ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ-ವಿಶೇಷ ಭೂ ಸ್ವಾಧೀನಾಧಿಕಾರಿ ನೇಮಕ

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಕಚೇರಿ
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಕಚೇರಿ
Published on

ಪ್ರಮುಖ ಮುಖ್ಯಾಂಶಗಳು

  • ಕಾರವಾರದಲ್ಲಿ 28 ವರ್ಷಗಳಿಂದ ಇರುವ ಕಚೇರಿ
  • ಒಬ್ಬ ಸಿಬ್ಬಂದಿ ಮಾತ್ರ ಈಗ ಹೊಸ ಅಧಿಕಾರಿ ನೇಮಕ
ಕಾರವಾರ:

ಹುಬ್ಬಳ್ಳಿ-ಅಂಕೋಲಾ ರೈಲ್ವೆಯ ಪರಿಷ್ಕೃತ ವಿಸ್ತ್ರತ ಯೋಜನಾ ವರದಿ (ಡಿಪಿಆರ್)ಗೆ ಕೇಂದ್ರ ರೈಲ್ವೆ ಮಂಡಳಿ ಅನುಮೋದನೆ ನೀಡುತ್ತಿದ್ದಂತೆ ಜಿಲ್ಲಾ ಹಂತದಲ್ಲೂ ಈ ಸಂಬಂಧ ಪ್ರಕ್ರಿಯೆಗಳು ಶುರುವಾಗಿವೆ.

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕೆಎಎಸ್ ಆಯ್ಕೆ ಶ್ರೇಣಿಯ ಅಧಿಕಾರಿ ರವಿಚಂದ್ರ ನಾಯಕ ಅವರನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿದೆ. ಅವರು ಸ್ಥಳ ನಿರೀಕ್ಷೆಯಲ್ಲಿದ್ದರು. ಈ ಹುದ್ದೆಯನ್ನು ಸದ್ಯ ಕುಮಟಾ ಎಸಿ ಶ್ರವಣ ಕುಮಾರ್ ಅವರು ಪ್ರಭಾರಿಯಾಗಿ ನಿಭಾಯಿಸುತ್ತಿದ್ದರು. ಆದರೆ, ಯಾವುದೇ ಚಟುವಟಿಕೆ ಇಲ್ಲದೇ ಸುಮಾರು 20 ವರ್ಷಗಳಿಂದ ಖಾಲಿ ಇದ್ದ ಕಚೇರಿ ಇನ್ನು ತನ್ನ ಕಾರ್ಯಗನ್ನು ಪ್ರಾರಂಭಿಸುವ ಸಾಧ್ಯತೆ ಇದೆ.

28 ವರ್ಷಗಳ ಹಿಂದೇ ಪ್ರಾರಂಭವಾದ ಕಚೇರಿ

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಅನುಮೋದನೆಯಾದಾಗಲೇ ಎಂದರೆ 1998 ರಲ್ಲೇ ಕಾರವಾರದ ಜಿಲ್ಲಾಽಕಾರಿ ಕಚೇರಿಯಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಪ್ರಾರಂಭವಾಗಿತ್ತು. ಕೆಎಎಎಸ್ ಶ್ರೇಣಿಯ ವಿಶೇಷ ಭೂ ಸ್ವಾಧೀನಾಧಿಕಾರಿ , ಶಿರಸ್ತೇದಾರ್, ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗದ್ದವು.
ಹುಬ್ಬಳ್ಳಿ ಹಾಗೂ ಕಲಘಟಗಿ ತಾಲೂಕುಗಳ ಖಾಸಗಿ, ಅರಣ್ಯ ಭೂಮಿ ಸ್ವಾಧೀನ ಪ್ರಕ್ರಿಯೆಯೂ ಕಾರವಾರದಲ್ಲಿರುವ ಭೂ ಸ್ವಾಧೀನಾಧಿಕಾರಿ ಕಚೇರಿಯಿಂದಲೇ ನಡೆದಿತ್ತು. 4ಎ ನೋಟಿಪಿಕೇಶನ್ ಮಾಡಿ, ಪರಿಹಾರ ನೀಡುವ ಕಾರ್ಯವನ್ನು ಕೆಲ ವರ್ಷ ಇಲ್ಲಿಂದಲೇ ನಿರ್ವಹಿಸಲಾಗಿತ್ತು. 2006 ರಲ್ಲಿ ಯೋಜನೆಗೆ ಹೈಕೋರ್ಟ್ನಿಂದ ತಡೆ ಬಂದ ನಂತರ ಭೂ ಸ್ವಾಧೀನ ಪ್ರಕ್ರಿಯೆಯೂ ಸ್ಥಗಿತವಾಗಿತ್ತು. ಆದರೆ, ಕಚೇರಿ ಮಾತ್ರ 20 ವರ್ಷಗಳಿಂದ ಹಾಗೇ ಮುಂದುವರಿದಿದೆ.
ಇಲ್ಲಿ ಯಾವುದೇ ಕೆಲಸವೂ ಇಲ್ಲದ ಕಾರಣ 2014 ರ ಹೊತ್ತಿಗೆ ಒಬ್ಬ ಕೆಎಎಸ್ ಅಧಿಕಾರಿ ಈ ಹುದ್ದೆಗೆ ಕಾಯಂ ಆಗಿ ನೇಮಕವಾಗಿ, ಕೆಲ ತಿಂಗಳು ಕಾರ್ಯ ನಿರ್ವಹಿಸಿದ್ದು ಬಿಟ್ಟರೆ ಉಳಿದ ಸಂಪೂರ್ಣ ಕಾಲಾವಧಿಯಲ್ಲಿ ಪ್ರಭಾರಿ ಅಧಿಕಾರಿಗಳೇ ಈ ಹುದ್ದೆಯನ್ನು ನಿಭಾಯಿಸಿದ್ದರು. ಸಿಬ್ಬಂದಿ ಹುದ್ದೆಗಳು ಮಂಜೂರಾಗಿದ್ದರೂ ಸದ್ಯ ಒಬ್ಬ ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿದ್ದಾರೆ. ಒಂದೆರಡು ಕಪಾಟು ಹಾಗೂ ಕಂಪ್ಯೂಟರ್‌ಗಳ ಜೊತೆ . ಜಿಲ್ಲಾಽಕಾರಿ ಕಚೇರಿಯ ನೆಲ ಮಹಡಿಯ ಕೊಠಡಿಯೊಂದರಲ್ಲಿ ಕಚೇರಿ ನಡೆಯುತ್ತಿದೆ.

