explosives: ಭಾರಿ ಪ್ರಮಾಣದ ಸ್ಫೋಟಕ ಪತ್ತೆ

ಹಳಿಯಾಳ ತಾಲೂಕಿನ ತೆಗ್ನಳ್ಳಿ ಕ್ರಾಸ್ ಸಮೀಪ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಿಲೆಟಿನ್ ಸ್ಫೋಟಕಗಳು (EXPLOSIVE) ಮತ್ತು ಡೆಟೋನೇಟರ್‌ಗಳನ್ನು ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಪರಿಶೀಲಿಸಿ, ಆರೋಪಿಯನ್ನು ವಶಕ್ಕೆ ಪಡೆದಿರುವುದು. ತಹಸಿಲ್ದಾರ್ ಫಿರೋಜ್ ಷಾ ಸೋಮನಕಟ್ಟಿ, ಪಿಎಸ್‌ಐ ಬಸವರಾಜ್ ಮಬನೂರ್, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಇದ್ದರು.
ಹಳಿಯಾಳ ತಾಲೂಕಿನ ತೆಗ್ನಳ್ಳಿ ಕ್ರಾಸ್ ಸಮೀಪ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಿಲೆಟಿನ್ ಸ್ಫೋಟಕಗಳು (EXPLOSIVE) ಮತ್ತು ಡೆಟೋನೇಟರ್‌ಗಳನ್ನು ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಪರಿಶೀಲಿಸಿ, ಆರೋಪಿಯನ್ನು ವಶಕ್ಕೆ ಪಡೆದಿರುವುದು. ತಹಸಿಲ್ದಾರ್ ಫಿರೋಜ್ ಷಾ ಸೋಮನಕಟ್ಟಿ, ಪಿಎಸ್‌ಐ ಬಸವರಾಜ್ ಮಬನೂರ್, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 72 ಜಿಲೆಟಿನ್ ಕಡ್ಡಿ, 50 ಡೆಟೋನೇಟರ್ ವಶ
  • ಸ್ಫೋಟಕ ಸಾಗಿಸುತ್ತಿದ್ದ ಆರೋಪಿ ಬಂಧನ
  • ಕಲ್ಲುಗಳನ್ನು ಸ್ಫೋಟಿಸಲು ಬಳಸುವ ಉದ್ದೇಶ?
ಹಳಿಯಾಳ: ಹಳಿಯಾಳದಿಂದ ಕಲಘಟಗಿಗೆ ಸಾಗುವ ರಾಜ್ಯ ಹೆದ್ದಾರಿಯ ತೆಗ್ನಳ್ಳಿ ಕ್ರಾಸ್ ಸಮೀಪ (EXPLOSIVE)  ಅಕ್ರಮವಾಗಿ ಸಾಗಿಸಲಾಗುತ್ತಿದ್ದ 72 ಜಿಲೆಟಿನ್ ಸ್ಫೋಟಕಗಳು ಮತ್ತು 50 ಡೆಟೋನೇಟರ್‌ಗಳನ್ನು ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ. 
ಘಟನೆಗೆ ಸಂಬಂಧಿಸಿದಂತೆ ಆರೋಪಿ ಧಾರವಾಡ ಜಿಲ್ಲೆ ಅಮ್ಮಿನಭಾವಿ ಗ್ರಾಮದ ನಾಗರಾಜ ಸಿದ್ದಕನವರ ಎಂಬಾತನನ್ನು ಬಂಧಿಸಿದ್ದಾರೆ.
ಘಟನೆ ವಿವರ: ತಹಸಿಲ್ದಾರ್ ಫಿರೋಜ್ ಷಾ ಸೋಮನಕಟ್ಟಿ ಅವರಿಗೆ ಬಂದ ಖಚಿತ ಮಾಹಿತಿ ಆಧರಿಸಿ ಖಾಕಿ ಪಡೆ ಈ ದಾಳಿ ನಡೆಸಿದೆ.
