ಮುಂಡಗೋಡ: ತಾಲೂಕಿನ ಕಾತೂರ ಪ್ರಾಥಮಿಕ ಕೃಷಿ ಸಹಕಾರಿ ಸಂದ 64ನೇ ವಾಷಿರ್ಕ ಸಭೆಯಲ್ಲಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ಮಂಗಳವಾರ ಜರುಗಿತು.
ಕಾತೂರ ಸಹಕಾರಿ ಸಂಘದ ಆವರಣದಲ್ಲಿ ವಾರ್ಷಿಕ ವರದಿ ಹಾಗೂ ಅಡಾವೆ ಪತ್ರಿಕೆ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಸಂದ ಮುಖ್ಯಕಾರ್ಯನಿರ್ವಾಹಕ ಹಾಗೂ ಸಿಬ್ಬಂದಿ ಸಭೆಗೆ ವಾರ್ಷಿಕ ವರದಿ ಓದಿ ಹೇಳಿದರು. ಈ ವೇಳೆ ಕೆಲ ರೈತರು ಅಡಾವೆ ಪತ್ರಿಕೆಯಲ್ಲಿನ ಕಾಣಿಸಿದ ಲಾಭ&ನಷ್ಟಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಆದರೆ, ಕೆಲ ರೈತರು ಸಂಘದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ. ಸಹಕಾರಿ ಕಲಂ 64ರಡಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮತ್ತಷ್ಟು ರೈತರು ಸಂಘವು ಉತ್ತಮವಾಗಿದೆ. ಅವ್ಯವಹಾರ ನಡೆದಿದೆ ಎಂದು ಆರೋಪಿಸುವವರು ದಾಖಲೆ ನೀಡಿ ಮಾತನಾಡಿ ಎಂದರು.
ಎರಡು ಗುಂಪುಗಳ ನಡುವೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸಿಪಿಐ ರಮೇಶ ಹಾನಪುರ ಹಾಗೂ ಪಿಎಸ್ಐ ಮಂಜುನಾಥ ಗೌಡ ಹಾಗೂ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಗಲಾಟೆ ಆಗದಂತೆ ನೋಡಿಕೊಂಡರು.
ಸಭೆಯಲ್ಲಿ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ತೋರೂರ ಮಾತನಾಡಿ, ಸಂದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಕಾನೂನು ಬದ್ಧವಾಗಿ ರೈತರಿಗೆ ಸಾಲ ನೀಡಿದ್ದೇವೆ. ಸಾಲ ತುಂಬದ ರೈತರ ಮೇಲೆ ಪ್ರಕರಣ ದಾಖಲಿಸುತ್ತೇವೆ. ಆದರೆ, ರೈತರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವುದು ಬೇಡ. ಎಲ್ಲವೂ ಸರಿ ಇದ್ದಾಗ ಯಾವುದೇ ತನಿಖೆ ಅವಶ್ಯಕತೆ ಇಲ್ಲ ಎಂದು ಮಾಹಿತಿ ನೀಡಿದರು. ಗದ್ದಲದ ನಡುವೆಯೇ ಸಭೆ ಮುಕ್ತಾಯಗೊಳಿಸಲಾಯಿತು.
ಸಂಘದ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಉಪಾಧ್ಯಕ್ಷೆ ಈರಮ್ಮ ಎಸ್.ದೊಡ್ಡಕಂತಿಮಠ ಹಾಗೂ ಆಡಳಿತ ಸಮಿತಿಯ ಸದಸ್ಯರು, ರೈತರು ಪಾಲ್ಗೊಂಡಿದ್ದರು.