ಮಾನವ ರಹಿತ ಯುದ್ಧ ವಿಮಾನ, ನೌಕೆಗಳಿಗೆ ಇನ್ನು ಇದೇ ತಾಯಿ!!

ಭಾರತೀಯ ನೌಕಾಸೇನೆಗೆ ಸಮರ್ಥಕ್‌ ಎಂಬ ಹೊಸ ನೌಕೆಯ ಸೇರ್ಪಡೆ ಇಂದು
Navy Ship
ಸಮರ್ಥಕ್‌ ಯುದ್ಧ ನೌಕೆ
Published on: 

ಕಾರವಾರ: ಭಾರತೀಯ ನೌಕಾಸೇನೆಗೆ ಮತ್ತೊಂದು ಯುದ್ಧ ಹಡಗು ಸೇರ್ಪಡೆಯಾಗಲಿದೆ. ಅಕ್ಟೋಬರ್ 16 ರಂದು ಕಾರವಾರದ ಕದಂಬ ನೌಕಾನೆಲೆಯಲ್ಲಿ ಸಮರ್ಥಕ್ ಎಂಬ ಯುದ್ಧ ನೌಕೆಯ ಸೇವೆಗೆ ಸೇರ್ಪಡೆ ಕಾರ್ಯಕ್ರಮ ಜರುಗಲಿದೆ.

ಭಾರತದ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಅವರು ಆಗಮಿಸಿ ಈ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಕೃಷ್ಣನ್‌ ಸ್ವಾಮಿನಾಥನ್‌ ಸೇರಿ ಹಲವು ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು.

ಏನಿದರ ವಿಶೇಷತೆ..?

ಮೇಕ್ ಇನ್ ಇಂಡಿಯಾ ಅಡಿ ಲಾರ್ಸನ್ ಆ್ಯಂಡ್ ಟೂಬ್ರೋ (ಎಲ್ ಆ್ಯಂಡ್ ಟಿ)ಕಂಪನಿಯು ತಮಿಳುನಾಡಿನ ಕಟಪಲ್ಲಿ ಶಿಫ್‌ಯಾರ್ಡ್ನಲ್ಲಿ ಈ ಬಹು ಉಪಯೋಗಿ ನೌಕೆಯನ್ನು ಸಿದ್ಧ ಮಾಡಿದೆ. ಕಾರವಾರಕ್ಕೆ ಈಗಾಗಲೇ ಬಂದು ಲಂಗರು ಹಾಕಿದೆ. ಭಾರತೀಯ ತಂತ್ರಜ್ಞಾನದ ಬಹು ಉಪಯೋಗಿ ನಾಲ್ಕು ನೌಕೆಯನ್ನು ನೌಕಾಸೇನೆಗೆ ಸೇರಿಸಲು ಸಿದ್ಧತೆ ನಡೆದಿದ್ದು, ಆ ಸರಣಿಯ ಮೊದಲ ನೌಕೆ ಇದಾಗಿದೆ.

ಮುಖ್ಯವಾಗಿ ಕಡಲ ಕಾವಲು ಮತ್ತು ಗಸ್ತು ತಿರುಗಲು ವಿನ್ಯಾಸಗೊಳಿಸಲಾಗಿರುವ ಸಮರ್ಥಕ್ ನೌಕೆಯು, ಬಹು ಉಪಯೋಗಿ ವ್ಯವಸ್ಥೆ ಹೊಂದಿದೆ. ಸಾಮಾನ್ಯ ಕಡಲ ಕಾರ್ಯಾಚರಣೆಗಳನ್ನು ಕೈಗೊಳ್ಳಲಿದೆ. ಅಲ್ಲದೇ ಗುರಿ ನಿಯೋಜನೆ ಮತ್ತು ಯುದ್ಧ ಪರೀಕ್ಷೆಗಳಿಗೆ, ವಿಪತ್ತುಗಳಲ್ಲಿ ರಕ್ಷಣಾ ಕಾರ್ಯಾಚರಣೆಯ ನೌಕೆಯಾಗಿ ಇದನ್ನು ಬಳಸಿಕೊಳ್ಳಬಹುದಾಗಿದೆ. ಮಾತ್ರವಲ್ಲ ಅಗತ್ಯ ಬಿದ್ದಲ್ಲಿ ಇದನ್ನು ಆಸ್ಪತ್ರೆಯಾಗಿಯೂ ಮಾರ್ಪಾಡು ಮಾಡಬಹುದು.

