ಸಾಹಿತ್ಯವೆಂಬುದು ಬದುಕಿನ ಮೌಲ್ಯಗಳ ಅಭಿವ್ಯಕ್ತಿ

Seetalakshmi Hegde Felisitated in honnavara
ಹೊನ್ನಾವರದಲ್ಲಿ ಆಯೋಜಿಸಿದ್ದ ಸಾಹಿತಿ-ಮಾಹಿತಿ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸೀತಾಲಕ್ಷ್ಮೀ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಮಾನಾಸುತ, ಜಯದೇವ ಬಳಗಂಡಿ ಇತರರಿದ್ದರು.
Published on: 

ಹೊನ್ನಾವರ: ಸಾಹಿತ್ಯವೆಂಬುದು ಕೇವಲ ಅಕ್ಷರಗಳ ಜೋಡಣೆಯಲ್ಲ, ಅದು ಮನಸಿನ ಭಾವನೆಗಳು, ಅನುಭವಗಳು ಹಾಗೂ ಬದುಕಿನ ಮೌಲ್ಯಗಳ ಅಭಿವ್ಯಕ್ತಿ. ಇಂದು ಸಾಹಿತ್ಯ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಹಿರಿಯ ಸಾಹಿತಿ ಸೀತಾಲಕ್ಷ್ಮೀ ಹೆಗಡೆ ಹೇಳಿದರು.

ಪಟ್ಟಣದ ನಮ್ಮನೆ ಭಟ್ಟರ ಹೊಟೇಲ್‌ನಲ್ಲಿ ಸತ್ವಾಧಾರ ೌಂಡೇಶನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತಿ-ಮಾಹಿತಿ ಕಾರ್ಯಕ್ರಮದಲ್ಲಿ ತಮ್ಮ ಪುಸ್ತಕಗಳನ್ನು ಹಸ್ತಾಂತರಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಇಂದು ಆಡಂಬರವಿಲ್ಲದೆ ದೊರೆತ ಸನ್ಮಾನ ನನ್ನ ಪಾಲಿಗೆ ಎಂದಿಗೂ ಮರೆಯಲಾಗದ ಗೌರವ ಎಂದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಪತ್ರಕರ್ತ ಎಚ್.ಎಂ. ಮಾರುತಿ ಮಾತನಾಡಿ, ಇಂದು ಗ್ರಂಥಾಲಯಗಳು ಓದುಗರಿಲ್ಲದೇ ಬರಿದಾಗುತ್ತಿವೆ. ಪತ್ರಿಕೆ ಓದುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಹಿತಿಗಳ ಪರಿಚಯ, ಅವರ ಅನುಭವ ಹಾಗೂ ಸಾಹಿತ್ಯ ಸಾಧನೆಯನ್ನು ಜನರಿಗೆ ತಲುಪಿಸುವ ಸಾಹಿತಿ ಮಾಹಿತಿ ಕಾರ್ಯಕ್ರಮ ಅರ್ಥಪೂರ್ಣ ಪ್ರಯತ್ನವಾಗಿದ್ದು ಸಾಹಿತಿಗಳು ಹಾಗೂ ಓದುಗರ ನಡುವಿನ ಕೊಂಡಿಯಾಗಿ ಇಂತಹ ಕಾರ್ಯಕ್ರಮಗಳು ಕಾರ್ಯನಿರ್ವಹಿಸುತ್ತವೆ ಎಂದರು.

ಹಿರಿಯ ಸಾಹಿತಿ ಮಾನಾಸುತ ಅಧ್ಯಕ್ಷತೆ ವಹಿಸಿದ್ದರು.

ಸಾಮಾಜಿಕ ಚಿಂತಕ ಜಯದೇವ ಬಳಗಂಡಿ ಸಾಹಿತಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಉದ್ದೇಶ ಹಾಗೂ ಸಾಹಿತಿಗಳ ಕಿರುಪರಿಚಯದೊಂದಿಗೆ ‘ನಮ್ಮನೆ ಭಟ್ಟರ ಹೊಟೇಲ್’ ಮಾಲೀಕ ತಿಗಣೇಶ ಮಾಗೋಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸತ್ವಾಧಾರ ಫೌಂಡೇಶನ್ ಸಂಸ್ಥಾಪಕ ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಭಟ್ಟ ಸೂರಿ ಸಹಕರಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಿ.ಯು. ಭಟ್ಟ ಸಾಹಿತ್ಯಾಸಕ್ತರು ಇದ್ದರು.