ಹಳಿಯಾಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿ ವಿಳಂಬ ಖಂಡನೆ
ಹಳಿಯಾಳ:ದಾಂಡೇಲಿ ಕಾಳಿ ನದಿಯಿಂದ ಬಹು ಗ್ರಾಮ ಕುಡಿಯುವ ನೀರು ಪೂರೈಕೆಯಡಿ ಹಳಿಯಾಳದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಲ್ಲಿನ ವಿಳಂಬ ಖಂಡಿಸಿ ಮಾ. 16ರಂದು ಹಳಿಯಾಳ ಬಂದ್ ನಡೆಸುವ ಮೂಲಕ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಸಂದೀಪಕುಮಾರ ಬೋಬಾಟಿ ತಿಳಿಸಿದರು.
ಪಟ್ಟಣದ ಮರಾಠಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಮತ್ತು ಕಬ್ಬು ಬೆಳೆಗಾರ ರೈತ ಹಿತ ಸಂರಕ್ಷಣಾ ಸಮಿತಿಯವರು ಜಂಟಿಯಾಗಿ ನೀರಿಗಾಗಿ ಪಾದಯಾತ್ರೆಯ ಮೂಲಕ 9 ದಿನಗಳ ಕಾಲ ಹಳಿಯಾಳ ತಾಲೂಕಿನ ಸುಮಾರು 40ಕ್ಕೂ ಹೆಚ್ಚು ಹಳ್ಳಿಗಳನ್ನು ಸಂಪರ್ಕಿಸಿದ್ದಾರೆ. ಪಾದಯಾತ್ರೆ ಸಂದರ್ಭದಲ್ಲಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ ಅಲ್ಲಿಯ ನೈಜ, ಜ್ವಲಂತ ಸಮಸ್ಯೆಗಳನ್ನು ತಿಳಿದುಕೊಳ್ಳಲಾಗಿದೆ. ಅದರಲ್ಲಿ ಪ್ರಮುಖವಾಗಿ ಜೀವ ಜಲದ ಸಮಸ್ಯೆ ವಿಪರೀತವಾಗಿದೆ ಎಂದು ಬೋಬಾಟಿ ಹೇಳಿದರು.
ಬೇರೆ ಜಿಲ್ಲೆಗಳಲ್ಲಿ ಸುಮಾರು ನೂರು ಕಿಲೋಮೀಟರ್ ದೂರದಿಂದ ಕಾಲುವೆ ನಿರ್ಮಿಸಿ ನೀರಾವರಿ ಮಾಡಿ, ಕೃಷಿ ಕ್ರಾಂತಿ ಮಾಡಿ ರೈತರ ಬದುಕು ಹಸನು ಮಾಡಲಾಗಿದೆ. ಆದರೆ, ದಾಂಡೇಲಿ ತಾಲೂಕಿನಿಂದ ಕೇವಲ 20 ಕಿಲೋ ಮೀಟರ್ ದೂರದಲ್ಲಿದ್ದರೂ ಇದುವರೆಗೆ ಹಳಿಯಾಳ ತಾಲೂಕಿಗೆ ನೀರಿನ ಭಾಗ್ಯವಿಲ್ಲ. ಹೀಗಾಗಿ, ರೈತರು ತಾಳ್ಮೆ ಕಳೆದುಕೊಂಡಿದ್ದಾರೆ. ಒಂದು ವೇಳೆ ತಾಲೂಕಿಗೆ ನೀರು ಕೊಡದಿದ್ದರೆ ರಕ್ತ ಕ್ರಾಂತಿ ಆಗುತ್ತದೆ ಎಂದು ಬೊಬಾಟಿ ಎಚ್ಚರಿಕೆ ನೀಡಿದರು.
