ಅಳ್ವೇಕೋಡಿಯಲ್ಲಿ 10 ಸಾವಿರ ಮುತ್ತೈದೆಯರಿಗೆ ಉಡಿ

ಭಟ್ಕಳ ತಾಲೂಕಿನ ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವ ಮುತೈದೆಯರು.
ಭಟ್ಕಳ ತಾಲೂಕಿನ ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವ ಮುತೈದೆಯರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ

ಭಟ್ಕಳ: ತಾಲೂಕಿನ ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲಾಯಿತು.

ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಬೆಳಗ್ಗೆ ಮಹಾಲಕ್ಷ್ಮೀಯ ