ಶಿರಸಿ ತಾಲೂಕು ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಚಾತುರ್ಮಾಸ್ಯದ (Chaturmasya) ಅಂಗವಾಗಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಭಕ್ತರಿಂದ ಸೇವೆ ಸ್ವೀಕರಿಸಿದರು. ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ, ಈಶ್ವರ ಭಟ್, ಶಾಂತಾರಾಮ ಹೆಗಡೆ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸೋಂದಾ ಸ್ವರ್ಣವಲ್ಲಿಯಲ್ಲಿ ಚಾತುರ್ಮಾಸ್ಯ
ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ
ಭಕ್ತರಿಂದ ಪಾದುಕಾ ಪೂಜೆ
ಶಿರಸಿ: ಪ್ರತಿಯೊಬ್ಬ ಮನುಷ್ಯನೂ ಜನ್ಮತಃ ದೇವ, ಋಷಿ ಮತ್ತು ಪಿತೃ ಎಂಬ ಮೂರು ಮೂಲಭೂತ ಋಣಗಳನ್ನು ಹೊತ್ತು ಬಂದಿರುತ್ತಾನೆ.
ದೇವತೆಗಳು, ಋಷಿಗಳು ಹಾಗೂ ಪಿತೃಗಳಿಂದ ಪಡೆದಿರುವ ಅನುಗ್ರಹ ಮತ್ತು ಕೊಡುಗೆಗಳಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಈ ಋಣಗಳನ್ನು ತೀರಿಸುವ ಪ್ರಯತ್ನ ಮಾಡಬೇಕು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಚಾತುರ್ಮಾಸ್ಯ (Chaturmasya) ವ್ರತಾಚರಣೆ ಅಂಗವಾಗಿ ಭಾನುವಾರ ಶಿಷ್ಯ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ಶ್ರುತಿ ಹಾಗೂ ವೇದ ವಾಕ್ಯಗಳ ಆಧಾರದಲ್ಲಿ ಮನುಷ್ಯನ ಜೀವನದಲ್ಲಿರುವ ತ್ರಿಋಣಗಳ ಮಹತ್ವವನ್ನು ವಿವರಿಸಿದರು.
‘ದೇವತೆಗಳ ಅನುಗ್ರಹದಿಂದ ಜೀವ ಮತ್ತು ಶರೀರ ದೊರೆತಿರುವುದರಿಂದ ಪ್ರತಿಯೊಬ್ಬರೂ ದೇವ ಋಣವನ್ನು ಹೊಂದಿರುತ್ತಾರೆ. ಯಜ್ಞ, ನಿತ್ಯ ದೇವತಾ ಪೂಜೆ, ಜಪ ಹಾಗೂ ಪ್ರಾರ್ಥನೆಗಳ ಮೂಲಕ ದೇವ ಋಣವನ್ನು ತೀರಿಸುವ ಪ್ರಯತ್ನ ಮಾಡಬೇಕು.
ನಮಗೆ ಜ್ಞಾನ, ಸಂಸ್ಕೃತಿ ಹಾಗೂ ಧಾರ್ಮಿಕ ಪರಂಪರೆಯನ್ನು ನೀಡಿದ ಋಷಿ ಮುನಿಗಳ ಋಣವೂ ನಮ್ಮ ಮೇಲಿದೆ. ವೇದ-ಶಾಸ್ತ್ರಗಳ ಅಧ್ಯಯನ, ಜ್ಞಾನವನ್ನು ಮುಂದಿನ ಪೀಳಿಗೆಗೆ ಹಂಚುವುದು ಹಾಗೂ ಸನಾತನ ಪರಂಪರೆಯ ಸಂರಕ್ಷಣೆಯ ಮೂಲಕ ಋಷಿ ಋಣವನ್ನು ತೀರಿಸಬೇಕು’ ಎಂದರು.
