ಯಲ್ಲಾಪುರದ ಕಾಳಮ್ಮನಗರದಲ್ಲಿ ಇತ್ತೀಚೆಗೆ ಹತ್ಯೆಗೊಳಗಾದ ರಂಜಿತಾರ ಪುತ್ರನಿಗೆ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಿಂದ ಉಚಿತ ಶಿಕ್ಷಣದ(Free Education) ಪ್ರಮಾಣಪತ್ರವನ್ನು ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಪ್ರದಾನ ಮಾಡಿದರು.
Published on:
Copied
Follow Us
ಯಲ್ಲಾಪುರ: ಇತ್ತೀಚೆಗೆ ಮುಸ್ಲಿಂ ಯುವಕನಿಂದ ಹತ್ಯೆಗೊಳಗಾದ ದಲಿತ ಹಿಂದು ಮಹಿಳೆ ರಂಜಿತಾ ಅವರ ಪುತ್ರನಿಗೆ ಈಗಾಗಲೇ ನೀಡಿದ ವಾಗ್ದಾನಂದಂತೆ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಿಂದ ಉಚಿತ ಶಿಕ್ಷಣದ (Free Education) ಪ್ರಮಾಣಪತ್ರ ಪ್ರದಾನ ಮಾಡಲಾಯಿತು.
ಹತ್ಯೆ ಖಂಡಿಸಿ ನಡೆದ ಯಲ್ಲಾಪುರ ಬಂದ್ ಮತ್ತು ಪ್ರತಿಭಟನಾ ಸಭೆ ಸಂದರ್ಭದಲ್ಲಿ ಬಾಲಕನ ಮುಂದಿನ ಶಿಕ್ಷಣದ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದಾಗಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಪರವಾಗಿ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಪ್ರಕಟಿಸಿದ್ದರು.
ಅದೇ ದಿನ ಸಂಜೆ ಮೃತರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಬಿವೈ ವಿಜಯೇಂದ್ರ ಪಕ್ಷದ ಪರವಾಗಿ 5 ಲಕ್ಷ ರೂ. ನಗದು ಪರಿಹಾರ ನೀಡಿ, ವಿಶ್ವದರ್ಶನ ಸಂಸ್ಥೆ ಬಾಲಕನಿಗೆ ಉಚಿತ ಶಿಕ್ಷಣ ನೀಡಲು ಮುಂದೆ ಬಂದಿರುವುದನ್ನು ಉಲ್ಲೇಖಿಸಿ ಪ್ರಶಂಸೆ ಮಾಡಿದ್ದರು.
ಬುಧವಾರ ಸಂಜೆ ಯಲ್ಲಾಪುರದ ವಿವಿಧ ಹಿಂದು ಸಂಘಟನೆಗಳ ಪ್ರಮುಖರೊಂದಿಗೆ ಮೃತ ಮಹಿಳೆಯ ಮನೆಗೆ ತೆರಳಿ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಬಾಲಕನಿಗೆ ಉಚಿತ ಶಿಕ್ಷಣದ ಲಿಖಿತ ವಾಗ್ದಾನ ಪತ್ರವನ್ನು ನೀಡಿದರು.
ರಂಜಿತಾ ಮೇಲೆ ಹಂತಕ ಮಾರಣಾಂತಿಕ ದಾಳಿಯಾದ ವೇಳೆ ಅಂಬ್ಯುಲೆನ್ಸ್ ಸಿಗದೇ ಇದ್ದಾಗ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕರಿಸಿದ ಆಟೋ ಚಾಲಕ ಚಂದ್ರಶೇಖರ ಭೋವಿ ಅವರನ್ನು ಈ ವೇಳೆ ಸನ್ಮಾನಿಸಲಾಯಿತು.
ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ವಿಹಿಂಪ ತಾಲೂಕು ಅಧ್ಯಕ್ಷ ಗಜಾನನ ನಾಯ್ಕ, ಪ್ರಮುಖರಾದ ವೆಂಕಟ್ರಮಣ ಬೆಳ್ಳಿ, ಶ್ಯಾಮಿಲಿ ಪಾಟಣಕರ, ಶ್ರುತಿ ಹೆಗಡೆ, ಮಂಜುನಾಥ ಹೀರೇಮಠ, ಅನಂತ ಕಂಚಿಪಾಲ, ಗಿರೀಶ ಭಾಗ್ವತ ಇತರರಿದ್ದರು.