ಅಂಕೋಲಾ ಕೆಎಲ್‌ಇ ಕಾಲೇಜ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಆರೋಗ್ಯ ಶಿಬಿರದಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು. ಡಾ.ಜಗದೀಶ ನಾಯ್ಕ, ಮಂಜುನಾಥ ಇಟಗಿ, ಡಾ.ಎಡ್ಲಿನ, ಶೈಲಜಾ ಭಂಡಾರಿ ಇಂದಿರಾ ನಾಯ್ಕ, ಪ್ರವೀಣಾ ನಾಯಕ, ರೇಖಾ ಬೂದಿಹಾಳ, ಅಶ್ವಿನಿ ಗೌಡ, ಭರತ ಆಗೇರ ಇತರರಿದ್ದರು.
ಅಂಕೋಲಾ: ವಿದ್ಯಾರ್ಥಿ ಜೀವನದಲ್ಲಿ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಯೋಗವನ್ನು ರೂಢಿಸಿಕೊಳ್ಳಬೇಕು ಎಂದು ಟಿಎಚ್‌ಒ ಡಾ.ಜಗದೀಶ ನಾಯ್ಕ ಹೇಳಿದರು.
ಇಲ್ಲಿಯ ಕೆಎಲ್‌ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಾರ್ಯಾಲಯ ಮತ್ತು ನಮ್ಮ ಕ್ಲಿನಿಕ್ ಪುರಲಕ್ಕಿಬೇಣ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು. ಶಿಕ್ಷಕರು ಸಮಾಜದ ದಾರಿದೀಪಗಳಿದ್ದಂತೆ. ನೀವು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿದ್ದರೆ ಮಾತ್ರ ಶಕ್ತಿಯುತವಾದ ಮುಂದಿನ ಪೀಳಿಗೆಯನ್ನು ಬೆಳೆಸಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಮಂಜುನಾಥ ಇಟಗಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಎಂಬುದು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಶಿಕ್ಷಕ ತರಬೇತಿ ಪಡೆಯುತ್ತಿರುವ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ, ಅನಾರೋಗ್ಯ ಪೀಡಿತರಾಗುತ್ತೀರಿ ಎಂದರು.
ನಮ್ಮ ಕ್ಲಿನಿಕ್ ಮೆಡಿಕಲ್ ಅಧಿಕಾರಿ ಡಾ.ಎಡ್ಲಿನ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶೈಲಜಾ ಭಂಡಾರಿ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಇಂದಿರಾ ನಾಯ್ಕ, ಉಪನ್ಯಾಸಕಿ ಪ್ರವೀಣಾ ನಾಯಕ, ರೇಖಾ ಬೂದಿಹಾಳ, ಅಶ್ವಿನಿ ಗೌಡ ಹಾಗೂ ಭರತ ಆಗೇರ, ಇತರರು ಉಪಸ್ಥಿತರಿದ್ದರು.
ಗಗನಾ ನಾಯಕ ಅಂಕಿತಾ ಅಂಕೋಲೆಕರ ಹಾಗೂ ಶ್ರೀನಿಧಿ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದಲ್ಲಿ ಒಟ್ಟು 64 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.