ಯಲ್ಲಾಪುರ, ಅಂಕೋಲಾ ಭಾಗದಲ್ಲಿ ಚರ್ಚೆ

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಭೂ ಸ್ವಾಧೀನಗೊಳ್ಳಲಿರುವ ಗ್ರಾಮಗಳ ಪಟ್ಟಿಯನ್ನು ನೈರುತ್ಯ ರೈಲ್ವೆ ಇತ್ತೀಚೆಗೆ ಪ್ರಕಟ ಮಾಡಿದ್ದರಿಂದ ಯಲ್ಲಾಪುರ, ಅಂಕೋಲಾ ಭಾಗದಲ್ಲಿ ಭೂ ಸ್ವಾಧೀನದ ಬಗ್ಗೆ ಚರ್ಚೆಗಳು ಶುರುವಾಗಿವೆ. ಯೋಜನೆಗಾಗಿ ರಾಷ್ಟ್ರೀಯ ಹೆದ್ದಾರಿ 52 ರಿಂದ ಬಹು ದೂರದಲ್ಲಿರುವ ಕಳಚೆ, ತೆಲಂಗಾರ ಮುಂತಾದ ಗ್ರಾಮಗಳ ಹೆಸರನ್ನೂ ಸೇರಿಸಲಾಗಿದೆ. ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿಯ ಇನ್ನೊಂದು ಪಕ್ಕದಲ್ಲಿರುವ ಗ್ರಾಮಗಳನ್ನೂ ಹೆಸರಿಸಲಾಗಿದೆ. ರೈಲ್ವೆ ಮಾರ್ಗ ಯಾವ ರೀತಿ ಹೋಗಲಿದೆ ಎಂಬ ಎಂಬ ಸ್ಪಷ್ಟತೆ ಇದುವರೆಗೂ ಸಿಕ್ಕಿಲ್ಲ. ಇದರಿಂದ ಜನ ಗೊಂದಲದಲ್ಲಿದ್ದು, ಜಿಲ್ಲಾಧಿಕಾರಿ ಕಚೇರಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸುತ್ತಿರುವುದು ತಿಳಿದು ಬಂದಿದೆ.
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ವಿಶೇಷ ಭೂ ಸ್ವಾಧೀನ ಸಂಬಂಧ ಇದುವರೆಗೂ ಯಾವುದೇ ಅಧಿಕೃತ ಆದೇಶ ನಮಗೆ ಬಂದಿಲ್ಲ. ಅಧಿಕೃತ ಪತ್ರ ಬಂದ ನಂತರ ಮುಂದಿನ ಕ್ರಮ ವಹಿಸಲಾಗುವುದು.
ಕೆ.ಲಕ್ಷ್ಮೀಪ್ರಿಯಾ
ಜಿಲ್ಲಾಧಿಕಾರಿ ಉತ್ತರ ಕನ್ನಡ
.............
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net