

ಕಾರವಾರ: ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳು ಅಮೃತ ನಗರೋತ್ಥಾನ ಯೋಜನೆಯಲ್ಲಿ ಜಿಐಎಸ್ ಆಧಾರಿತ ಮಹಾ ಯೋಜನೆಗೆ ಆಯ್ಕೆಯಾಗಿವೆ. ಡ್ರೋನ್ ಮೂಲಕ ಸರ್ವೇ ನಡೆಸಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಕ್ರಮ ವಹಿಸಲಾಗಿದೆ.
50 ಸಾವಿರದಿಂದ 1 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಸುಸ್ಥಿರ ಅಭಿವೃದ್ಧಿಗೆ ಜಿಐಎಸ್ ಆಧಾರಿತ ಸರ್ವೇ ನಡೆಸಿ, ಜಿಯೋ ಡೇಟಾ ಬೇಸ್ ರಚನೆ ಮಾಡುವ ಕೇಂದ್ರ ಸರ್ಕಾರದ ಯೋಜನೆ ಇದಾಗಿದೆ. ಜಿಲ್ಲೆಯ ಕಾರವಾರ, ಶಿರಸಿ, ಭಟ್ಕಳ ಹಾಗೂ ದಾಂಡೇಲಿ ನಗರಗಳನ್ನು ಈ ಯೋಜನೆಯಲ್ಲಿ ಸರ್ವೇ ನಡೆಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಕಾರವಾರದಲ್ಲಿ ಈ ಪ್ರಕ್ರಿಯೆಗೆ ಚಾಲನೆ ದೊರಕಿದ್ದು, ಶೀಘ್ರ ಟೆಂಡರ್ ಕರೆಯಲಾಗುತ್ತಿದೆ ಎಂದು ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ನೌಫಾಲ್ ಅಹಮದ್ ತಿಳಿಸಿದ್ದಾರೆ.
ಏನಿದು ಜಿಐಎಸ್ ಆಧಾರಿತ ಸರ್ವೇ..?
ಅಮೃತ ನಗರೋತ್ಥಾನ ಎಂಬುದು ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದ್ದು, 2021 ರಿಂದ ಪ್ರಾರಂಭಿಸಲಾಗಿದೆ. ಕುಡಿಯವ ನೀರು ಸೇರಿ ವಿವಿಧ ನಗರ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ನಗರ ಸ್ಥಳೀಯ ಸಂಸ್ಥೆಗಳಿಗೆ ವಿಶೇಷ ಅನುದಾನ ನೀಡುತ್ತದೆ. ಅದೇ ಯೋಜನೆಯಲ್ಲಿ ನಗರ ಯೋಜನೆಗೂ ಅನುದಾನ ನೀಡಲಾಗುತ್ತದೆ.
ಇಲ್ಲಿ ಮೊದಲು ಡ್ರೋನ್ ಸರ್ವೇ ನಡೆಸಿ, ರಸ್ತೆ, ಚರಂಡಿ, ವಸತಿ ಪ್ರದೇಶ, ಉದ್ಯಾನಗಳನ್ನು ಜಿಐಎಸ್ ಆಧಾರದ ಮೇಲೆ ಗುರುತು ಹಾಕಲಾಗುತ್ತದೆ. ನಂತರ ಸ್ಥಳ ಸಮೀಕ್ಷೆ ನಡೆಸಿ, ಅದನ್ನು ಖಚಿತ ಮಾಡಿಕೊಂಡು ದಾಖಲೀಕರಣ ಮಾಡಿ ಕರಡು ಮಹಾ ಯೋಜನೆಯನ್ನು ಸಿದ್ಧ ಮಾಡಲಾಗುತ್ತದೆ. ಸಾರ್ವಜನಿಕರ ಅಭಿಪ್ರಾಯ ಪಡೆದು ಮುದ್ರಿಸಲಾಗುತ್ತದೆ.
