ಗೋಕರ್ಣ ದಲ್ಲಿ ಏರ್ಪಡಿಸಿದ್ದ ಶ್ರೀ ಭದ್ರಕಾಳಿದೇವಿ ಕಾರ್ತಿಕ ಉತ್ಸವ ನಿಮಿತ್ತ ಹಾಲಕ್ಕಿ ಒಕ್ಕಲಿಗರು ಪ್ರದರ್ಶಿಸಿದ ನಾರಸಿಂಹ ಅವತಾರದ ರೂಪಕ.
Published on:
Copied
Follow Us
ಗೋಕರ್ಣ: ಇಲ್ಲಿನ ಪ್ರಧಾನ ಗ್ರಾಮದೇವಿ ಶ್ರೀ ಭದ್ರಕಾಳಿ ಕಾರ್ತಿಕ ಉತ್ಸವ ನಿಮಿತ್ತ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ವಿವಿಧ ರೂಪಕಗಳಿಂದ ಕೂಡಿದ ವಿಶೇಷವಾದ ಹಗರಣ ಕಲಾ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು.
ಹಗರಣದಲ್ಲಿ ಹಾಲಕ್ಕಿ ಕಲಾವಿದರು ಮಾಡಿ ತೋರಿದ ನಾರಸಿಂಹ ಅವತಾರ, ರಾವಣನ ಕೈ ತಪ್ಪಿ ಹಾರಿದ ಹನುಮಂತ, ಪಾರಂಪರಿಕ ಹಾಲಕ್ಕಿ ಕುಣಿತ, ಬೃಹತ್ ಕೊಕ್ಕರೆ, ಬೃಹದಾಕಾರದ ಆಕಾಶದೀಪ ಇತ್ಯಾದಿ ವೈವಿಧ್ಯಮಯ ರೂಪಕಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರನ್ನು ರಂಜಿಸಿದವು.
ಅಂಕೋಲಾ ತಾಲೂಕಿನ ಬೆಳಂಬರ ಮತ್ತಿತರ ಗ್ರಾಮಗಳು ಮತ್ತು ಸ್ಥಳೀಯ ಸುತ್ತಲಿನ ಭಾಗಗಳ ಹಾಲಕ್ಕಿ ಕಲಾವಿದರು ಪಾಲ್ಗೊಂಡ ಹಗರಣ ಪ್ರಹಸನದಲ್ಲಿ ರಮೇಶ ಗೌಡ ತಂಪು ಪಾನೀಯ ವ್ಯವಸ್ಥೆ ಮಾಡಿದರು.
ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ಮಾತನಾಡಿ, ಶ್ರೀ ಭದ್ರಕಾಳಿದೇವಿಯ ಉತ್ಸವದಲ್ಲಿ ತಮ್ಮ ಕಲಾ ಪ್ರದರ್ಶನವನ್ನು ಸಮರ್ಪಿಸಿದ ಸಮಸ್ತ ಹಾಲಕ್ಕಿ ಸಮಾಜದವರನ್ನು, ಸಮಾಜದ ಕ್ಷೇಮಕ್ಕೆ ಪೂಜೆ ನಿರ್ವಹಿಸಿ ಆಶೀರ್ವದಿಸಿದ ವೇ. ರಾಜಗೋಪಾಲ ಅಡಿ ಮತ್ತು ಸರ್ವ ಉಪಾಧಿವಂತರನ್ನು ಅಭಿನಂದಿಸಿದರು.
ರಾಜಗೋಪಾಲ ಅಡಿ, ಶ್ರೀಮಹಾಬಲೇಶ್ವರ ಸಹಕಾರ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ, ಹಾಲಕ್ಕಿ ಸಮಾಜದ ಶಂಕರ ಗೌಡ ಹೆಗ್ರೆ, ವಿಷ್ಣು ಗೌಡ ಮೂಲೇಕೇರಿ, ಮಹಾದೇವ ಗೌಡ, ಶೇಖರ ಗೌಡ ಮುದ್ರಾಣಿ, ಲಕ್ಷ್ಮೀ ಗೌಡ, ಇತರರಿದ್ದರು.