ಬಿಡಾಡಿ ದನ, ಗೂಳಿ (bulls) ಕಾಟಕ್ಕೆ ಸಿಗಲಿದೆ ಮುಕ್ತಿ

ಶಿರಸಿಯಲ್ಲಿ ರಸ್ತೆಯ ಮಧ್ಯೆಯೇ ಮಲಗಿರುವ ಗೂಳಿ(Bulls)
ಶಿರಸಿಯಲ್ಲಿ ರಸ್ತೆಯ ಮಧ್ಯೆಯೇ ಮಲಗಿರುವ ಗೂಳಿ(Bulls)
Published on
ಶಿರಸಿ: ನಗರದಲ್ಲಿ ಬೇಕಾಬಿಟ್ಟಿಯಾಗಿ ಓಡಾಡಿಕೊಂಡಿರುವ ಗೂಳಿಗಳ (Bulls) ಕಾಟಕ್ಕೆ ಇನ್ನು ಬ್ರೇಕ್ ಬೀಳಲಿದೆ.
ಬಿಡಾಡಿ ದನಗಳು, ಗೂಳಿಗಳನ್ನು ನಗರಸಭೆ ಸಿಬ್ಬಂದಿ ಹಿಡಿಯುವ ಮತ್ತು ಅವುಗಳ ಮಾಲೀಕರನ್ನು ಪತ್ತೆ ಹಚ್ಚುವ ವಿಶೇಷ ಕಾರ್ಯಾಚರಣೆ ನಡೆಸಲು ನಿರ್ಧರಿಸಿದೆ.
ಹೌದು, ಶಿರಸಿ ನಗರದಲ್ಲಿ ರಾತ್ರಿಯ ವೇಳೆ ಪಾದಚಾರಿಗಳಿಗೆ ಬೀದಿ ನಾಯಿ ಕಾಟ ಜೋರಾಗಿದ್ದರೆ ವಾಹನ ಸಂಚಾರಕ್ಕೆ ಈ ಗೂಳಿಗಳು, ಬಿಡಾಡಿ ದನಗಳ ಕಾಟ ಜೋರಾಗಿದೆ.
ಬೃಹದಾಕಾರದ ಗೂಳಿಗಳು ರಾತ್ರಿಯ ವೇಳೆ ರಸ್ತೆಯ ಮೇಲೇ ಮಲಗಿದ್ದರೆ ರಾತ್ರಿ ಸಂಚರಿಸುವ ಬಸ್‌ಗಳು, ಸರಕು ಸಾಗಾಟದ ಲಾರಿಗಳಿಗೆ ಸಮಸ್ಯೆ ಆಗುತ್ತಿತ್ತು.
ಮಧ್ಯರಾತ್ರಿ ಹಾರ್ನ್ ಹಾಕಿದರೆ ಸ್ಥಳೀಯರಿಗೆ ನಿದ್ರಾ ಭಂಗವಾಗುತ್ತದೆ. ಹತ್ತಿರ ಬಂದರೂ ಈ ಗೂಳಿಗಳು ಎದ್ದೇಳುತ್ತಿರಲಿಲ್ಲ. ಬಸ್ ಚಾಲಕರು, ನಿರ್ವಾಹಕರು ಕೆಳಗಿಳಿದು ಬಂದು ಈ ಹೋರಿಗಳನ್ನು ಎಬ್ಬಿಸಿ ಪಕ್ಕಕ್ಕೆ ಕಳಿಸುವ ಘಟನೆ ಪ್ರತಿ ದಿನವೂ ನಡೆಯುತ್ತವೆ.
ಕೆಲ ವಾಹನಗಳು ರಸ್ತೆಯಲ್ಲಿ ನಿದ್ರಿಸಿದ ಗೂಳಿಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ ಘಟನೆಗಳೂ ನಡೆಯುತ್ತಿವೆ. ಇಂತಹ ಅವಘಡಗಳನ್ನು ತಪ್ಪಿಸುವ ಸಲುವಾಗಿ ಕಳೆದ ಎರಡು ವರ್ಷದ ಹಿಂದೆ ಪೊಲೀಸ್ ಇಲಾಖೆ ಈ ಗೂಳಿಗಳು, ಆಕಳುಗಳ ಕೋಡು(ಕೊಂಬು) ಗಳಿಗೆ ರೇಡಿಯಂ ಸ್ಟಿಕರ್ ಅಂಟಿಸಿದ್ದರು.
ಇಷ್ಟೆಲ್ಲ ಆದರೂ ರಾತ್ರಿ ವೇಳೆ ಬಿಡಾಡಿ ದನಗಳು, ಗೂಳಿಗಳು ರಸ್ತೆ ಮೇಲೆ ಮಲಗುತ್ತಿರುವುದನ್ನು ಸಂಚರಿಸುತ್ತಿರುವುದನ್ನು ತಪ್ಪಿಸಲಾಗಲಿಲ್ಲ, ಅವಘಡಗಳು ನಡೆದೇ ಇದ್ದವು. ಹಗಲಿನ ವೇಳೆ ರಸ್ತೆ ಮಧ್ಯೆಯೇ ನಿಂತು ಸಾರ್ವಜನಿಕರಿಗೂ ಭಯ ಮೂಡಿಸುತ್ತಿದ್ದವು. ಸುಧೀರ್ಘ ಅವಧಿಯ ಬಳಿಕ ಗೂಳಿಗಳ ತೊಂದರೆ ತಪ್ಪಿಸಲು ನಗರಸಭೆ ಮುಂದಾಗಿದೆ.

