ್ಲಿ 2 ಕೋಟಿ ರೂ. ವಂಚನೆ ನಡೆದಿದೆ. ತನಿಖೆ ನಡೆಯುತ್ತಿದೆ. ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ. ಹಾಗಾಗಿ ನಿಮ್ಮ ಬಳಿ ಇರುವ ಹಣವನ್ನು ಆರ್‌ಬಿಐಗೆ ಹಸ್ತಾಂತರಿಸಿ ಎಂದು ತಿಳಿಸಿದ್ದರು. ಗಾಬರಿಗೊಂಡ ಮಹಿಳೆ ವಂಚಕರು ಹೇಳಿದ ಖಾತೆಗೆ 9.94 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿದ್ದರು. ನಂತರ ಅವರು ನಿಜವಾದ ಪೊಲೀಸರಲ್ಲ ವಂಚನೆಗೊಳಗಾಗಿದ್ದೇನೆ ಎಂದು ಗೊತ್ತಾಗಿ ಚಿತ್ತಾಕುಲಾ ಪೊಲೀಸರ ಮೊರೆ ಹೋಗಿದ್ದಾಳೆ.