ಮುಂಡಗೋಡದಿಂದ ಶಿರಸಿ-ಹುಬ್ಬಳ್ಳಿಗೆ (Mundagoda to Sirsi-Hubballi) ಬೆಳಗ್ಗೆ ಬಸ್ ಓಡಿಸಿ

ಮುಂಡಗೋಡದಿಂದ ಶಿರಸಿಗೆ ತೆರಳಲು ಸಮರ್ಪಕವಾದ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಇತ್ತೀಚೆಗೆ ತಾಲೂಕಿನ ಪಾಳ ಗ್ರಾಮದಲ್ಲಿ ಬಸ್ ಸಂಚಾರ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವುದು.
ಮುಂಡಗೋಡದಿಂದ ಶಿರಸಿಗೆ ತೆರಳಲು ಸಮರ್ಪಕವಾದ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಇತ್ತೀಚೆಗೆ ತಾಲೂಕಿನ ಪಾಳ ಗ್ರಾಮದಲ್ಲಿ ಬಸ್ ಸಂಚಾರ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ತಪ್ಪದ ವಿದ್ಯಾರ್ಥಿಗಳು, ಪ್ರಯಾಣಿಕರ ಪರದಾಟ
  • ಹೆಚ್ಚುವರಿ ವಾಹನ ನೀಡಲು ಒತ್ತಾಯ
  • ಅವಶ್ಯಕತೆಗೆ ತಕ್ಕಂತೆ ಮುಂಡಗೋಡ ಘಟಕಕ್ಕೆ ಬಸ್ ಒದಗಿಸಿಲ್ಲ
ಮುಂಡಗೋಡ: ಸ್ಥಳೀಯ ಸಾರಿಗೆ ಘಟಕದಿಂದ ಹುಬ್ಬಳ್ಳಿ ಹಾಗೂ ಶಿರಸಿ ಮಾರ್ಗಕ್ಕೆ ಹೆಚ್ಚುವರಿ ಬಸ್ ಓಡಿಸದೇ ಇರುವುದರಿಂದ (Mundagoda to Sirsi-Hubballi) ಶಾಲೆ-ಕಾಲೇಜ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಪರದಾಡುವಂತಾಗಿದೆ.
ಎರಡು ವರ್ಷಗಳ ಹಿಂದೆ ತಾಲೂಕಿನಲ್ಲಿ ಸಾರಿಗೆ ಘಟಕ ಉದ್ಘಾಟನೆಯಾಗಿದ್ದಲ್ಲದೆ, ಕಳೆದ ಐದು ತಿಂಗಳ ಹಿಂದೆ ಸಾರಿಗೆ ಘಟಕ ಕಾರ್ಯಾರಂಭಿಸಿದೆ. ಆದಾಗ್ಯೂ ಅವಶ್ಯಕತೆಗೆ ತಕ್ಕಂತೆ ಈ ಘಟಕಕ್ಕೆ ಬಸ್ ಒದಗಿಸಿಲ್ಲ. ಗ್ರಾಮೀಣ ಭಾಗದಲ್ಲಿ ಸಂಚರಿಸಲು ಎಂಟು ಬಸ್‌ಗಳನ್ನು ಮಾತ್ರ ನೀಡಲಾಗಿದೆ. ಅವು ಹಳ್ಳಿಗಳಿಗೆ ಸಂಚರಿಸುತ್ತಿವೆ.
ಹುಬ್ಬಳ್ಳಿ-ಶಿರಸಿಯತ್ತ ಬಸ್‌ಗಳನ್ನು ಸರಿಯಾಗಿ ಓಡಿಸುತ್ತಿಲ್ಲ. ಪ್ರತಿ ದಿನ ಮುಂಡಗೋಡ, ಕಾತೂರ, ಪಾಳಾ, ಮಳಗಿ ಸೇರಿದಂತೆ ವಿವಿಧ ಗ್ರಾಮಗಳು, ಹುಬ್ಬಳ್ಳಿ ಹಾಗೂ ಶಿರಸಿಗೂ 300ರಿಂದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆ-ಕಾಲೇಜ್‌ಗಳಿಗೆ, ನೌಕರರು ಹಾಗೂ ಸಾರ್ವಜನಿಕರು ಹೋಗಿ ಬರುತ್ತಾರೆ.
