ಮುಂಡಗೋಡ ಸಂತೆ ಮಾರುಕಟ್ಟೆ ಹರಾಜು ಪ್ರಕ್ರಿಯೆ ಮುಂದೂಡಿಕೆ sante

ಮುಂಡಗೋಡ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಪಪಂ ಆಡಳಿತಾಧಿಕಾರಿ ತಹಸೀಲ್ದಾರ್ ಶಂಕರ ಗೌಡಿ ಸಮ್ಮುಖದಲ್ಲಿ ಸಭೆ ನಡೆಯಿತು.  ಮುಖ್ಯಾಧಿಕಾರಿ ಸಂತೋಷ ಹಕ್ಲಾಪುರ ಇದ್ದರು.
ಮುಂಡಗೋಡ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಪಪಂ ಆಡಳಿತಾಧಿಕಾರಿ ತಹಸೀಲ್ದಾರ್ ಶಂಕರ ಗೌಡಿ ಸಮ್ಮುಖದಲ್ಲಿ ಸಭೆ ನಡೆಯಿತು. ಮುಖ್ಯಾಧಿಕಾರಿ ಸಂತೋಷ ಹಕ್ಲಾಪುರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂತೆ ಮಾರುಕಟ್ಟೆ, ಬೈಕ್ ಪಾರ್ಕಿಂಗ್ ಸ್ಥಳಕ್ಕೆ ಕಡಿಮೆ ಮೊತ್ತ ಕೂಗಿದ ಹರಾಜುದಾರರು
ಮುಂಡಗೋಡ: ಸಂತೆ ಮಾರುಕಟ್ಟೆ ಹರಾಜಿನಲ್ಲಿ ಭಾಗವಹಿಸಿದ ಹರಾಜುದಾರರು ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಮೊತ್ತಕ್ಕೆ ಹರಾಜು ಕೂಗಿದ ಪರಿಣಾಮ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಯಾಗಿರುವ ತಹಸೀಲ್ದಾರ್ ಶಂಕರ ಗೌಡಿ ಹರಾಜು ರದ್ದು ಪಡಿಸಿ ಮುಂದೂಡಿದ ಘಟನೆ ಮಂಗಳವಾರ ಜರುಗಿತು. 
ಪಪಂ ಪಕ್ಕದಲ್ಲಿರುವ ಸಂತೆ ಮಾರುಕಟ್ಟೆ ಹಾಗೂ ಕಚೇರಿ ಆವರಣದಲ್ಲಿರುವ ಬೈಕ್ ಪಾರ್ಕಿಂಗ್ ಸ್ಥಳ ಹರಾಜು ಪ್ರಕ್ರಿಯೆಯನ್ನು ಮಂಗಳವಾರ ಪಪಂ ಸಭಾಭವನದಲ್ಲಿ ಕರೆಯಲಾಗಿತ್ತು. ಆರು ಜನರು ಹರಾಜಿನಲ್ಲಿ ಭಾಗವಹಿಸಲು ಮುಂಗಡ ಠೇವಣಿ ಕಟ್ಟಿದ್ದರು. ಹರಾಜಿನಲ್ಲಿ ಮಾರುಕಟ್ಟೆ ಪಡೆದ ವ್ಯಕ್ತಿಯೂ ಹರಾಜು ಮೊತ್ತದ ಅರ್ಧ ಭಾಗವನ್ನು ಇಂದು ತುಂಬಬೇಕು ಉಳಿದ ಹಣವನ್ನು 30ದಿನದೊಳಗೆ ತುಂಬಬೇಕು ಎಂಬ ನಿಯಮವಿತ್ತು. ಆದರೆ, 30 ದಿನಕ್ಕಿಂತ ಹೆಚ್ಚಿಗೆ ಸಮಯ ಬೇಕು ಎಂದು ಹರಾಜುದಾರರು ಪಟ್ಟು ಹಿಡಿದರು. ಆಗ ಅರ್ಧ ಹಣ ತುಂಬಲು 120 ದಿನ ಅವಕಾಶ ನೀಡಲಾಯಿತು. 
ಮೊದಲಿಗೆ ಬೈಕ್ ಪಾಕಿರ್ಂಗ್ ಹರಾಜು ಆರಂಭಿಸಲಾಯಿತು. ಕಳೆದ ವರ್ಷ ಮೂವತ್ತು ಸಾವಿರ ರೂ. ಪಾಕಿರ್ಂಗ್ ಸ್ಥಳ ಹರಾಜು ಆಗಿತ್ತು. ಆದರೆ, ಈ ವರ್ಷ ಕೇವಲ 16 ಸಾವಿರ ರೂ.ಗಳಿಗೆ ಹರಾಜು ಕೂಗಲಾಯಿತು. ಯಾರು ಹೆಚ್ಚಿಗೆ ಹಣ ಕೂಗದ್ದರಿಂದ ಹರಾಜು ಪ್ರಕ್ರಿಯೆ ಮುಂದೂಡಲಾಯಿತು. ಆದರೆ, ಹರಾಜಿನಲ್ಲಿ ಭಾಗವಹಿಸಿದವರು ಮಾತ್ರ ಪಪಂನವರು ಪಾರ್ಕಿಂಗ್ ಸ್ಥಳಕ್ಕೆ 15 ಸಾವಿರ ನಿಗದಿ ಪಡಿಸಿದ್ದೀರಿ. ಅದಕ್ಕಿಂತ ಒಂದು ಸಾವಿರ ಹೆಚ್ಚಿಗೆ ಹರಾಜು ಕೂಗಿದ್ದೇವೆ, ನಮಗೆ ಕೊಡಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಅಧಿಕಾರಿಗಳು ಒಪ್ಪಲಿಲ್ಲ. ಬೇಸರಗೊಂಡ ಹರಾಜುದಾರರು ಸಂತೆ ಮಾರುಕಟ್ಟೆ ಹರಾಜಿನಲ್ಲಿ ಭಾಗವಹಿಸುವುದಿಲ್ಲ ಎಂದು ಹೊರನಡೆದರು. ಹೀಗಾಗಿ ತಹಸೀಲ್ದಾರ್ ಶಂಕರ ಗೌಡಿ ಹಾಗೂ ಪಪಂ ಮುಖ್ಯಾಧಿಕಾರಿ ಸಂತೋಷ ಹಕ್ಲಾಪುರ ಟೆಂಡರ್ ಪ್ರಕ್ರಿಯೆ ಮುಂದೂಡಿದರು. 
ಕಳೆದ ವರ್ಷ ಸಂತೆ ಮಾರುಕಟ್ಟೆ ಹರಾಜಿನಲ್ಲಿ ಪಡೆದವರು ಈ ತಿಂಗಳು 31ನೇ ತಾರೀಕಿನೊಳಗಾಗಿ ನಾಲ್ಕು ಲಕ್ಷಕ್ಕೂ ಅಧಿಕ ಹರಾಜು ಮೊತ್ತ ತುಂಬುವುದು ಬಾಕಿಯಿದೆ. ಟೆಂಡರ್‌ದಾರರಿಗೆ ಹಣ ತುಂಬಲು ನೋಟಿಸ್ ನೀಡಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಸಂತೋಷ ಹಕ್ಲಾಪುರ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net