ರಾಜ್ಯೋತ್ಸವ ಪ್ರಶಸ್ತಿ ಉತ್ತರ ಕನ್ನಡಕ್ಕೆ ಅನ್ಯಾಯ

ಉಡುಪಿಯ ವೈದ್ಯರಿಗೆ ಉತ್ತರ ಕನ್ನಡವರು ಎಂಬ ಹೆಸರು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on: 

ಕಾರವಾರ: ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿದ್ದು, ಉತ್ತರ ಕನ್ನಡಕ್ಕೆ ಅನ್ಯಾಯವಾಗಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯದ 71 ಜನರಿಗೆ ನಾಡಿನ ಅತ್ಯುನ್ನತ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಅದರಲ್ಲಿ ಜಿಲ್ಲೆಯ ಒಬ್ಬರ ಹೆಸರೂ ಇಲ್ಲ.

ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಕಷ್ಟು ಗಣ್ಯರಿದ್ದಾರೆ. ಜಿಲ್ಲೆಯ ವಿವಿಧ ಶಾಸಕರು ನಾಲ್ಕಾರು ಹೆಸರುಗಳನ್ನು ಶಿಫಾರಸು ಮಾಡಿದ್ದರು. ಆದರೆ, ಅವುಗಳನ್ನು ಪರಿಗಣಿಸದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಉತ್ತರ ಕನ್ನಡಕ್ಕೆ ಪ್ರಶಸ್ತಿ ನೀಡದಿರುವುದು ಒಂದೆಡೆಯಾದರೆ, ಜಿಲ್ಲೆಯ ಹೆಸರಲ್ಲಿ ಬೇರೆಯವರು ಪ್ರಶಸ್ತಿ ಪಡೆಯುತ್ತಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಆ ಮೂಲಕ ಪ್ರಶಸ್ತಿ ಸಮಿತಿ ಉತ್ತರ ಕನ್ನಡಕ್ಕೆ ಅವಮಾನ ಮಾಡಲಾಗಿದೆ ಎಂದು ಜಿಲ್ಲೆಯ ಪ್ರಜ್ಞಾವಂತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯವರು ಎಂದು ಹೆಸರಿಸಲಾದ ಡಾ.ಜಿ.ಎಸ್.ಚಂದ್ರಶೇಖರ ಅವರು ಚಿಕ್ಕಮಗಳೂರು ಜಿಲ್ಲೆಗೆ ಸೇರಿದವರಾಗಿದ್ದು, ಉಡುಪಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಡಿಕೆಶಿ ಸಂಪುಟದಲ್ಲಿ ಮಂಕಾಳ ವೈದ್ಯ ಅವರ ಹೆಸರನ್ನು ಮೊದಲು ಸೇರಿಸಿ ನಂತರ ಅವರಿಗೆ ಅವಕಾಶ ನೀಡದೇ ಅವಮಾನ ಮಾಡಲಾಗಿತ್ತು. ರಾಜ್ಯೋತ್ಸವ ಪ್ರಶಸ್ತಿ ವಿಚಾರದಲ್ಲೂ ಅದೇ ರೀತಿ ಅವಮಾನವನ್ನು ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜಿಲ್ಲೆಯ ಸಚಿವರು ಇಲ್ಲದಿರುವುದೇ ಈ ಅನ್ಯಾಯಕ್ಕೆ ಕಾರಣವೇ ಎಂಬ ಪ್ರಶ್ನೆ ಮೂಡಿದೆ.

ಬಿಜೆಪಿ ವಿರೋಧ

ರಾಜ್ಯೋತ್ಸವ ಪ್ರಶಸ್ತಿ ನೀಡುವಲ್ಲಿ ರಾಜ್ಯ ಸರಕಾರ ಉತ್ತರ ಕನ್ನಡ ಜಿಲ್ಲೆಯನ್ನು ಸಂಪೂರ್ಣವಾಗಿ ಅವಗಣನೆ ಮಾಡಿದೆ ಎಂದು ಬಿಜೆಪಿ ವಕ್ತಾರ ಸದಾನಂದ ಭಟ್ ನಿಡಗೋಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯನ್ನು ಕಡೆಗಣಿಸಿರುವುದು ಖಂಡನೀಯ. ಎಲ್ಲ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿರುವ ಸಾಧಕರು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದರೂ ಅವರನ್ನು ಗುರುತಿಸದಿರುವುದು ಕಾಂಗ್ರೆಸ್ ಸರ್ಕಾರದ ನಿರ್ಲಕ್ಷವೋ ಅಥವಾ ಉತ್ತರ ಕನ್ನಡ ಜಿಲ್ಲೆಯ ಅವಗಣನೆಯೋ ಎಂಬುದನ್ನು ತಿಳಿಸಬೇಕು ಎಂದಿದ್ದಾರೆ.

ರಾಜ್ಯ ಸರ್ಕಾರ ಉತ್ತರ ಕನ್ನಡ ಜಿಲ್ಲೆಯನ್ನು ಯಾವ ರೀತಿ ನೋಡುತ್ತಿದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಬೇಡದ ಯೋಜನೆಗಳಿಗೆ ಉತ್ತರ ಕನ್ನಡ ಜಿಲ್ಲೆ ಕಾಂಗ್ರೆಸ್ಸಿಗೆ ಬೇಕು ಆದರೆ, ಜಿಲ್ಲೆಗೆ ಅಭಿವೃದ್ಧಿ ಮತ್ತು ಗೌರವ ನೀಡುವಾಗ ಅಲಕ್ಷ÷್ಯ ತೋರುತ್ತಿದೆ ಎಂದಿದ್ದಾರೆ.