ನೋಟಿಸ್​ ನೀಡಿದ್ರೆ ಗ್ರಾಪಂ ಒಳಗೆ ನುಗ್ಗಿ ಹೋರಾಟ

ಮನೆಗಳ ನಂಬರ್​ ರದ್ದುಪಡಿಸುವ ಆದೇಶಕ್ಕೆ ವಿರೋಧ
BJP workers and the public protested in Isalur, Sirsi taluk, condemning the state government's order to cancel the numbering of houses in forest and government land. MPs Vishweshwar Hegde Kageri, Naveen Shetty, Usha Hegde, Prasanna Hegde and others were present.
ರಾಜ್ಯ ಸರ್ಕಾರ ಅರಣ್ಯ ಮತ್ತು ಸರ್ಕಾರಿ ಜಾಗದಲ್ಲಿನ ಮನೆಗಳ ನಂಬರ್​ ರದ್ದುಪಡಿಸಲು ಆದೇಶ ಹೊರಡಿಸಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಶಿರಸಿ ತಾಲೂಕು ಇಸಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ನವೀನ ಶೆಟ್ಟಿ, ಉಷಾ ಹೆಗಡೆ, ಪ್ರಸನ್ನ ಹೆಗಡೆ ಇತರರಿದ್ದರು.
Published on

ಶಿರಸಿ: ರಾಜ್ಯ ಸರ್ಕಾರ ಅರಣ್ಯ ಮತ್ತು ಸರ್ಕಾರಿ ಜಾಗದಲ್ಲಿನ ಮನೆಗಳ ನಂಬರ್​ ರದ್ದುಪಡಿಸಲು ಆದೇಶ ಹೊರಡಿಸಿರುವುದನ್ನು ಖಂಡಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಶಿರಸಿ ತಾಲೂಕಿನ ಇಸಳೂರು ಗ್ರಾಪಂ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಿಂದಿನ ಸರ್ಕಾರದಲ್ಲಿ ಈಶ್ವರ ಖಂಡ್ರೆ ಅರಣ್ಯ ಸಚಿವರಾಗಿ ಅತಿಕ್ರಮಣ ಜಾಗದಲ್ಲಿ ವಾಸಿಸುವವರ ಮನೆ ಕೀಳಿಸುವ ಬಗ್ಗೆ ಆಸಕ್ತಿ ತೋರಿದ್ದರೆ ಈ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಾಗಿ ಮತ್ತೆ ತಮ್ಮ ಹಿಂದಿನ ಚಾಳಿ ಮುಂದುವರಿಸಿದ್ದಾರೆ. ಸರ್ಕಾರ ಇಂತಹ ನಿರ್ಧಾರಗಳಿಂದ ಬಡವರ ಬದುಕು ಬೀದಿಗೆ ಬರಲಿದೆ ಎಂದು ಆಕ್ರೋಶ ಹೊರ ಹಾಕಿದರು.

ಸರ್ಕಾರ ಆದೇಶವನ್ನು ಹಿಂಪಡೆಯಲೇಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ತೀವ್ರತೆ ಪಡೆಯುತ್ತಲೇ ಸಾಗುತ್ತದೆ. ಸರ್ಕಾರದ ಆದೇಶ ಎಂದು ಗ್ರಾಮ ಪಂಚಾಯಿತಿಯಿಂದ ಅರಣ್ಯ ಅಥವಾ ಸರ್ಕಾರಿ ಭೂಮಿಯಲ್ಲಿ ವಾಸವಾಗಿರುವವರಿಗೆ ಗ್ರಾಮ ಪಂಚಾಯಿತಿ ನೋಟಿಸ್​ ನೀಡಿದ್ದೇ ಆದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಇಲ್ಲಿಯವರೆಗೆ ಪಂಚಾಯಿತಿಯ ಹೊರ ನಿಂತು ಪ್ರತಿಭಟನೆ ನಡೆಸಿದ್ದೇವೆ. ಒಂದೊಮ್ಮೆ ಗ್ರಾಮ ಪಂಚಾಯಿತಿ ನೋಟಿಸ್​ ನೀಡಿದ್ದೇ ಆದರೆ ನಾವು ಗ್ರಾಮ ಪಂಚಾಯಿತಿಯ ಒಳಗೆ ಬರಬೇಕಾಗುತ್ತದೆ. ನಾವು ಯಾವುದೇ ಕಾರಣಕ್ಕೂ ಸುಮ್ಮನಾಗುವುದಿಲ್ಲ ಎಂದು ಎಚ್ಚರಿಸಿದರು.