ಇನ್ನೊಂದು ವಿಶೇಷತೆ ಏನೆಂದರೆ ಇದು ಮಾನವ ರಹಿತ ವ್ಯವಸ್ಥೆಗಳಿಗೆ ಎಂದರೆ ಡ್ರೋನ್, ಯುಎವಿ, ಯುಎಸ್‌ವಿ ಹಾಗೂ ಸಮುದ್ರದಾಳದ ಮೈನ್‌ಗಳನ್ನು ಪತ್ತೆ ಹಚ್ಚುವ ಸಾಧನಗಳಿಗೆ ತಾಯಿ ನೌಕೆಯಾಗಿ ಈ ಸಮರ್ಥಕ್ ಕಾರ್ಯ ನಿರ್ವಹಿಸಬಲ್ಲದು. ನೌಕೆಗೆ ಪರಿಸ್ಥಿತಿಗೆ ತಕ್ಕಂತೆ ಕಾರ್ಯ ನಿರ್ವಹಿಸಬಲ್ಲ ಶಸ್ತಾçಸ್ತç, ರಡಾರ್ ಹಾಗೂ ಆಧುನಿಕ ಸಂವಹನ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಅಲೆಗಳ ನಡುವೆ ಹೊರಹೊಮ್ಮುವ ಭಾರತೀಯ ಆನೆಯ ಚಿತ್ರವು ಸಮರ್ಥಕ್ ನೌಕೆಯ ಲಾಂಛನವಾಗಿದೆ. ಇದು ಶಕ್ತಿ, ಬುದ್ಧಿವಂತಿಕೆ ಮತ್ತು ಚುರುಕುತನವನ್ನು ಪ್ರತಿನಿಽಸುತ್ತದೆ. `ವಿಜಯಾರ್ಥಮ್ ಏಕನಿಷ್ಠತಾ' ಎಂದರೆ `ಗೆಲುವೇ ನಮ್ಮ ಏಕೈಕ ಗುರಿ' ಎಂಬುದು ನೌಕೆಯ ಘೋಷವಾಕ್ಯವಾಗಿದೆ.

ಸಮರ್ಥಕ್ ಕುರಿತು ಮಾಹಿತಿ

ಎಲ್ ಆ್ಯಂಡ್ ಟಿ ಕಂಪನಿಯು 2022 ರಲ್ಲಿ ಸಮರ್ಥಕ್ ಹಾಗೂ ಉತ್ಕರ್ಷ್ ಎಂಬ ಎರಡು ಬಹುಪಯೋಗಿ ನೌಕೆಗಳನ್ನು ತಯಾರಿಸುವ 887 ಕೋಟಿ ರೂ.ಗಳ ಒಪ್ಪಂದವನ್ನು ರಕ್ಷಣಾ ಇಲಾಖೆಯ ಜೊತೆ ಮಾಡಿಕೊಂಡಿತ್ತು. 2023 ರಲ್ಲಿ ಕಟಪಲ್ಲಿ ಶಿಪ್‌ಯಾರ್ಡ್ನಲ್ಲಿ ಎರಡೂ ನೌಕೆಗಳ ತಯಾರಿಕೆಗೆ ಪೂಜೆ ನಡೆದಿತ್ತು. ನೌಕೆಯಲ್ಲಿ ಶೇ.75 ರಷ್ಟು ಭಾರತೀಯ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದು ಎಲ್ ಆ್ಯಂಡ್ ಟಿ ಕಂಪನಿ ತಿಳಿಸಿದೆ. ಆಗಸ್ಟ್ 27 ರಂದು ನೌಕೆಯನ್ನು ಕಂಪನಿಯು ನೌಕಾಸೇನೆಗೆ ಹಸ್ತಾಂತರ ಮಾಡಿದೆ.

ನೌಕೆಯು 18.6 ಮೀಟರ್ ಅಗಲ 107 ಮೀಟರ್ ಉದ್ದವಿದೆ. 3750 ಟನ್ ಭಾರವಿದೆ. ಡೀಸೆಲ್ ಇಂಜಿನ್‌ಇ ಈ ಹಡಗು ಗಂಟೆಗೆ 15 ನಾಟಿಕಲ್ ಮೈಲ್ ವೇಗದಲ್ಲಿ ಓಡಬಲ್ಲದು. ಕವಚ ಎಂಬ ಕ್ಷಿಪಣಿ ನಿರೋಧಕ ವ್ಯವಸ್ಥೆ, ಸಂಕೇತ್ ಎಂಕೆ3 ಎಂಬ ಇಲೆಕ್ಟ್ರಾನಿಕ್‌ ವ್ಯವಸ್ಥೆ, ರುಕ್ಮಿಣಿ ಎಂಬ ರಡಾರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ವರುಣಾಸ್ತ್ರ ಎಂಬ ಎರಡು ನೌಕಾ ಸೋಟಕ(ಟಾರ್ಪಿಡೋ)ಗಳನ್ನು ಉಡಾಯಿಸಬಲ್ಲ ನಳಿಕೆಗಳು, ಜಲಾಂತರ್ಗಾಮಿಗಳನ್ನು ಹೊಡೆದುರುಳಿಸಬಹುದಾದ ಆರ್‌ಯುಬಿ -6000 ಎಂಬ ಶಸ್ತ್ರ ಉಡ್ಡಯನ ನಳಿಕೆ, ವಿವಿಧ ನೌಕಾ ಗನ್‌ಗಳನ್ನು ಇದಕ್ಕೆ ಅಳವಡಿಸಲಾಗಿದೆ. ಎಚ್‌ಎಎಲ್‌ನ ದ್ರುವಾ ಎಂಕೆ3 ಹೆಲಿಕಾಫ್ಟರ್ ಇದರಲ್ಲಿ ಇಳಿಸು ಸಹಾಯ, ರಕ್ಷಣೆ ಕಾರ್ಯಾಚರಣೆ ನಡೆಸಬಲ್ಲದು.

........

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net