ಶಿರಸಿಯಲ್ಲಿ ತಳಮಟ್ಟದಲ್ಲಿ ವಿಮಾನ‌ ಹಾರ್ತಿರೋದು ಈ ಕಾರಣಕ್ಕೆ

ವಿಮಾನ ಹಾರಾಟ ನಡೆಸಲಿರುವ ನಕ್ಷೆ
ವಿಮಾನ ಹಾರಾಟ ನಡೆಸಲಿರುವ ನಕ್ಷೆ
Published on: 

ಕಾರವಾರ: ಖನಿಜ ನಿಕ್ಷೇಪಗಳನ್ನು ಹುಡುಕಲು ಅನುಕೂಲವಾಗುವಂತೆ ಭೂಭೌತಿಕ ನಕ್ಷೆ ತಯಾರಿಕೆಗಾಗಿ ಜಿಲ್ಲೆಯ ವಿವಿಧೆಡೆ ಕೆಳ ಹಂತಗಳಲ್ಲಿ ವಿಮಾನ ಹಾರಾಟ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ಜಿಲ್ಲಾ ಪೊಲೀಸ್ ಇಲಾಖೆ ಸಂಬಂಧಪಟ್ಟ ಸಂಸ್ಥೆಯಿಂದ ಮಾಹಿತಿ ಸಂಗ್ರಹಿಸಿದೆ. ವಿಮಾನವು ಮಂಗಳೂರು, ಹುಬ್ಬಳ್ಳಿ ಏರ್‌ಪೋರ್ಟ್ಗಳಿಂದ ಕಾರ್ಯಾಚರಿಸುತ್ತಿದ್ದು, ಇನ್ನೂ ಕೆಲ ದಿನ ಜಿಲ್ಲೆಯ ಇತರ ಭಾಗಗಳಲ್ಲೂ ಸಮೀಕ್ಷೆ ನಡೆಸುವ ಸಾಧ್ಯತೆ ಇದೆ.
ಶಿರಸಿ, ಯಲ್ಲಾಪುರ ತಾಲೂಕಿನ ಕೆಲವು ಭಾಗಗಳಲ್ಲಿ ಕೆಲ ದಿನಗಳಿಂದ ಅತ್ಯಂತ ಕೆಳ ಹಂತದಲ್ಲಿ ವಿಮಾನ ಹಾರಾಟ ನಡೆಯುತ್ತಿದೆ. ಬೇಡ್ತಿ-ಹಿರೇವಡ್ಡತ್ತಿ ನದಿ ಜೋಡಣೆಯ ಸಮೀಕ್ಷೆಯನ್ನು ವಿಮಾನ ನಡೆಸಿದೆಯೇ ಎಂದು ಇಲ್ಲಿನ ಜನ ಆತಂಕದಲ್ಲಿದ್ದಾರೆ. ಆದರೆ, ಇದು ಯಾವುದೇ ಯೋಜನೆಯ ಸರ್ವೆಯಲ್ಲ. ಇಡೀ ದೇಶದಲ್ಲಿ ನಡೆಯುತ್ತಿರುವ ಸರ್ವೇಕ್ಷಣೆಯಾಗಿದೆ ಎಂದು ಪತ್ರ ಸ್ಪಷ್ಟಪಡಿಸಿದೆ.
ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ(ಜಿಐಎಸ್)ನ ದೂರ ಸಂವೇದಿ ಮತ್ತು ವೈಮಾನಿಕ ಸಮೀಕ್ಷಾ ವಿಭಾಗದಿಂದ ರಾಷ್ಟ್ರೀಯ ವೈಮಾನಿಕ ಭೂಭೌತಿಕ ನಕ್ಷೆ ತಯಾರಿಕೆಯ ಕಾರ್ಯಕ್ರಮ(ಎನ್‌ಎಜಿಎಂಪಿ)ದಡಿ ಈ ಸಮೀಕ್ಷೆ ದೇಶದ 21 ಬ್ಲಾಕ್‌ಗಳಲ್ಲಿ 2017 ರಿಂದ ನಡೆದಿದೆ. ರಾಷ್ಟ್ರೀಯ ಖನಿಜ ಅನ್ವೇಷಣಾ ಅಭಿವೃದ್ಧಿ ಟ್ರಸ್ಟ್ ಇದಕ್ಕೆ ಧನ ಸಹಾಯ ನೀಡಿದೆ. ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಕೆಲವು ಜಿಲ್ಲೆಗಳನ್ನು ಒಳಗೊಂಡ 56,664 ಚದರ ಕಿ.ಮೀ. ಪ್ರದೇಶದಲ್ಲಿ ಸರ್ವೇ ನಡೆದಿದೆ. ಈ ವರ್ಷ ಫೆಬ್ರವರಿ ತಿಂಗಳಿಂದ ಮಂಗಳೂರು ವಿಮಾನ ನಿಲ್ದಾಣದಿಂದ ಸಮೀಕ್ಷೆ ಪ್ರಾರಂಭಿಸಲಾಗಿದೆ. ರಾಜ್ಯದ ಉತ್ತರ ಕನ್ನಡದ ಜೊತೆ ಧಾರವಾಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ ಸಂಪೂರ್ಣ ಭಾಗ, ದಕ್ಷಿಣ ಕನ್ನಡ, ಬೆಳಗಾವಿ, ಹಾಸನದ ಕೆಲ ಭಾಗಗಳನ್ನು ಈ ವ್ಯಾಪ್ತಿಯಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಜಿಐಎಸ್ ಸ್ಪಷ್ಟಪಡಿಸಿದೆ.
ಮ್ಯಾಗ್ನೆಟಿಕ್, ಗ್ರೇಡಿಯೊಮೆಟ್ರಿ ಮತ್ತು ರೇಡಿಯೊಮೆಟ್ರಿಕ್ ಸಂವೇದಕಗಳನ್ನು ಬಳಸಿಕೊಂಡು ಭೂ ಭೌತಿಕ ಸಮೀಕ್ಷೆಗಳನ್ನು ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ದೇಶದ ಸ್ಪಷ್ಟ ಭೂವೈಜ್ಞಾನಿಕ ಸಾಮರ್ಥ್ಯವಿರುವ (ಒಜಿಪಿ) ಪ್ರದೇಶಗಳು ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಏಕರೂಪದ ವೈಮಾನಿಕ-ಭೂಭೌತಿಕ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ದೇಶದ ಭೂಗರ್ಭದ ಭೂವಿಜ್ಞಾನವನ್ನು ಅರ್ಥಮಾಡಿಕೊಳ್ಳಲು, ಮಾದರಿಗಳನ್ನು ರೂಪಿಸಲು ಮತ್ತು ಭೂಮಿಯ ಆಳದಲ್ಲಿ ಅಡಗಿರುವ ಖನಿಜ ಸಂಪನ್ಮೂಲಗಳನ್ನು ಅನ್ವೇಷಿಸಲು ಈ ದತ್ತಾಂಶವು ಅತ್ಯಗತ್ಯವಾಗಿದೆ. ಇತರ ಭೂವೈಜ್ಞಾನಿಕ ದತ್ತಾಂಶಗಳೊಂದಿಗೆ ವೈಮಾನಿಕ-ಭೂಭೌತಿಕ ದತ್ತಾಂಶವನ್ನು ಸಂಯೋಜಿಸುವುದರಿಂದ ದೇಶದ ಖನಿಜ ಉದ್ಯಮದಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆಯುವ ನಿರೀಕ್ಷೆಯಿದೆ ಎಂದು ತಿಳಿಸಲಾಗಿದೆ.
ಏನೇನು ಅನುಕೂಲ..?
ನೆಲಮಟ್ಟದಿಂದ 80 ಮೀಟರ್ ಎತ್ತರದಲ್ಲಿ 300 ಮೀಟರ್ ಏಕರೂಪದ ಸಾಲಿನ ಅಂತರದೊಂದಿಗೆ, ಒಟ್ಟು 2,07,768 ಲೈನ್ ಕಿಮೀ ಕಾಂತೀಯ ಮತ್ತು ಸ್ಪೆಕ್ಟ್ರೋಮೆಟ್ರಿಕ್ ದತ್ತಾಂಶವನ್ನು ಸಂಗ್ರಹಿಸಲಾಗುವುದು. ಯೋಜನೆಯು ಪೂರ್ಣಗೊಂಡ ನಂತರ, ಈ ದತ್ತಾಂಶಗಳನ್ನು ಅನ್ವೇಷಣಾ ಸಂಸ್ಥೆಗಳು, ಸಂಶೋಧನಾ ವಿಜ್ಞಾನಿಗಳು ಮತ್ತು ಇತರ ಪಾಲುದಾರರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಜಿಐಎಸ್ ತಿಳಿಸಿದೆ.
ಈ ಸಮೀಕ್ಷೆಯಿಂದ ಖನಿಜ ಅನ್ವೇಷಣಾ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಕಡಿಮೆ ಅವಧಿಯಲ್ಲಿ ದೇಶವ್ಯಾಪಿ ಏಕರೂಪದ ಮೂಲಭೂತ ಕಾಂತೀಯ ಮತ್ತು ವಿಕಿರಣಮಾಪಕ ದತ್ತಾಂಶ ಲಭ್ಯವಾಗಲಿದೆ. ಖನಿಜ ಅನ್ವೇಷಣೆಯನ್ನು ಉತ್ತೇಜಿಸಲು, ನಿಕ್ಷೇಪವಿರುವ ಸಂಭಾವ್ಯ ವಲಯಗಳು ಮತ್ತು ಅದರ ಭೂವೈಜ್ಞಾನಿಕ ಲಕ್ಷಣಗಳನ್ನು ಗುರುತಿಸುವುದು, ದೇಶದ ಭೂಗರ್ಭದ ಭೂವೈಜ್ಞಾನಿಕ ಮತ್ತು ರಚನಾತ್ಮಕ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವುದು ಈ ಸಮೀಕ್ಷೆಯ ಮೂಲ ಉದ್ದೇಶವಾಗಿದೆ. ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.