ಇ&ಸ್ವತ್ತಿನ ಹೆಸರಿನಲ್ಲೇ ಸರ್ಕಾರ ನಮಗೆ ಕಿರುಕುಳ ಕೊಡುತ್ತಿದೆ. ಇ&ಸ್ವತ್ತು ಸಮಸ್ಯೆ ಬಗೆಹರಿಯಿತು ಎಂದು ಬ್ಯಾನರ್​ ಹಾಕಿದವರು ಏನು ಮಾಡ್ತಿದ್ದಾರೆ? ಈಗ ಬಡವರು ಮನೆ ಕಳೆದುಕೊಳ್ಳಬೇಕಾದ ಸ್ಥಿತಿ ಬಂದೊದಗಿದೆ. ಇನ್ನೊಂದೆಡೆ ಕಸ್ತೂರಿ ರಂಗನ್​ ವರದಿ ಜಾರಿಯ ಭೂತ ಕಾಡುತ್ತಿದೆ. ಜಿಲ್ಲೆಯ ಜನತೆ ಪರಿಸರ ಬಗ್ಗೆ ಸದಾ ಕಾಳಜಿ ಇದ್ದವರು, ಪರಿಸರ ರಸಿಕೊಂಡೇ ಜೀವನ ನಡೆಸುತ್ತಿದ್ದಾರೆ. ಕಸ್ತೂರಿ ರಂಗನ್​ ವರದಿಯಲ್ಲಿ ಆಕಾಶದಿಂದ ನಡೆಸಿದ ಸರ್ವೇ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪ್ರತಿ ಹಳ್ಳಿಗೆ ಆಗಮಿಸಿ ಸರ್ವೇ ನಡೆಸಲಿ, ಸ್ಥಳ ಸಮೀಕ್ಷೆ ಮಾಡಲಿ. ಅರಣ್ಯದ ಹೆಸರಿನಲ್ಲಿ ನಮಗೆ ತೊಂದರೆ ನೀಡುವ ಕಾರ್ಯ ನಡೆಯುತ್ತದೆ ಎಂದು ಅಸಮಾಧಾನ ಹೊರ ಹಾಕಿದರು.

ನಮ್ಮ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ನವೀನ ಶೆಟ್ಟಿ ಮಾತನಾಡಿ, ನಮ್ಮ ಮನೆ ನಂಬರ್​ ಉಳಿಸುಕೊಳ್ಳುವ ಅನಿವಾರ್ಯತೆ ಇದೆ. ನಾವು ಅನೇಕ ವರ್ಷದಿಂದ ಮನೆ ನಿಮಿರ್ಸಿಕೊಂಡು ಜೀವನ ನಡೆಸುತ್ತಿದ್ದೇವೆ. ಸರ್ಕಾರಿ ಭುಮಿ ಮತ್ತು ಅರಣ್ಯ ಭೂಮಿ ಮನೆಗಳಿಗೆ ತೆರಿಗೆ ಕೈ ಬಿಡುವ ಕುರಿತು ಸರ್ಕಾರ ಏಕಾಏಕಿ ಹೊರಡಿಸಿದ ಮಾರ್ಗಸೂಚಿ ಇದಲ್ಲ. ವ್ಯವಸ್ಥಿತವಾಗಿಯೇ ಬಡವರನ್ನು ಒಕ್ಕಲೆಬ್ಬಿಸಿ, ಪಂಚಾಯಿತಿ ಆ್ಯಕ್ಟ್​ ಮೂಲಕ ನೀಡಿದ ಹಕ್ಕುಗಳನ್ನು ಕಿತ್ತುಕೊಳ್ಳಹೊರಟಿದೆ. ಛತ್ತಿಸಗಡ, ಮಧ್ಯಪ್ರದೇಶದಲ್ಲಿ ಅರಣ್ಯ ಗ್ರಾಮಗಳನ್ನು ಕಂದಾಯ ಗ್ರಾಮ ಮಾಡಿದ್ದಾರೆ. ನಮ್ಮಲ್ಲಿ ಮಾತ್ರ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.

ಗ್ರಾಮೀಣ ಘಟಕ ಅಧ್ಯೆ ಉಷಾ ಹೆಗಡೆ, ನಿರ್ಮಲಾ ಶೆಟ್ಟಿ, ಮಂಜುನಾಥ ಭಂಡಾರಿ, ಚಂದ್ರು ದೇವಾಡಿಗ, ಗುರುಪ್ರಸಾದ ಹೆಗಡೆ, ಪ್ರಸನ್ನ ಹೆಗಡೆ, ಆನಂದ ಸಾಲೇರ ಇತರರಿದ್ದರು. ಇದಕ್ಕೂ ಮುನ್ನ ಕಾಗೇರಿಯವರ ನೇತೃತ್ವದಲ್ಲಿ ಬೃಹತ್​ ಜಾಥಾ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net