ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯಲ್ಲಿ ಭಾನುವಾರ ಆಯೋಜಿಸಿದ್ದ ಮಲೆನಾಡ ಉತ್ಸವದಲ್ಲಿ ಪಶ್ಚಿಮ ಘಟ್ಟದ ರಕ್ಷಣೆಗಾಗಿ ಜನಾಂದೋಲನ ಕಾರ್ಯಕ್ರಮವನ್ನು ಪರಿಸರ ತಜ್ಞ ಡಾ. ರಾಜೇಂದ್ರ ಸಿಂಗ್ ಉದ್ಘಾಟಿಸಿದರು. ಶ್ರೀ ಮಾರುತಿ ಗುರೂಜಿ, ಡಾ. ಗುರುರಾಜ್ ಕೆ.ವಿ., ಶಿವಾನಂದ ಕಳವೆ, ದಿನೇಶ ಹೊಳ್ಳ, ಕೃಷ್ಣಮೂರ್ತಿ ಹೆಬ್ಬಾರ ಇತರರಿದ್ದರು.
ಹೊನ್ನಾವರ: ಪ್ರಕೃತಿ ರಕ್ಷಣೆಯು ಸನಾತನ ಧರ್ಮದ ಭಾಗವಾಗಿದೆ. ಶರಾವತಿ ನದಿಯ ರಕ್ಷಣೆಗೆ ಈ ನಾಡಿನ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ರಾಜಸ್ಥಾನದ ಪರಿಸರ ತಜ್ಞ ಡಾ. ರಾಜೇಂದ್ರ ಸಿಂಗ್ ಹೇಳಿದರು.
ತಾಲೂಕಿನ ಗೇರುಸೊಪ್ಪ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಸಂಸ್ಕೃತಿ ಕುಂಭ - ಮಲೆನಾಡ ಉತ್ಸವದ ಮೂರನೇ ದಿನವಾದ ಭಾನುವಾರ ಪಶ್ಚಿಮ ಘಟ್ಟದ ರಕ್ಷಣೆಗಾಗಿ ಜನಾಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಧು- ಸಂತರು ಪ್ರಕೃತಿಯ ರಕ್ಷಕರಾಗಿದ್ದರು. ಕರ್ನಾಟಕದಲ್ಲಿ ಶೇ. 84 ಅರಣ್ಯ ಇತ್ತು. ಪ್ರಸಕ್ತ ಕೇವಲ ಶೇ. 44ರಷ್ಟು ಮಾತ್ರ ಉಳಿದಿದೆ. ಶೇ. 40 ಕಾಡು ಏನಾಯಿತು. ಯಾರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗೆ ಮುಂದುವರಿದರೆ ಮುಂದಿನ ಪೀಳಿಗೆಯವರ ಪಾಡೇನು?. ವಿನಾಶಕಾರಿ ಜನರಿಂದ ಪ್ರಕೃತಿ ನಾಶವಾಗುವುದನ್ನು ತಡೆಯುವವರನ್ನು ನಾನು ದೇವರ ದಾಸರೆಂದೇ ಗುರುತಿಸುತ್ತೇನೆ. ಶರಾವತಿ ಉಳಿಯಬೇಕಾದರೆ ಯಾವ ತ್ಯಾಗಕ್ಕೂ ಈ ನಾಡಿನ ಪ್ರತಿಯೊಬ್ಬರೂ ಸಿದ್ಧರಾಗಬೇಕು ಎಂದರು.
ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ಯಾದಗಿರಿಯ ಶ್ರೀ ಶಾರದಾ ದತ್ತಪೀಠದ ಶ್ರೀ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತಿ ಮಹಾಸ್ವಾಮಿಜಿಯವರು, ಶಿರಳಗಿ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಪ್ಪೆ ಶಾಸ್ತ್ರಜ್ಞ ಪ್ರೊ. ಡಾ. ಗುರುರಾಜ್ ಕೆ.ವಿ., ಪರಿಸರವಾದಿ ಲೇಖಕ ಶಿವಾನಂದ ಕಳವೆ, ದಿನೇಶ ಹೊಳ್ಳ, ಕೃಷ್ಣಮೂರ್ತಿ ಹೆಬ್ಬಾರ ಇತರರಿದ್ದರು.
ಗೇರುಸೊಪ್ಪ ಶ್ರೀ ಕ್ಷೇತ್ರದ ವನವಾಸಿ ಸೀತಾರಾಮ ಮಂದಿರದಿಂದ ಬಂಗಾರಮಕ್ಕಿ ಕ್ಷೇತ್ರದವರೆಗೆ ಶರಾವತಿ ಉಳಿಸಿ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು. ಬಳಿಕ ಪಶ್ಚಿಮ ಘಟ್ಟದ ಮಾಹಿತಿ ಫಲಕವನ್ನು ಡಾ. ರಾಜೇಂದ್ರ ಸಿಂಗ್ ಉದ್ಘಾಟಿಸಿದರು.