ಇಬ್ಬರಿಗೆ ನೋಟಿಸ್ ಒಬ್ಬರಿಗೆ ಕಡ್ಡಾಯ ರಜೆ: ಆಹಾರ ಆಯೋಗದ ಕ್ರಮ
ಆಹಾರ ಆಯೋಗದ ಅಧ್ಯಕ್ಷ ಎಚ್.ಕೃಷ್ಣ ಕ್ರಿಮ್ಸ್ ಆಹಾರ ಪರಿಶೀಲಿಸಿದರು.
Published on:
Copied
Follow Us
ಕಾರವಾರ: ಜಿಲ್ಲೆಯಲ್ಲಿ ಸರ್ಕಾರದಿಂದ ಪೂರೈಕೆಯಾಗುವ ಆಹಾರ ಧಾನ್ಯಗಳ ವಿತರಣೆಯಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದು, ಅದನ್ನು ತಕ್ಷಣ ಸರಿಪಡಿಸುವಂತೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಕಟ್ಟಾಜ್ಞೆ ಮಾಡಿದರು.
ಆಯೋಗದ ಸದಸ್ಯರ ತಂಡದ ಜೊತೆ ಮೂರು ದಿನ ಜಿಲ್ಲೆಯ ವಿವಿಧೆಡೆ ಸ್ಥಳ ಪರಿಶೀಲನೆ ನಡೆಸಿದ ನಂತರ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ಮಾತನಾಡಿದರು. ಆಹಾರ ಆಯೋಗದ ವ್ಯಾಪ್ತಿಗೆ 14 ಇಲಾಖೆಗಳು ಬರುತ್ತವೆ. ಅವೆಲ್ಲವನ್ನೂ ಪರಿಶೀಲಿಸಿದ್ದೇವೆ. ಹಲವು ಲೋಕಪಗಳು ಕಂಡುಬಂದಿವೆ ಎಂದು ಕೃಷ್ಣ ಹಾಗೂ ಆಯೋಗದ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎಲ್ಲೆಡೆ ಸಿಬ್ಬಂದಿ ಕೊರತೆ ಇದೆ ಎಂಬುದು ಸರಿ. ಆದರೆ, ಹೊರ ಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಂಡು ಅಥವಾ ಇದ್ದ ಸಿಬ್ಬಂದಿಯನ್ನೇ ಸರಿಯಾಗಿ ಬಳಸಿಕೊಂಡು ಉತ್ತಮ ಕಾರ್ಯ ನಿರ್ವಹಿಸಿ. ತಕ್ಷಣ ಕೆಲವರ ಮೇಲೆ ಕ್ರಮ ವಹಿಸಲಾಗಿದೆ. ಇನ್ನೂ ಹಲವು ಲೋಪಗಳನ್ನು ಗುರುತಿಸಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ ಸರಿಪಡಿಸದೇ ಇದ್ದಲ್ಲಿ ಕ್ರಮ ಎದುರಿಸಲು ಸಜ್ಜಾಗಿ ಎಂದರು.
ಆಹಾರ ಗೋಡೌನ್‌ಗಳಲ್ಲಿ ಸ್ವಚ್ಛತೆ ಇಲ್ಲ. ಹಾಸ್ಟೆಲ್‌ಗಳಲ್ಲಿ ಮೆನುವಿನಂತೆ ಆಹಾರ ನೀಡದೇ ಇರುವುದು ಕಂಡು ಬರುತ್ತಿದೆ. ಶಾಲೆಗಳಲ್ಲಿ ಬಿಸಿಯೂಟದ ಆಹಾರ ನೀಡಿದ ದಾಖಲೆ ಕಂಡು ಬರುತ್ತಿಲ್ಲ. ಕ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಹಾರ ತಯಾರಿಸುವ ಕೊಠಡಿ ಸರಿಯಾಗಿರುವುದು ಪತ್ತೆಯಾಗಿದೆ. ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಹಿರಿಯ ಅಧಿಕಾರಿಗಳು ಆಗಾಗ ಭೇಟಿ ನೀಡಬೇಕು. ಕೆಲವರ ಮೇಲೆ ಕ್ರಮ ವಹಿಸಬೇಕು. ಆಗ ಮಾತ್ರ ಅಕ್ರಮಗಳ ನಿಯಂತ್ರಣ ಸಾಧ್ಯ ಎಂದರು.
