ವಿಚಾರಣೆಗೆ ಹಾಜರಾಗಲು ನೋಟಿಸ್ (Notice)

ನಾಡುಮಾಸ್ಕೇರಿ ಗ್ರಾಪಂ ಭಾಗದ ಸಮುದ್ರ ತೀರಗಳಲ್ಲಿನ ರೆಸಾರ್ಟ್ ಇತ್ಯಾದಿ ಕಟ್ಟಡಗಳು.
ನಾಡುಮಾಸ್ಕೇರಿ ಗ್ರಾಪಂ ಭಾಗದ ಸಮುದ್ರ ತೀರಗಳಲ್ಲಿನ ರೆಸಾರ್ಟ್ ಇತ್ಯಾದಿ ಕಟ್ಟಡಗಳು.
Published on

ಪ್ರಮುಖ ಮುಖ್ಯಾಂಶಗಳು

  • ನಾಡುಮಾಸ್ಕೇರಿ ಗ್ರಾಪಂ ಬೀಚ್‌ಗಳಲ್ಲಿ ಅನಧಿಕೃತ ಕಟ್ಟಡ ಪ್ರಕರಣ
  • ಎಸಿ ಸೂಚನೆ ಮೇರೆಗೆ ತಹಸೀಲ್ದಾರ್ ಕ್ರಮ
ಗೋಕರ್ಣ: ಹತ್ತಿರದ ನಾಡುಮಾಸ್ಕೇರಿ ಗ್ರಾಪಂ ವ್ಯಾಪ್ತಿಯ ಸಮುದ್ರ ತೀರದಲ್ಲಿ ಕಂದಾಯ ಇಲಾಖೆಗೆ ಸೇರಿದ ಹೊರೆದು ಬಂದ ಜಮೀನುಗಳಲ್ಲಿ ನಿರ್ಮಾಣಗೊಂಡಿರುವ ಅನಧಿಕೃತ ಕಟ್ಟಡ ಮಾಲೀಕರ ಹಕ್ಕುಗಳ ಬಗ್ಗೆ ವಿಚಾರಣೆಗೆ ಹಾಜರಾಗಲು ಕುಮಟಾ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರು ಸಂಬಂಧಿಸಿದ ಎಲ್ಲ 40 ಜನರಿಗೆ ಮಂಗಳವಾರ ನೋಟಿಸ್ (Notice) ಜಾರಿ ಮಾಡಿದ್ದಾರೆ.
ಹೊರೆದು ಬಂದ ಜಮೀನುಗಳಲ್ಲಿನ ಅನಧಿಕೃತ ಕಟ್ಟಡ ಕುರಿತಾದ ಜಮೀನಿನ ಮೇಲಿನ ಹಕ್ಕುಗಳ ದಾಖಲೆಗಳು, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರಗಳಿಂದ ಪಡೆದ ಅನುಮತಿ ಪತ್ರಗಳೊಂದಿಗೆ ಡಿ. 16ರಂದು ವಿಚಾರಣೆಗೆ ಹಾಜರಿರುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಇದಕ್ಕೆ ತಪ್ಪಿದಲ್ಲಿ ಸಂಬಂಧಿಸಿದವರ ಗೈರು ಹಾಜರಿಯಲ್ಲಿ ನಿಯಮಾನುಸಾರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಹಿನ್ನೆಲೆ:

ನಾಡುಮಾಸ್ಕೇರಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಅತಿಕ್ರಮಣವಾಗಿದೆ. ಅಂತಹ ಅತಿಕ್ರಮಣ ಜಮೀನಿನ ಗಡಿ ಗುರುತಿಸಲು ಮತ್ತು ಅತಿಕ್ರಮಣ ಖುಲ್ಲಾ ಪಡಿಸಲು ಕ್ರಮ ಕೈಗೊಳ್ಳುವಂತೆ ಗ್ರಾಪಂ ಅಧ್ಯಕ್ಷರು 2024ರ ಅಕ್ಟೋಬರ್ 25ರಂದು ತಹಸೀಲ್ದಾರರಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಅದರ ಮೇರೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಮತ್ತು ಕಂದಾಯ ನಿರೀಕ್ಷರಿಂದ ವರದಿ ಪಡೆಯಲಾಗಿ, ಗ್ರಾಪಂ ವ್ಯಾಪ್ತಿಯ ಸಮುದ್ರ ತೀರದಲ್ಲಿರುವ ಹೊರೆದು ಬಂದ ಜಾಗಗಳಲ್ಲಿ ಅನಧಿಕೃತ ರೆಸಾರ್ಟ್‌ಗಳು ಇರುವುದಾಗಿ ದೃಢಪಡಿಸಲಾಯಿತು.
ಇದರ ಜತೆಗೆ ಪ್ರಸ್ತುತ ಜಮೀನಿನಲ್ಲಿರುವ ಅನಧಿಕೃತ ರೆಸಾರ್ಟ್‌ಗಳ ಯಾದಿಯನ್ನೂ ಸಿದ್ಧಪಡಿಸಲಾಯಿತು. ಈ ಎಲ್ಲ ಪ್ರಕ್ರಿಯೆಗಳ ಮೂಲಕ ಪರಿಶೀಲಿಸಲಾಗಿ ಸಮುದ್ರ ತೀರದ ಈ ಸ್ಥಳಗಳು ಹೊರೆದು ಬಂದ (ಮಣ್ಣು/ಉಸುಕು ಜಮಾಗೊಂಡು ರಚನೆಯಾದ) ಪ್ರದೇಶಗಳಾಗಿದ್ದು ಭೂ ಕಂದಾಯ ಅಧಿನಿಯಮ 1964ರ ಪ್ರಕಾರ ಇಂತಹ ಜಮೀನುಗಳು ರಾಜ್ಯ ಸರ್ಕಾರದಲ್ಲಿ ಹಿತವಾದ ಆಸ್ತಿಗಳಾಗಿರುವ ಹಿನ್ನೆಲೆಯಲ್ಲಿ ತುರ್ತಾಗಿ ಅತಿಕ್ರಮಣ ತೆರವಿಗೆ ಯೋಗ್ಯ ಎಂದು ನಿರ್ಧರಿತವಾಯಿತು. ಈ ನಡುವೆ ರೆಸಾರ್ಟ್ ನಿರ್ಮಾಣ ಕುರಿತಾಗಿ ಕೆಲವು ಖಾಸಗಿಯವರಿಂದ ಉಚ್ಚ ನ್ಯಾಯಾಲಯ ಧಾರವಾಡ ಪೀಠದಲ್ಲಿ ಪ್ರಕರಣ ದಾಖಲಾಯಿತು.
ಹೈಕೋರ್ಟ್ ಆದೇಶ
ಇದೇ ಜಮೀನುಗಳಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯ ಧಾರವಾಡ ಪೀಠ ಕಳೆದ 1ರಂದು ಆದೇಶ ನೀಡಿ, ಯಾವುದೇ ಕ್ರಮವನ್ನು ಜರುಗಿಸುವುದಿದ್ದಲ್ಲಿ ನಿಯಮಾನುಸಾರ ನಡೆಸಲು ಹಾಗೂ ಅರ್ಜಿದಾರರ ಹಕ್ಕುಗಳನ್ನು ರಕ್ಷಣೆ ಮಾಡಲು ತೀರ್ಪಿತ್ತಿತು. ಅದರಂತೆ ಕುಮಟಾ ಸಹಾಯಕ ಆಯುಕ್ತರು ಸೋಮವಾರ ಡಿ. 1ರಂದು ಕಾನೂನಿನ ಪ್ರಕಾರ ಅಗತ್ಯ ಕ್ರಮ ತೆಗೆದುಕೊಳ್ಳಲು ತಹಸೀಲಾರರಿಗೆ ಲಿಖಿತವಾಗಿ ಸೂಚಿಸಿದ್ದಾರೆ.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ಸಂಬಂಧಿಸಿದ ನೋಟಿಸ್‌ದಾರರು ಒದಗಿಸುವ ಅಧಿಕೃತ ದಾಖಲೆಗಳ ಮೇರೆಗೆ ಪ್ರಕರಣದ ಸಂಪೂರ್ಣ ವಿಚಾರಣೆ ಕೈಗೊಂಡು ನಡಾವಳಿಯನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net