

ಯಲ್ಲಾಪುರ ತಾಲೂಕಾಸ್ಪತ್ರೆ ನೌಕರರ ಆಕ್ರೋಶ
ಕಾರಣ ಕೇಳಿ ಗುತ್ತಿಗೆದಾರನಿಗೆ ಟಿಎಚ್‌ಒ ನೋಟಿಸ್
ಕಾರ್ಮಿಕ ಇಲಾಖೆ ನಿಯಮ ಉಲ್ಲಂಘನೆ
ಶ್ರೀಧರ ಅಣಲಗಾರ ಯಲ್ಲಾಪುರ
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಸಿಬ್ಬಂದಿಗೆ ನೀಡುವ ವೇತನದಲ್ಲಿ ಟೆಂಡರ್ ಪಡೆದ ವ್ಯಕ್ತಿ ಸರ್ಕಾರದ ಮಾನದಂಡಕ್ಕಿಂತ ಕಡಿಮೆ ಸಂಬಳ ನೀಡಿ ವಂಚಿಸುತ್ತಿರುವ ಬಗ್ಗೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯೇತರ 10 ಹಾಗೂ ಡಿ ಗ್ರುಪ್‌ನ 10 ನೌಕರರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಅವರ ನೇಮಕಾತಿ, ವೇತನ ಪಾವತಿಯ ಟೆಂಡರ್ ಈ ಬಾರಿ ಜುಲೈ ತಿಂಗಳಿನಿಂದ ಬೆಳಗಾವಿ ತಾಲೂಕಿನ ಹುಕ್ಕೇರಿಯ ಮಹೇಶ ಲಕ್ಷ್ಮಣ ಗುಮಚಿ ಅವರು ಪಡೆದಿದ್ದಾರೆ.
ನಾನ್‌ಕ್ಲಿನಿಕಲ್ 10 ಸಿಬ್ಬಂದಿಗೆ ತಿಂಗಳಿಗೆ ಒಟ್ಟು 27,717 ರೂ. ನೀಡಬೇಕಿದ್ದು, ಜಿಎಸ್‌ಟಿ, ಪಿಎಫ್, ಇಎಸ್‌ಐ, ಸೇವಾ ಶುಲ್ಕಗಳನ್ನು ಕಡಿತ ಮಾಡಿ, 16,807 ರೂ. ನೀಡಬೇಕು. ಆದರೆ ಗುತ್ತಿಗೆದಾರ 13,945 ರೂ. ಮಾತ್ರ ನೀಡುತ್ತಿದ್ದಾರೆ. ಜತೆಗೆ ಡಿ ಗ್ರುಪ್‌ನ 10 ಸಿಬ್ಬಂದಿಗೆ ತಿಂಗಳಿಗೆ ಒಟ್ಟು 22,589 ರೂ. ನೀಡಬೇಕಿದ್ದು, ಅದರಲ್ಲಿ ಜಿಎಸ್‌ಟಿ, ಪಿಎಫ್, ಇಎಸ್‌ಐ, ಸೇವಾ ಶುಲ್ಕಗಳನ್ನು ಕಡಿತ ಮಾಡಿ, 13,949 ರೂ. ನೀಡಬೇಕು. ಆದರೆ, 13,945 ರೂ ನೀಡುತ್ತಿದ್ದಾರೆ. ಅದರಲ್ಲೂ ಈ ಎಲ್ಲ ಸಿಬ್ಬಂದಿಯಿಂದ ಮತ್ತೇ 500 ರೂ. ವಸೂಲಿ ಮಾಡುತ್ತಿದ್ದಾರೆ.
ಕಾರ್ಮಿಕ ಇಲಾಖೆಯ ನಿಯಮದಂತೆ ನೀಡುವ ವೇತನದಲ್ಲಿ ಶೇ. 3ರಷ್ಟು ಸೇವಾ ಶುಲ್ಕವನ್ನು ಮಾತ್ರ ಗುತ್ತಿಗೆದಾರ ಪಡೆಯಬೇಕು. ಆದರೆ ಇಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಕಾರಣ ಕೇಳಿದರೆ ಎಫ್ರಾನ್ ಮತ್ತು ಐಡಿ ಕಾರ್ಡ್ ನೀಡುವುದಕ್ಕಾಗಿ ಪಡೆಯುತ್ತಿದ್ದೇನೆಂದು ಹೇಳಿದ್ದಾರೆ. ನಿಯಮದ ಪ್ರಕಾರ ಎಫ್ರಾನ್ ಹಾಗೂ ಐಡಿ ಕಾರ್ಡ್‌ಗಳನ್ನು ಗುತ್ತಿಗೆದಾರನೇ ಸ್ವತಃ ನೀಡಬೇಕು. ಆದರೆ, ಎರಡು ತಿಂಗಳು ಕಳೆದರೂ ಹಣವೂ ಇಲ್ಲ, ಸೌಲಭ್ಯವೂ ಇಲ್ಲ ಎಂಬಂತಾಗಿದೆ.
ಅಧಿಕಾರಿಗಳ ಗಮನಕ್ಕೆ ವಿಷಯ ಬಂದ ನಂತರ ತಾಲೂಕು ಆರೋಗ್ಯಾಧಿಕಾರಿಗಳು ಗುತ್ತಿಗೆದಾರನಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಇದರಿಂದ ಎಚ್ಚೆತ್ತ ಗುತ್ತಿಗೆದಾರ ಎರಡು ತಿಂಗಳಿನ ವೇತನದಿಂದ ಹೆಚ್ಚುವರಿಯಾಗಿ ಪಡೆದ ಹಣವನ್ನು ಮರಳಿ ನೀಡುವುದಾಗಿ, ನಂತರ ಮತ್ತೆ ತನಗೆ ನೀಡಬೇಕೆಂದು ಸೂಚಿಸಿದ್ದಾನೆಂದು ಸಿಬ್ಬಂದಿ ದೂರಿದ್ದಾರೆ. ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.