Marikamba Devi ಮಾರಿಕಾಂಬಾ ದೇವಿ ಭಕ್ತಾದಿಗಳಿಗೆ ಸೌಲಭ್ಯ ಕಲ್ಪಿಸಲು ಸನ್ನದ್ಧ
ಮಾರಿಕಾಂಬಾ ದೇವಿ ( Marikamba Devi)
Published on:
Copied
Follow Us
ಶಿರಸಿ: ಮಂಗಳವಾರ ಆರಂಭಗೊಂಡಿರುವ ಪ್ರಸಿದ್ಧ ಮಾರಿಕಾಂಬಾ ದೇವಿ Marikamba Devi ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲು ನಗರಸಭೆಯು ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ಒಟ್ಟು 2.5 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಪೌರಾಯುಕ್ತ ಪ್ರಕಾಶ ಚೆನ್ನಪ್ಪ ತಿಳಿಸಿದರು.
ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆಯ ವೇಳೆ ನೈರ್ಮಲ್ಯ ಕಾಪಾಡಲು ಮತ್ತು ಮೂಲಸೌಕರ್ಯ ಒದಗಿಸುವುದಕ್ಕಾಗಿ ಹೆಚ್ಚುವರಿಯಾಗಿ 50 ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದೇವೆ. ಇವರ ಜತೆಗೆ ನಗರಸಭೆಯ 104 ಸಿಬ್ಬಂದಿಯೂ ಕಾರ್ಯನಿರ್ವಹಿಸಲಿದ್ದಾರೆ.
ನಗರಸಭೆಯ ಕಾಯಂ ಶೌಚಗೃಹಗಳು ಹಾಗೂ ತಾತ್ಕಾಲಿಕ ಶೌಚಗೃಹಗಳಿಗೂ ಈ ಬಾರಿ ದಿನದ 24 ಗಂಟೆಯೂ ನೀರಿನ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ನಗರದಾದ್ಯಂತ ಬೆಳಕಿನ ವ್ಯವಸ್ಥೆ ಹಾಗೂ ಸಿಸಿ ಕ್ಯಾಮರಾ ಕಣ್ಗಾವಲಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜಾತ್ರಾ ಸಂದರ್ಭದಲ್ಲಿ ನಗರದ ಪ್ರಮುಖ ರಸ್ತೆಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಸುಗಮ ಸಂಚಾರಕ್ಕಾಗಿ ಹೊಸ ಎಲ್ಇಡಿ ಬೀದಿ ದೀಪಗಳನ್ನು ಖರೀದಿಸಿ ಅಳವಡಿಸಲಾಗಿದೆ.
ಜಾತ್ರಾ ಸ್ಥಳ ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿ ನಿರ್ಮಿಸಲಾದ ತಾತ್ಕಾಲಿಕ ಶೌಚಗೃಹಗಳಿಗೆ ಹಾಗೂ ನಗರದ ಬಸ್ ತಂಗುದಾಣಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಮಾರಿಕಾಂಬಾ ದೇವಸ್ಥಾನದ ಎದುರು ಕೆಟ್ಟುಹೋಗಿದ್ದ ಹೈಮಾಸ್ಟ್ ದೀಪವನ್ನು ದುರಸ್ತಿಗೊಳಿಸಲಾಗಿದ್ದು, ರಾಘವೇಂದ್ರ ಸರ್ಕಲ್‌ನಲ್ಲಿರುವ ಹೈಮಾಸ್ಟ್ ದೀಪವನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ಇಡೀ ಶಿರಸಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಜಾತ್ರಾ ನಿಮಿತ್ತ ವಿಶೇಷ ದೀಪಾಲಂಕಾರ ಮಾಡಲಾಗಿದೆ ಎಂದು ವಿವರಿಸಿದರು.
ಸುರಕ್ಷತೆಯ ದೃಷ್ಟಿಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಹೈಟೆಕ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನೀರು ಮತ್ತು ವಿದ್ಯುತ್ ಸರಬರಾಜು ಕೇಂದ್ರಗಳಾದ ಭೀಮನಗುಡ್ಡ, ಮಾರಿಗದ್ದೆ, ಅಡ್ಕಳ್ಳಿ ಹಾಗೂ ಕೆಂಗ್ರೆಯಲ್ಲಿ ಯುಪಿಎಸ್ ಹಾಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಜಾತ್ರಾ ಗದ್ದೆಯಾದ ಬಿಡ್ಕಿಬೈಲ್ ಮತ್ತು ಕೋಣನಬೀದಿಯ ಸುತ್ತಮುತ್ತ 32 ಸಿಸಿ ಕ್ಯಾಮರಾಗಳನ್ನು ಬಾಡಿಗೆ ಆಧಾರದ ಮೇಲೆ ಅಳವಡಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ನಗರದ ಪ್ರಮುಖ 22 ಸ್ಥಳಗಳಲ್ಲಿ ಸಿಸಿ ಕ್ಯಾಮರಾ, 5 ಕಡೆ ಮುಖ ಗುರುತಿಸುವ ಕ್ಯಾಮರಾ ಹಾಗೂ ಒಂದು ಅತ್ಯಾಧುನಿಕ ಪಿಟಿಜೆಡ್ ಕ್ಯಾಮರಾವನ್ನು ಬಳಸಲಾಗಿದೆ.
ಜಾತ್ರೆ ಮುಗಿದ ನಂತರ ಪಾರ್ಕಿಂಗ್ ಸ್ಥಳಗಳಲ್ಲಿ ಬಳಸಲಾದ ಎಲ್ಇಡಿ ಫ್ಲಡ್ ಲೈಟ್‌ಗಳನ್ನು ನಗರದ ವಿವಿಧ ಹೈಮಾಸ್ಟ್ ಕಂಬಗಳಿಗೆ ಅಳವಡಿಸಿ ಮರುಬಳಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಜಾತ್ರೆಯ ಅಂಗವಾಗಿ ನಗರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳ ಮರು ಡಾಂಬರೀಕರಣ ಮಾಡಲಾಗಿದ್ದು, ಸಂಚಾರ ದಟ್ಟಣೆ ನಿಯಂತ್ರಿಸಲು ಬನವಾಸಿ ರಸ್ತೆಯ ಶಿರ್ಸಿಕರ್ ಕಾಲನಿಯಿಂದ ಕರಿಗುಂಡಿ ರಸ್ತೆಯನ್ನು ಸಂಪರ್ಕಿಸುವ ತಾತ್ಕಾಲಿಕ ರಸ್ತೆಯನ್ನೂ ನಿರ್ಮಾಣ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಇಂಜಿನಿಯರ್‌ಗಳಾದ ಶಿವರಾಜ, ಗಣೇಶ ಭಟ್, ಪ್ರಶಾಂತ ವೆರ್ಣೇಕರ್ ಹಾಗೂ ಸೂಫಿಯಾನ್ ಬ್ಯಾರಿ ಉಪಸ್ಥಿತರಿದ್ದರು.