ತಂದೆ-ತಾಯಿ ಹಾಗೂ ಪೂರ್ವಜರಿಂದ ಜೀವನ ದೊರೆತಿರುವುದರಿಂದ ಪಿತೃ ಋಣವೂ ಪ್ರತಿಯೊಬ್ಬರ ಮೇಲಿದೆ. ಶಾಸ್ತ್ರೋಕ್ತವಾಗಿ ಸತ್ಸಂತತಿಯನ್ನು ಬೆಳೆಸುವುದು, ಪಿತೃಗಳಿಗೆ ಶ್ರಾದ್ಧ, ತರ್ಪಣ ಮುಂತಾದ ಕರ್ತವ್ಯಗಳನ್ನು ನೆರವೇರಿಸುವ ಮೂಲಕ ಪಿತೃ ಋಣವನ್ನು ತೀರಿಸಬೇಕು ಎಂದು ಶ್ರೀಗಳು ವಿವರಿಸಿದರು.
ದೇವತೆಗಳು, ಋಷಿಗಳು ಮತ್ತು ಪಿತೃಗಳಿಂದ ಸಕಲ ಸೌಲಭ್ಯಗಳನ್ನು ಪಡೆದು, ಅವರಿಗೆ ಸಲ್ಲಬೇಕಾದ ಕೃತಜ್ಞತೆ ಮತ್ತು ಕರ್ತವ್ಯವನ್ನು ನಿರ್ವಹಿಸದೆ ಇರುವುದನ್ನು ಭಗವದ್ಗೀತೆಯ ವಾಕ್ಯದ ಆಧಾರದಲ್ಲಿ ಕಳ್ಳತನಕ್ಕೆ ಸಮಾನವೆಂದು ಹೇಳಬಹುದು.
ಸಮಾಜದಲ್ಲಿ ನಾವು ಪಡೆದಿರುವುದಕ್ಕೆ ಪ್ರತಿಯಾಗಿ ನೀಡಬೇಕಾದ ಕರ್ತವ್ಯವನ್ನು ಮರೆಯಬಾರದು. ಋಣ ತೀರಿಸುವ ಮನೋಭಾವ ಜೀವನದಲ್ಲಿ ಕೃತಜ್ಞತೆಯನ್ನು ಬೆಳೆಸುತ್ತದೆ ಎಂದರು.
ಎಲ್ಲರಿಗೂ ಯಜ್ಞಗಳನ್ನು ನೆರವೇರಿಸುವುದು, ವೇದ-ಶಾಸ್ತ್ರಗಳ ಸಂಪೂರ್ಣ ಅಧ್ಯಯನ ಮಾಡುವುದು ಅಥವಾ ಎಲ್ಲ ಧಾರ್ಮಿಕ ವಿಧಿವಿಧಾನಗಳನ್ನು ವಿಸ್ತೃತವಾಗಿ ಆಚರಿಸುವುದು ಸಾಧ್ಯವಾಗದಿರಬಹುದು.
ಅಂತಹ ಸಂದರ್ಭದಲ್ಲಿ ಪ್ರತಿದಿನ ಸಂಕ್ಷಿಪ್ತವಾಗಿಯಾದರೂ ಬ್ರಹ್ಮಯಜ್ಞ, ದೇವತಾ ಪ್ರಾರ್ಥನೆ, ಜಪ ಹಾಗೂ ಸ್ಮರಣೆಗಳನ್ನು ಭಕ್ತಿಯಿಂದ ಮಾಡಬೇಕು ಎಂದು ಶ್ರೀಗಳು ಹೇಳಿದರು.
ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿರಿಯ ಶ್ರೀ ಆನಂದಬೋಧೇಂದ್ರ ಸರಸ್ವತೀ ಶ್ರೀಗಳು ಉಪಸ್ಥಿತರಿದ್ದರು. ಪ್ರಮುಖರಾದ ಈಶ್ವರ ಭಟ್, ಶಾಂತಾರಾಮ ಹೆಗಡೆ ಇತರರು ಇದ್ದರು.