ನೀರು ಕೊಡುವ ಯೋಗ್ಯತೆ ಇಲ್ಲವೆಂದರೆ ಶಾಸಕರಿಗೆ ಕುರ್ಚಿ ಮೇಲೆ ಕುಳಿತುಕೊಳ್ಳುವ ಅಧಿಕಾರ ಇಲ್ಲ. ನೀರು ಕೊಡಲು ಆಗುವುದಿಲ್ಲವೆಂದರೆ ರಾಜೀನಾಮೆ ಕೊಡಿ. ಮಾ. 16ರಂದು ಹಳಿಯಾಳ ಬಂದ್‌ಗೆ ಹಳಿಯಾಳದ ಎಲ್ಲ ವರ್ತಕರು, ವಿವಿಧ ಸಂಘಟನೆಗಳು ಸ್ವಯಂ ಪ್ರೇರಿತರಾಗಿ ಸಹಕರಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.
ಕಬ್ಬು ಬೆಳೆಗಾರ ರೈತ ಹಿತ ಸಂರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಮಾತನಾಡಿ, ಕಾಳಿ ನದಿ ಯೋಜನೆಯಡಿ ಕೇವಲ 46 ಕೆರೆಗಳು ಹಾಗೂ 19 ಬಾಂದಾರುಗಳಲ್ಲಿ ನೀರು ತುಂಬಿದರೆ ತಾಲೂಕಿನಲ್ಲಿ ನೀರಾವರಿ ಆಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಕಳೆದ ತಿಂಗಳು ಜಿಲ್ಲಾಧಿಕಾರಿಗಳಿಗೆ ಸಭೆ ನಡೆಸಲು ನಾವು ಮನವಿ ಮಾಡಿದ್ದೇವೆ. ಕಾಮಗಾರಿ ವಿಳಂಬ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ರೈತರಿಗೆ ನೀರು ಒದಗಿಸಬೇಕು ಎಂದು ಒತ್ತಾಯಿಸಿದ್ದೇವೆ. ಇಲ್ಲವಾದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇವೆ ಎಂದರು.
ಕೆಲವು ದಿನಗಳ ಹಿಂದೆ ಶಾಸಕರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಒಳಚರಂಡಿ ಯೋಜನೆ ನಿರ್ವಹಣೆಗೆ 10 ಕೋಟಿ ರೂಪಾಯಿ ಮಂಜೂರಾಗಿದೆ ಎಂದು ಹೇಳಿಕೆ ನೀಡಿದ್ದರು. ಯಾವುದೇ ಕಾಮಗಾರಿ ಪೂರ್ಣಗೊಂಡ ನಂತರ ಎರಡರಿಂದ ಮೂರು ವರ್ಷಗಳ ಕಾಲ ಕಾಮಗಾರಿ ನಿರ್ವಹಣೆಯ ಜವಾಬ್ದಾರಿ ಗುತ್ತಿಗೆದಾರನ ಮೇಲಿರುತ್ತದೆ. ಆದರೆ, ಇನ್ನೂ ಕಾಮಗಾರಿಯೇ ಪೂರ್ಣಗೊಂಡಿಲ್ಲದಿದ್ದರೂ ಮತ್ತೆ ನಿರ್ವಹಣೆಗೆ 10 ಕೋಟಿ ರೂ. ಮಂಜೂರಾಗಿದೆ. ಇದು ಯಾವ ಉದ್ದೇಶಕ್ಕೆ ಬಳಕೆ ಆಗುತ್ತಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಜಿವೋಜಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶಂಕರ ಕಾಜಗಾರ, ಎಂ.ವಿ. ಘಾಡಿ, ಸಾತುರಿ ಗೋಡಿಮನಿ, ವಿರೂಪಾಕ್ಷ ಪಾಟೀಲ, ರಾಮದಾಸ್ ಬೆಳಗಾಂಕರ, ನಕುಲ್ ಕೆಚ್ಚನವರ, ಮಂಜುನಾಥ, ಸುರೇಶ ಶಿವಣ್ಣನವರ ಇತರರು ಇದ್ದರು.