ಬರೋದು ಎಲ್ಲಿಂದ ?

ಈ ಬಿಡಾಡಿ ದನಗಳು, ಗೂಳಿಗಳ ಮಾಲೀಕರು ಯಾರು ಎಂಬುದು ಯಕ್ಷ ಪ್ರಶ್ನೆಯಾಗೇ ಉಳಿದಿದೆ.
ನಗರಸಭೆ ಹಲವಾರು ಬಾರಿ ಪ್ರಕಟಣೆ ನೀಡಿ ಗೂಳಿ, ಬಿಡಾಡಿ ದನಗಳ ಮಾಲೀಕರಿಗೆ ಎಚ್ಚರಿಸಿದ್ದರೂ ಯಾರೂ ಮುಂದೆ ಬಂದು ತಮ್ಮದು ಎಂದು ಹೇಳಿಕೊಳ್ಳುತ್ತಿಲ್ಲ.
ಈ ಬಿಡಾಡಿ ದನ ರಸ್ತೆ ಬದಿಯಲ್ಲೇ ಕರು ಹಾಕಿತೆಂದರೆ ಇದು ತಮ್ಮ ಆಕಳು ಎಂದು ಮುಂದೆ ಬರುವ ಮಾಲೀಕರ ಸಂಖ್ಯೆ ಒಮ್ಮೆಲೇ ಹೆಚ್ಚಾಗಿಬಿಡುತ್ತಿದೆ. ರಸ್ತೆ ಬದಿಯಲ್ಲೇ ಪ್ಲಾಸ್ಟಿಕ್, ಬಿಸಾಕಿದ ತ್ಯಾಜ್ಯ, ಆಹಾರ ತಿಂದು ಬೆಳೆದು ಹಾಲು ಕೊಡಲಾರಂಭಿಸಿದ ಬಳಿಕ ಮಾಲೀಕರು ಅವುಗಳನ್ನು ಮನೆಗೆ ಕರೆತಂದು ಕಟ್ಟಿ ಸಾಕುತ್ತಿದ್ದಾರೆ.
ನಗರಸಭೆ ಕಳೆದ ಐದು ವರ್ಷಗಳ ಹಿಂದೆಯೇ ಬಿಡಾಡಿ ದನಗಳ ನಿಯಂತ್ರಣಕ್ಕಾಗಿ ಕೊಂಡವಾಡೆ ನಿರ್ಮಿಸಿದೆ. ರಸ್ತೆ ಬದಿ ಆಕಳು ಗೂಳಿಗಳನ್ನು ಅಲ್ಲಿ ಕಟ್ಟಿಟ್ಟು ಮಾಲೀಕರು ಬಂದು ಒಯ್ಯುವಂತೆ ಪ್ರಕಟಣೆಯನ್ನೂ ನೀಡಿತ್ತು.
ಆದರೆ, ಮತ್ತೆ ಅದೇ ಯಥಾ ಸ್ಥಿತಿ...ಮಾಲೀಕರೇ ನಾಪತ್ತೆ. ಹುಲ್ಲು ನೀರು ಪೂರೈಸಲಾಗದೇ ತಾನೇ ಕಟ್ಟಿಹಾಕಿದ್ದ ಈ ಬಿಡಾಡಿ ಗೂಳಿ, ದನಗಳನ್ನು ಅನಿವಾರ್ಯವಾಗಿ ಬಿಟ್ಟು ಹೊಡೆದಿದೆ. ಮತ್ತೆ ಅವು ನಗರದೆಲ್ಲೆಡೆ ಹಾಯಾಗಿ ಓಡಾಡಿಕೊಂಡಿವೆ.

ಮುಗಿಯದ ದನಗಳ್ಳತನ

ನಗರದಲ್ಲಿ ದನಗಳನ್ನು ಬೇಕಾಬಿಟ್ಟಿ ಬಿಟ್ಟಿರುವುದು ದನಗಳ್ಳರಿಗೂ ಅತ್ಯುತ್ತಮ ಅವಕಾಶ ನೀಡಿದಂತಾಗಿದೆ.
ಹಾನಗಲ್ಲ, ಹಾವೇರಿ ಭಾಗದಿಂದಲೂ ನಗರಕ್ಕೆ ಬಂದು ರಸ್ತೆ ಪಕ್ಕ ಮಲಗಿರುವ ಆಕಳು, ಕರುಗಳನ್ನು ಹೊತ್ತೊಯ್ಯುವ ಘಟನೆಗಳು ವರ್ಷದಲ್ಲಿ ನಾಲ್ಕಾರು ನಡೆದೇ ಇರುತ್ತವೆ.
"

ಸಾರ್ವಜನಿಕರಿಗೆ ಸಂಚಾರಕ್ಕೆ ಅಡ್ಡಿ ಮಾಡುತ್ತಿರುವ ಗೂಳಿಗಳು, ಆಕಳುಗಳನ್ನು ಹಿಡಿಯುವ ವಿಶೇಷ ಕಾರ್ಯಾಚರಣೆ ಮುಂದಿನ ವಾರದಿಂದ ಮಾಡಲಿದ್ದೇವೆ. ಅವುಗಳ ಮಾಲೀಕರನ್ನು ಪತ್ತೆ ಹಚ್ಚಿ ಅವರಿಗೆ ಎಚ್ಚರಿಕೆ ನೀಡಲು ನಿರ್ಧರಿಸಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net