

ಕಾರವಾರ: ಸಮುದ್ರ ಕಳ್ಳತನ, ಮಾದಕ ದ್ರವ್ಯ ಸಾಗಣೆ ತಡೆ, ರಕ್ಷಣೆ ಸೇರಿ 40 ಕ್ಕೂ ಹೆಚ್ಚು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು 71 ಜನರ ಜೀವ ಉಳಿಸಿದ ಐಸಿಜಿ ಸಾವಿತ್ರಿಬಾಯಿ ಪುಲೆ ಗಸ್ತು ನೌಕೆಯನ್ನು ಶನಿವಾರ ಸೇವೆಯಿಂದ ನಿವೃತ್ತಿಗೊಳಿಸಲಾಯಿತು.
ಇಲ್ಲಿನ ಬೈತಖೋಲ್ ವಾಣಿಜ್ಯ ಬಂದರಿನಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕರಾವಳಿ ರಕ್ಷಣಾ ಪಡೆ(ಕೋಸ್ಟ್ ಗಾರ್ಡ್) ಕರ್ನಾಟಕ ಮುಖ್ಯಸ್ಥ ಡಿಐಜಿ ಪ್ರವೀಣ ಕುಮಾರ್ ಮಿಶ್ರಾ ಸಮ್ಮುಖದಲ್ಲಿ ಸೂರ್ಯಾಸ್ತಕ್ಕೆ ಸರಿಯಾಗಿ ನೌಕೆಯ ಮೇಲಿರುವ ರಾಷ್ಟ್ರ ಧ್ವಜವನ್ನು ಅವರೋಹಣ ಮಾಡಲಾಯಿತು. ಅಲ್ಲದೇ, ನೌಕೆ ಸೇವೆಗೆ ಸೇರ್ಪಡೆಯಾದಾಗ ಅಳವಡಿಸಿದ್ದ ಪೆಂಡೆಂಟ್‌ನ್ನು ಬಿಚ್ಚಿ, ಕಮಾಂಡೆಂಟ್ ಅವರಿಗೆ ಹಸ್ತಾಂತರಿಸಲಾಯಿತು. ಕೋಸ್ಟ್ ಗಾರ್ಡ್ ಬ್ಯಾಂಡ್ ತಂಡವು ರಾಷ್ಟ್ರ ಗೀತೆ ನುಡಿಸಿ, ನೌಕೆಗೆ ವಿದಾಯ ಹೇಳಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿಐಜಿ ಪ್ರವೀಣ ಕುಮಾರ್ ಮಿಶ್ರಾ ಅವರು, ಸಾವಿತ್ರಿ ಬಾಯಿ ಪುಲೆ ಅವರು ದೇಶದ ಮೊದಲ ಮಹಿಳಾ ಶಿಕ್ಷಕಿ, ತ್ಯಾಗ, ಬಲಿದಾನಕ್ಕೆ ಅವರು ಮಾದರಿಯಾಗಿದ್ದಾರೆ. ಅವರ ಹೆಸರನ್ನು ನೌಕೆಗೆ ಇಡಲಾಗಿತ್ತು. ನೌಕೆ ಸಾಕಷ್ಟು ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ದೇಶಕ್ಕೆ ಮಹೋನ್ನತ ಸೇವೆ ನೀಡಿದೆ. ಈ ನೌಕೆಯ ಬದಲಾಗಿ ಐಸಿಜಿ ಪರಾಗ್ ಎಂಬ ಗಸ್ತು ನೌಕೆಯನ್ನು 2027 ರಲ್ಲಿ ಮುಂಬೈನಿಂದ ಕಾರವಾರಕ್ಕೆ ತರಲಾಗುವುದು. ಸದ್ಯ ಎರಡು ನೌಕೆಗಳು ಕಾರವಾರದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದರು.
ನೌಕೆಯ ಕೊನೆಯ ಕಮಾಂಡೆಂಟ್ ಗೌರವ ಶ್ರೀವಾಸ್ತವ ಮಾತನಾಡಿ, ನೌಕೆಯ ತನ್ನ ಸೇವಾ ಅವಧಿಯಲ್ಲಿ 39 ಸಾವಿರ ತಾಸುಗಳ ಕಾಲ 78,468 ನಾಟಿಕಲ್ ಮೈಲ್ ಸಮುದ್ರದಲ್ಲಿ ಓಡಾಟ ನಡೆಸಿತ್ತು. ಇದರಿಂದ ಸಾಕಷ್ಟು ಜೀವ ಉಳಿಸಿದ ಹಾಗೂ ಅಕ್ರಮ ತಡೆದ ಸಮಾಧಾನ ತಂಡಕ್ಕೆ ಇದೆ ಎಂದರು. ಕೋಸ್ಟ್ಗಾರ್ಡ್ನ ಅಧಿಕಾರಿ ಅಖಿಲ್ ಯಾದವ್ ಹಾಗೂ ಇನ್ನಿತರ ಗಣ್ಯರು ಸಮಾರಂಭದಲ್ಲಿದ್ದರು.
