ಮುಂಡಗೋಡದಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ TRAFFIC

ಮುಂಡಗೋಡ ಪಟ್ಟಣದ ಹೊರವಲಯದ ಹುಬ್ಬಳ್ಳಿ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಂಡಿರುವುದು.
ಮುಂಡಗೋಡ ಪಟ್ಟಣದ ಹೊರವಲಯದ ಹುಬ್ಬಳ್ಳಿ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮುಂಡಗೋಡ-ಹುಬ್ಬಳ್ಳಿ ರಸ್ತೆಯಲ್ಲಿ ಕಿರು ಸೇತುವೆ ಕಾಮಗಾರಿ
ಮುಂಡಗೋಡ: ಪಟ್ಟಣದ ಹೊರವಲಯ ಹುಬ್ಬಳ್ಳಿ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿರುವುದರಿಂದ ಸೋಮವಾರ ರಾತ್ರಿ ಸುರಿದ ಮಳೆಗೆ ವಾಹನಗಳ ಸಂಚಾರಕ್ಕೆ ಮಂಗಳವಾರ ಅಡಚಣೆ ಉಂಟಾಯಿತು.
ಹುಬ್ಬಳ್ಳಿಗೆ ಹೋಗುವ ರಸ್ತೆಯಲ್ಲಿರುವ ಕಿರು ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ನೂತನ ಸೇತುವೆ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗಿದೆ. ಕಾಮಗಾರಿ ನಡೆಯುವ ಸ್ಥಳದ ಪಕ್ಕದಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಮಾಡಲಾಗಿದೆ. ಆದರೆ, ಸೋಮವಾರ ಸಂಜೆ ಹಾಗೂ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಪರ್ಯಾಯವಾಗಿ ಮಣ್ಣು ಹಾಕಿ ಮಾಡಿದ್ದ ರಸ್ತೆಯಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿವೆ. ಮಂಗಳವಾರ ನಸುಕಿನಲ್ಲಿ 50ಕ್ಕೂ ಹೆಚ್ಚು ವಾಹನಗಳು ಹುಬ್ಬಳ್ಳಿಯಿಂದ ಬಂದು ಸಾಲಾಗಿ ನಿಂತಿರುವುದು ಕಂಡು ಬಂದಿತು. ಇನ್ನು ಮುಂಡಗೋಡದಿಂದ ಹುಬ್ಬಳ್ಳಿಗೆ ತೆರಳುವ ವಾಹನಗಳು ಮರಳಿ ಪಟ್ಟಣಕ್ಕೆ ಬಂದು ಕೋಣನಕೇರಿ, ಕಲಘಟಗಿ ಮಾರ್ಗವಾಗಿ ಸಂಚರಿಸವಂತಾಯಿತು.
ಈ ಅವಧಿಯೊಳಗೆ ಸೇತುವೆ ನಿರ್ಮಾಣ ಮಾಡಿ ಮುಗಿಸಬೇಕಿತ್ತು. ಇದೀಗ ಅಡ್ಡಮಳೆಗಳು ಸುರಿಯುತ್ತಿವೆ. ಇದರಿಂದ ಮಣ್ಣಿನ ರಸ್ತೆಯಲ್ಲಿ ಭಾರ ತುಂಬಿದ ವಾಹನಗಳು ಸಂಚರಿಸುವುದಿಲ್ಲ ಪರ್ಯಾಯ ರಸ್ತೆಯನ್ನು ಸರಿಯಾಗಿ ಮಾಡದಿರುವುದು ಪ್ರಯಾಣಿಕರು ಹಾಗೂ ಚಾಲಕರ ಆಕ್ರೋಶಕ್ಕೆ ಕಾರಣವಾಗಿದ್ದು, ಇಲಾಖಾಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.
ಸೇತುವೆ ನಿರ್ಮಾಣ ಕಾಮಗಾರಿ ತಿಂಗಳು ಕಾಲ ಹಿಡಿಯುತ್ತದೆ. ಸೇತುವೆ ಪಕ್ಕದಲ್ಲಿ ಮಾಡಿರುವ ಪರ್ಯಾಯ ಮಾರ್ಗವನ್ನು ಸಮರ್ಪಕವಾಗಿ ಮಾಡಿ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂಬುದು ವಾಹನಗಳ ಸವಾರರ ಆಗ್ರಹವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net