ಹಳಿಯಾಳ-ಕಲಘಟಗಿ ರಾಜ್ಯ ಹೆದ್ದಾರಿಯ ಹಳಿಯಾಳದಿಂದ ಎರಡು ಕಿಲೋಮೀಟರ್ ಅಂತರದಲ್ಲಿರುವ ಕಲ್ಲು ಕ್ವಾರಿಗಳ ಸಮೀಪ ಹೆದ್ದಾರಿಯಲ್ಲಿ ಸ್ಕೂಟಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸ್ಫೋಟಕಗಳನ್ನು ಸಾಗಿಸುತ್ತಿದ್ದವನನ್ನು ತೆಗ್ನಳ್ಳಿ ಕ್ರಾಸ್ ಸಮೀಪದ ಛತ್ರನಾಳ ಪ್ರದೇಶದಲ್ಲಿ ಹಿಡಿದು ವಶಕ್ಕೆ ಪಡೆದಿದ್ದಾರೆ. 
ಆರೋಪಿಯಿಂದ ಜಿಲೆಟಿನ್ ಕಡ್ಡಿಗಳು, ಡೆಟೋನೇಟರ್ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟಿಯನ್ನು ವಶಕ್ಕೆ ಪಡೆಯಲಾಗಿದೆ. ಡಿವೈಎಸ್ಪಿ ಶಿವಾನಂದ ಮದರಖಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ತಹಸಿಲ್ದಾರ್ ಫಿರೋಜ್ ಷಾ ಸೋಮನಕಟ್ಟಿ ಹಳೆಯ ಠಾಣೆಯಲ್ಲಿ ದೂರು ನೀಡಿದ್ದು, ಪಿಎಸ್‌ಐ ಬಸವರಾಜ್ ಮಬನೂರ್ ಸ್ಫೋಟಕ ವಸ್ತುಗಳ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಸ್ಫೋಟಕದ ಪ್ರಮಾಣ ಮತ್ತು ಸ್ವರೂಪವನ್ನು ಪರಿಶೀಲಿಸಲು ಹುಬ್ಬಳ್ಳಿಯ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿತು. ಕ್ವಾರಿಗಳಲ್ಲಿ ಕಲ್ಲುಗಳನ್ನು ಸ್ಫೋಟಿಸಲು ಬಳಸುವ ಉದ್ದೇಶದಿಂದ ಸ್ಫೋಟಕ ತೆಗೆದುಕೊಂಡು ಹೋಗಲಾಗುತ್ತಿತ್ತು ಎನ್ನುವ ಶಂಕೆಯಿದ್ದರೂ ಪೊಲೀಸರು ಸಮಗ್ರ ತನಿಖೆಗೆ ಮುಂದಾಗಿದ್ದಾರೆ. 
ಒಂದು ಜಿಲೆಟಿನ್ ಕಡ್ಡಿಗೆ 50 ರೂ.!
50 ರೂಪಾಯಿಗೆ ಒಂದು ಜಿಲೆಟಿನ್ ಕಡ್ಡಿ (ಸ್ಫೋಟಕ) ತಂದಿರುವುದಾಗಿ ಆರೋಪಿ ಹೇಳಿದಾಗ ಸ್ಥಳದಲ್ಲಿದ್ದ ತಹಸಿಲ್ದಾರ್ ಕೂಡ ದಿಗ್ಭ್ರಮೆಗೆ ಒಳಗಾದರು. ಇಷ್ಟು ದೊಡ್ಡ ಮಟ್ಟದ ಸ್ಫೋಟಕಗಳನ್ನು ಕೇವಲ ಏಳರಿಂದ ಎಂಟು ಸಾವಿರ ರೂಪಾಯಿ ಕೊಟ್ಟು ತಂದಿರುವುದಾಗಿ ಆರೋಪಿ ಹೇಳಿದ್ದು ಎಂಥವರನ್ನು ಬೆಚ್ಚಿ ಬೀಳಿಸುವಂತಿತ್ತು. ಸ್ಥಳದಲ್ಲಿದ್ದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪ್ರಕಾರ ‘ಸದ್ಯ ವಶಕ್ಕೆ ಪಡೆದಿರುವ ಸ್ಫೋಟಕಗಳಿಂದ ಒಂದು ದೊಡ್ಡ ಕಟ್ಟಡವನ್ನೇ ಉರುಳಿಸಬಹುದು’ ಎಂಬ ಮಾಹಿತಿ ಲಭ್ಯವಾಗಿದೆ.  ಯಾವ ಉದ್ದೇಶಕ್ಕಾಗಿ ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕವನ್ನು ಸಾಗಿಸಲಾಗುತ್ತಿತ್ತು ಎನ್ನುವುದರ ಬಗ್ಗೆ ಸಮಗ್ರ ತನಿಖೆಯ ನಂತರವೇ ತಿಳಿಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net