ಜಿಲ್ಲೆಯ ಹೈನುಗಾರಿಕೆ ಈಗ ಬದಲಾಗಿದೆ. ಕೆಲ ದಶಕಗಳ ಹಿಂದೆ ನಾಡ ಆಕಳುಗಳನ್ನು ಕೊಟ್ಟಿಗೆ ತುಂಬ ಕಟ್ಟಿ ಸಾಕುತ್ತಿದ್ದ ದಿನಗಳು ಈಗ ದೂರವಾಗಿದ್ದು, ಹಳ್ಳಿಗಳಲ್ಲಿಯೂ ಜರ್ಸಿ, ಎಚ್‌ಎಫ್‌ನಂತಹ ಸುಧಾರಿತ ತಳಿಗಳನ್ನು ಸಾಕುತ್ತಿದ್ದಾರೆ. ಇಂದಿನ ಮೇವು ವೆಚ್ಛ, ದುಬಾರಿಯಾದ ಹಿಂಡಿ ದರದಿಂದಾಗಿ ಹೈನುಗಾರಿಕೆಯೂ ರೈತರಿಗೆ ಕಠಿಣವಾಗಿದೆ. ಅನೇಕ ರೈತರು ಹೈನುಗಾರಿಕೆಯನ್ನು ತ್ಯಜಿಸಿದ್ದರೆ ಉಳಿದವರು ತಮ್ಮ ಕೊಟ್ಟಿಗೆಯಲ್ಲಿ ಒಂದು ಅಥವಾ ಎರಡು ಆಕಳುಗಳ ಸಾಕುವಿಕೆಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ ಗಂಡು ಕರುಗಳು ( male-calves ) ಹುಟ್ಟಿದರೆ ರೈತರಿಗೆ ನುಂಗಲಾರದ ತುತ್ತಿನಂತಾಗುತ್ತದೆ. ಜಿಲ್ಲೆಯಲ್ಲಿ ಕೃಷಿ ಭೂಮಿಗಳು, ಭತ್ತದ ಗದ್ದೆಗಳೆಲ್ಲ ಅಡಕೆ ತೋಟಗಳಾಗಿ ಈಗ ಬದಲಾಗಿವೆ. ಹೀಗಾಗಿ, ಭೂಮಿ ಹೂಳುವ ಅಗತ್ಯತೆ ಇಲ್ಲದ ಕಾರಣ ಎತ್ತುಗಳ ಬಳಕೆ ಜಿಲ್ಲೆಯಲ್ಲಿ ಬಹುತೇಕ ನಿಂತಿದೆ. ಅಲ್ಲದೇ ಜರ್ಸಿ ಅಥವಾ ಎಚ್‌ಎಫ್ ಗಂಡು ಕರುಗಳು ಕೃಷಿ ಕಾರ್ಯಕ್ಕೆ ಬಳಕೆ ಆಗುವುದಿಲ್ಲ. ಮೇವಿನ ಕೊರತೆಯ ಈ ದಿನಗಳಲ್ಲಿ ರೈತರಿಗೆ ಸಾಕಲೂ ಸಾಧ್ಯವಾಗದೇ, ಕಟುಕರಿಗೂ ಮಾರಾಟ ಮಾಡಲು ಮನಸ್ಸು ಒಪ್ಪದೇ ಕೊಟ್ಟಿಗೆಯಲ್ಲೇ ರೈತರ ನಿರ್ಲಕ್ಷ್ಯದ ನಡುವೆ ಬೆಳೆಯುತ್ತವೆ. ಹೀಗಾಗಿ, ಗಂಡು ಕರು ಹುಟ್ಟಿದರೇ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ.