ಮಾರಿಕಾಂಬಾ ದೇವಿ ದರ್ಶನಕ್ಕೆ ಲಕ್ಷಾಂತರ ಭಕ್ತರು

ಜಾತ್ರಾ ಗದ್ದುಗೆಯಲ್ಲಿ ಆಸೀನಳಾದ ಶಿರಸಿಯ ಮಾರಿಕಾಂಬಾ ದೇವಿ ದರ್ಶನಕ್ಕೆ ಆಗಮಿಸಿದ ಭಕ್ತರ ದಂಡು.
ಜಾತ್ರಾ ಗದ್ದುಗೆಯಲ್ಲಿ ಆಸೀನಳಾದ ಶಿರಸಿಯ ಮಾರಿಕಾಂಬಾ ದೇವಿ ದರ್ಶನಕ್ಕೆ ಆಗಮಿಸಿದ ಭಕ್ತರ ದಂಡು.
Published on
ಶಿರಸಿ: ಜಾತ್ರಾ ಗದ್ದುಗೆಯಲ್ಲಿ ಆಸೀನಳಾದ ಮಾರಿಕಾಂಬಾ ದೇವಿಯ ದರ್ಶನಕ್ಕೆ ಮೊದಲ ದಿನವಾದ ಗುರುವಾರ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಬಿಡ್ಕಿ ಬೈಲಿನ ಸುತ್ತ ಮಧ್ಯಾಹ್ನದ ಉರಿ ಬಿಸಿಲಿನಲ್ಲೂ ಜನ ದಟ್ಟಣೆ ಇತ್ತು.
ಬುಧವಾರ ಶೋಭಾ ಯಾತ್ರೆ ಮೂಲಕ ಆಗಮಿಸಿದ ಮಾರಿಕಾಂಬಾ ದೇವಿಯನ್ನು ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಗುರುವಾರ ಬೆಳಗ್ಗೆ 5 ಗಂಟೆಯಿಂದ ಭಕ್ತಾದಿಗಳಿಗೆ ತಾಯಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಕ್ತರ ಸರತಿ ಸಾಲು ಬೆಳಗಿನಿಂದಲೇ ಆರಂಭಗೊಂಡಿದೆ. ಜಾತ್ರಾ ಚಪ್ಪರದ ಹೊರ ಭಾಗದಲ್ಲಿ, ಭಕ್ತರ ಸರತಿ ಸಾಲಿನುದ್ದಕ್ಕೂ ಈಗಾಗಲೇ ಮಾರಿಕಾಂಬಾ ದೇವಾಲಯದಿಂದ ನೆರಳಿನ ವ್ಯವಸ್ಥೆ ಮಾಡಲಾಗಿದೆ.
ಶಾಸಕ ಭೀಮಣ್ಣ ನಾಯ್ಕ ಅವರು ತಮ್ಮ ಪುತ್ರ ಅಶ್ವಿನ್ ಭೀಮಣ್ಣ ನಾಯ್ಕ ಅವರೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ಪತ್ನಿ ಅನಿತಾ ಮಧು ಬಂಗಾರಪ್ಪ ಮತ್ತು ಪುತ್ರ ಸೂರ್ಯ ಮಧು ಬಂಗಾರಪ್ಪ ಅವರು ಕೂಡ ದೇವಿಯ ದರ್ಶನ ಪಡೆದರು.
ನಗರದ ಉಣ್ಣೆಮಠಗಲ್ಲಿಯ ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಬೃಹತ್ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಶಾಸಕ ಭೀಮಣ್ಣ ನಾಯ್ಕ ಅವರು ಭೇಟಿ ನೀಡಿ, ಶುಭ ಹಾರೈಸಿದರು.
ಜಾತ್ರೆಯ ಸಂದರ್ಭದಲ್ಲಿ ದೂರದೂರುಗಳಿಂದ ಬರುವ ಭಕ್ತರಿಗೆ ಅನ್ನದಾನ ಮಾಡುವುದು ಶ್ರೇಷ್ಠ ಕಾರ್ಯ. ಶ್ರೀ ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್‌ನ ಈ ಕಾರ್ಯ ಶ್ಲಾಘನೀಯ. ಶಿರಸಿ ಮಾರಿಕಾಂಬಾ ದೇವಿಯ ಆಶೀರ್ವಾದ ಎಲ್ಲರ ಮೇಲಿರಲಿ ಹಾಗೂ ಇಂತಹ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಸಮಾಜದಲ್ಲಿ ಒಗ್ಗಟ್ಟು ಮೂಡಿಸುತ್ತವೆ ಎಂದು ಆಶಿಸಿದರು. ವ್ಯವಸ್ಥಿತವಾಗಿ ಕಾರ್ಯಕ್ರಮ ರೂಪಿಸಿದ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಸದಸ್ಯರ ಸೇವೆಯನ್ನು ಶಾಸಕರು ಶ್ಲಾಘಿಸಿದರು.
ಟ್ರಸ್ಟ್‌ನ ಪ್ರಮುಖರು, ಸ್ಥಳೀಯ ಮುಖಂಡರು ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು. ಟ್ರಸ್ಟ್ ವತಿಯಿಂದ ಶಾಸಕರನ್ನು ಗೌರವಿಸಲಾಯಿತು.

ತಹಸೀಲ್ದಾರ್ ರಚಿಸಿದ ಮಾರಿಕಾಂಬಾ ಸಾಹಿತ್ಯ

ಶಿರಸಿಯ ತಹಸೀಲ್ದಾರ್ ಆದ ಪಟ್ಟರಾಜ ಗೌಡ ಮಾರಿಕಾಂಬಾ ದೇವಿಯ ಕುರಿತಾದ ಹಾಡು ಈಗ ಪ್ರಸಿದ್ಧಿ ಪಡೆದಿದೆ. ಮಾರಿಕಾಂಬಾ ದೇವಿಯ ವೈಶಿಷ್ಟೃತೆಗಳ ಬಗ್ಗೆ ಅವರು ರಚಿಸಿದ ಸಾಹಿತ್ಯವನ್ನು ಕೆಲ ಉತ್ಸಾಹಿಗಳು ಎಐ ತಂತ್ರಜ್ಞಾನದ ಸಂಗೀತದೊಂದಿಗೆ ಹಾಡಿದ್ದು, ಈಗ ಮೊಬೈಲಿಂದ ಮೊಬೈಲ್ ಗೆ ಹರಿದಾಡುತ್ತಿದೆ.
ನಾಲ್ವರರ ಬಂಧನ
ಶಿರಸಿ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಅಪರಾಧ ಹಿನ್ನೆಲೆಯುಳ್ಳ ನಾಲ್ವರನ್ನು ನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಜಾತ್ರಾ ಮುಕ್ತಾಯದ ಹಿಂದಿನ ದಿನವಾದ ಮಾ. 3ರರವರೆಗೆ ಅವರನ್ನು ಬಂಧನದಲ್ಲಿಡಲಾಗುತ್ತಿದೆ ಎಂದು ತಹಸೀಲ್ದಾರ್ ಪಟ್ಟರಾಜ ಗೌಡ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net