ಇದೇ ವರ್ಷ ಡಿಸೆಂಬರ್‌ನಲ್ಲಿ ಅಮದಳ್ಳಿಯಲ್ಲಿ ಕೋಸ್ಟ್ಗಾರ್ಡ್ ನೂತನ ಸ್ವಂತ ಕಚೇರಿ ಉದ್ಘಾಟನೆಯಾಗಲಿದೆ ಎಂದು ಕರಾವಳಿ ರಕ್ಷಣಾ ಪಡೆ(ಕೋಸ್ಟ್ ಗಾರ್ಡ್) ಕರ್ನಾಟಕ ಮುಖ್ಯಸ್ಥ ಡಿಐಜಿ ಪ್ರವೀಣ ಕುಮಾರ್ ಮಿಶ್ರಾ ತಿಳಿಸಿದರು.
ಮಾಧ್ಯಮ ಪ್ರತಿನಿಽಗಳ ಜೊತೆ ಅವರು ಮಾತನಾಡಿದರು. ಸಿಬ್ಬಂದಿ ಹಾಗೂ ಅಧಿಕಾರಿಗಳ ವಸತಿ ಸಮುಚ್ಛಯವೂ ಅದೇ ಪ್ರಾಂಗಣದಲ್ಲಿ ನಿರ್ಮಾಣವಾಗುತ್ತಿದ್ದು, ಅದಕ್ಕೆ ಇನ್ನಷ್ಟು ವಿಳಂಬವಾಗಲಿದೆ ಎಂದರು.
ಇಲ್ಲಿನ ವಾಣಿಜ್ಯ ಬಂದರಿನಲ್ಲಿ 150 ಮೀಟರ್ ಜಟ್ಟಿಯನ್ನು ಬಂದರು ಇಲಾಖೆ ನಮಗೆ ನೀಡಿದೆ. ಬಂದರು ವಿಸ್ತರಣೆಯ ನಂತರ ಇನ್ನಷ್ಟು ಜಾಗವನ್ನು ಜಟ್ಟಿಯನ್ನು ನಾವು ಕೇಳಲಿದ್ದೇವೆ ಎಂದರು. ಅದರ ಹೊರತಾಗಿ ಕೋಸ್ಟ್ಗಾರ್ಡ್ನಿಂದ ಯಾವುದೇ ಜಟ್ಟಿ ನಿರ್ಮಾಣ ಮಾಡುವ ಪ್ರಸ್ತಾವ ಸಧ್ಯಕ್ಕಿಲ್ಲ ಎಂದರು.
ಗೋವಾ ಶಿಪ್ ಯಾರ್ಡ್ನಲ್ಲಿ ನಿರ್ಮಾಣವಾದ 50.44 ಮೀಟರ್ ಉದ್ದದ ನೌಕೆ ಗಂಟೆಗೆ 35 ನಾಟಿಕಲ್ ಮೈಲ್ ವೇಗದಲ್ಲಿ ತೆರಳುವ ಸಾಮರ್ಥ್ಯ ಹೊಂದಿತ್ತು. ಭಾರತೀಯ ತಟ ರಕ್ಷಕ ದಳದಲ್ಲಿ 20 ವರ್ಷ ಮಂಗಳೂರು ಹಾಗೂ ಕಾರವಾರದಲ್ಲಿ ಕಾರ್ಯಾಚರಣೆ ಮಾಡಿತ್ತ. ಇದನ್ನು ಶೀಘ್ರ ಗೋವಾ ಶಿಪ್‌ಯಾರ್ಡ್ಗೆ ಹಸ್ತಾಂತರಿಸಲಾಗುವುದು. ಶಿಪ್ ಯಾರ್ಡ್ನಿಂದ ನೌಕೆಯನ್ನು ಹರಾಜು ಹಾಕಲಾಗುವುದು ಎಂದು ಕೋಸ್ಟ್ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.