ಆದರೆ, ಸಮಯಕ್ಕೆ ಸರಿಯಾಗಿ ಹೋಗಲು ಸಮರ್ಪಕ ಬಸ್ ವ್ಯವಸ್ಥೆಯಿಲ್ಲ. ಶಿರಸಿ ಹಾಗೂ ಹುಬ್ಬಳ್ಳಿಯಿಂದ ಮುಂಡಗೋಡ ಮಾರ್ಗವಾಗಿ ಸಂಚರಿಸುವ ಬಸ್‌ಗಳು ಜನರನ್ನು ತುಂಬಿಸಿಕೊಂಡೇ ಬರುತ್ತವೆ. ಇದರಿಂದಾಗಿ ಮುಂಡಗೋಡದಲ್ಲಿ ಬಸ್ ಹತ್ತಲು ಸಾಧ್ಯವಾಗದೇ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಹೆಚ್ಚುವರಿ ಬಸ್ ಓಡಿಸುವಂತೆ ಮಳಗಿ, ಪಾಳಾ, ಕಾತೂರ, ಮುಂಡಗೋಡ ಪಟ್ಟಣದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಗೆ ಸ್ಪಂದಿಸಿ ಮುಂಡಗೋಡದಿಂದ ಹುಬ್ಬಳ್ಳಿಗೆ ಬೆಳಗ್ಗೆ 7.15 ಹಾಗೂ 7.45ಕ್ಕೆ ಹಾಗೂ ಶಿರಸಿಗೆ 7.45ಕ್ಕೆ ಬಸ್ ಬಿಡಲಾಗಿದೆ.
ಅದರಂತೆ 8.30, 9 ಹಾಗೂ 9.30ಕ್ಕೆ ಮುಂಡಗೋಡದಿಂದ ಶಿರಸಿ ಹಾಗೂ ಹುಬ್ಬಳ್ಳಿಗೆ ಬಸ್ ಓಡಿಸಬೇಕು ಎಂದು ವಿದ್ಯಾರ್ಥಿಗಳು, ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.
ಒಂದೆಡೆ ಶಿರಸಿಯಿಂದ ತಡಸವರೆಗೆ ರಾಜ್ಯ ಹೆದ್ದಾರಿ ಹೊಂಡಗಳ ಹೆದ್ದಾರಿಯಾಗಿ ಮಾರ್ಪಟ್ಟಿದೆ. ಸಮರ್ಪಕವಾಗಿ ಹೊಂಡಗಳನ್ನು ಮುಚ್ಚುವ ಕೆಲಸವಾಗಿಲ್ಲ. ಇದರಿಂದ ಈ ಮಾರ್ಗದಲ್ಲಿ ವಾಹನಗಳನ್ನು ಓಡಿಸಲು ವಾಹನ ಚಾಲಕರು ಪರದಾಡುವಂತಾಗಿದೆ.
ಇನ್ನೂ ಬೈಕ್ ಸವಾರರು ಆಗಾಗ ಬಿದ್ದು ಎದ್ದು ಹೋಗುವುದು ಸಾಮಾನ್ಯವಾಗಿದೆ.
"

"ಮುಂಡಗೋಡ ಬಸ್ ಡಿಪೋ ಆರಂಭಗೊಂಡು ಹಲವು ತಿಂಗಳು ಕಳೆದಿವೆ. ಆದರೆ, ಶಿರಸಿ, ಹುಬ್ಬಳ್ಳಿಗೆ ತೆರಳಲು ತೊಂದರೆ ಆಗುತ್ತಿದೆ. ಹೆಚ್ಚುವರಿ ಬಸ್ ಓಡಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

— ಮಂಜುನಾಥ ಎಸ್. ವಿದ್ಯಾರ್ಥಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net