ನಗರಗಳು ಬೇಕಾಬಿಟ್ಟಿ ಬೆಳೆಯುವುದನ್ನು ತಪ್ಪಿಸಲು, ರಸ್ತೆ, ಉದ್ಯಾನ, ಚರಂಡಿ ಮುಂತಾದ ಎಲ್ಲ ಮೂಲ ಸೌಕರ್ಯಗಳು ಸರಿಯಾಗಿ ನೋಡಿಕೊಳ್ಳಲು ಪ್ರತಿ 10 ವರ್ಷಗಳಿಗೊಮ್ಮೆ ನಗರ ಮಹಾ ಯೋಜನೆಯನ್ನು ಸಿದ್ಧ ಮಾಡಬೇಕು ಎಂದು ನಗರಾಭಿವೃದ್ಧಿ ಕಾಯ್ದೆ 1961 ಹೇಳುತ್ತದೆ. ಪ್ರತಿ 10 ವರ್ಷಗಳಿಗೆ ಅಲ್ಲದಿದ್ದರೂ 15 ವರ್ಷಗಳ ಒಳಗೆ ಮಹಾ ಯೋಜನೆಯನ್ನು ಪರಿಷ್ಕಾರ ಮಾಡಲಾಗುತ್ತಿದೆ. ಕಾರವಾರದಲ್ಲಿ ಇದಕ್ಕೆ ಪ್ರತ್ಯೇಕವಾಗಿ ಕಾರವಾರ ನಗರಾಭಿವೃದ್ಧಿ ಪ್ರಾಽಕಾರವಿದೆ. ಉಳಿದ ನಗರಗಳಿಗೆ ನಗರ ಹಾಗೂ ಗ್ರಾಮೀಣ ಯೋಜನಾ ಪ್ರಾಽಕಾರವು ಆಯಾ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯ ನಡೆಸುತ್ತದೆ. ಇದುವರೆಗೆ ಮಾಸ್ಟರ್ ಪ್ಲಾನ್ಗಳನ್ನು ಕೈ ನಕ್ಷೆಯಂತೆ ಸಿದ್ಧ ಮಾಡಲಾಗುತ್ತಿತ್ತು. ಈಗ ಜಿಐಎಸ್ ಆಧಾರಿತ ಮ್ಯಾಪ್ ಸಿದ್ಧವಾಗಲಿದೆ.
ಸಿದ್ದಾಪುರ ಪಟ್ಟಣ ಪಂಚಾಯಿತಿ ಮಹಾ ಯೋಜನೆಯನ್ನು 2025 ರ ಡಿಸೆಂಬರ್ನಲ್ಲಿ, ಹೊನ್ನಾವರದ ಮಹಾ ಯೋಜನೆಯನ್ನು ಇದೇ ವರ್ಷ ಜನವರಿಯಲ್ಲಿ ಮಾಡಿ ಸರ್ಕಾರಕ್ಕೆ ಕಳಿಸಲಾಗಿದ್ದು, ಇದುವರೆಗೂ ಅನುಮೋದನೆ ದೊರಕಿಲ್ಲ ಎಂದು ಅಽಕಾರಿಗಳು ಹೇಳುತ್ತಾರೆ. ಮುಂಡಗೋಡ, ಯಲ್ಲಾಪುರ, ಅಂಕೋಲಾ ಪಟ್ಟಣಗಳಲ್ಲಿ ಇದುವರೆಗೂ ಸ್ಥಳೀಯ ಪ್ರದೇಶ ಯೋಜನೆ (ಎಲ್ಎಪಿ) ಆಗಿಲ್ಲ. ಮುಂದೆ ಅದನ್ನು ಸಿದ್ಧ ಮಾಡಲಾಗುವುದು ಎನ್ನುತ್ತಾರವರು.
ನಗರಗಳು ಬೆಳೆಯುತ್ತವೆ. ಆದರೆ, ದಾಂಡೇಲಿ ನಗರದಲ್ಲಿ ಜನಸಂಖ್ಯೆ ಇಳಿಯುತ್ತಿದೆ. ನಗರ ವಿಸ್ತರಣೆಯಾಗುತ್ತಿಲ್ಲ. ಇದರಿಂದ ನಗರ ವಿಸ್ತರಣೆಯ ಹೊಸ ಮಹಾ ಯೋಜನೆ ಮಾಡುವ ಬದಲು 2012 ರ ಯೋಜನೆಯನ್ನೇ ಮುಂದುವರಿಸಲಾಗಿದೆ. ಅಮೃತ ನಗರೋತ್ಥಾನದಡಿ ಆಯ್ಕೆಯಾಗಿದ್ದು, ಹೊಸ ಯೋಜನೆ ಸಿದ್ಧ ಮಾಡಬೇಕೆ ಎಂಬುದು ಇನ್ನೂ ಖಚಿತವಾಗಿಲ್ಲ ಎನ್ನುತ್ತಾರೆ ನಗರ ಹಾಗೂ ಗ್ರಾಮೀಣ ಯೋಜನಾ ಇಲಾಖೆ ಶಿರಸಿ ಸಹಾಯಕ ನಿರ್ದೇಶಕ ವೆಂಕಟರಮಣ ಜೋಗಿ.