ಆಹಾರ ಸಿದ್ದಪಡಿಸುವ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಎಚ್‌ಐವಿ ತಪಾಸಣೆ ಮಾಡಿಸಬೇಕು. ಏಪ್ರನ್‌ಗಳನ್ನು ಒದಗಿಸಬೇಕು. ಗೋದಾಮುಗಳಲ್ಲಿ ಆಹಾರ ಶೇಖರಣೆಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಬೇಕು. ಆಹಾರ ತಯಾರಿಕಾ ಮಾದರಿಗಳನ್ನು ಆಗಾಗ್ಗೆ ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ಆಯೋಗದ ಅಧ್ಯಕ್ಷರು ಗುರುತಿಸಿರುವ ಲೋಪಗಳನ್ನು ತಕ್ಷಣ, ಕೆಲವನ್ನು 3 ತಿಂಗಳ ಗಡುವಿನಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ,ಸುಮಂತ್‌ರಾವ್, ಮಾರುತಿ ಎಂ.ದೊಡ್ಡಲಿಂಗಣ್ಣನವರ, ಎ.ರೋಹಿಣಿ ಪ್ರಿಯ, ಕೆ.ಎಸ್.ವಿಜಯಲಕ್ಷ್ಮೀ, ಜಿಪಂ ಸಿಇಒ ಡಾ.ದಿಲೀಶ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣ್‌ಕರ್ ಇದ್ದರು.
ಮೂವರ ಮೇಲೆ ತಕ್ಷಣ ಕ್ರಮ
ಮಾ.2 ರಿಂದ 2 ದಿನ ಆಹಾರ ಆಯೋಗದ ವ್ಯಾಪ್ತಿಗೆ ಬರುವ 14 ಇಲಾಖೆಗಳ ಪರಿಶೀಲನೆ ನಡೆಸಿದೆವು. ಅಲ್ಲಿ ಕಂಡುಬಂದ ನ್ಯೂನ್ಯತೆಗಳಿಗೆ ಸಂಬಂಧಿಸಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಲು ಕ್ರಮ ವಹಿಸಲಾಗಿದೆ ಎಂದು ಡಾ.ಎಚ್.ಕೃಷ್ಣ ತಿಳಿಸಿದರು. ಕಾರವಾರದ ಬಜಾರ್ ಶಾಲೆಗೆ ಹಠಾತ್ ಭೇಟಿ ನೀಡಿದ ಸಂದರ್ಭದಲ್ಲಿ ಪಿಎಂ ಪೋಶಣ್ ಯೋಜನೆಯಲ್ಲಿ ವಿತರಿಸುವ ಮೊಟ್ಟೆ , ಬಾಳೆಹಣ್ಣು ಹಾಗೂ ಆಹಾರದ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದೇ ಇರುವುದು. ಶೌಚಗೃಹ ಹಾಗೂ ಅಡುಗೆ ಕೋಣೆಯನ್ನು ಸ್ವಚ್ಛವಾಗಿ ಇಡದೇ ಇರುವುದು ಕಂಡುಬಂದಿದ್ದು, ಮುಖ್ಯಾಧ್ಯಾಪಕರನ್ನು 15 ದಿನ ಕಡ್ಡಾಯ ರಜೆಗೆ ಕಳಿಸಲಾಗಿದೆ.
ಅಮದಳ್ಳಿಯ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆಹಾರ ನೀಡಿದ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದ ಮುಖ್ಯಾಧ್ಯಾಪಕಿ , ಕಾರವಾರ ಕ್ರಿಮ್ಸ್ನ ಅಪೌಷ್ಠಿಕ ಮಕ್ಕಳ ಪಾಲನಾ ಕೇಂದ್ರದಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡದ ಫುಡ್ ಡಯಟೀಶಿಯನ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಇನ್ನೂ ಹಲವು ವಿಚಾರಗಳನ್ನು ಜಿಲ್ಲಾಽಕಾರಿ ಹಾಗೂ ಜಿಪಂ ಸಿಇಒ ಅವರಿಗೆ ತಿಳಿಸಲಾಗಿದೆ. ನೋಟಿಸ್ ನೀಡಿ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ನಾವು ಕೆಲವೇ ದಿನಗಳಲ್ಲಿ ಬಂದು ಇನ್ನೊಮ್ಮೆ ಬಂದು ಫಾಲೋ ಅಪ್ ಮಾಡುತ್ತೇವೆ ಎಂದು ವಿವರಿಸಿದರು.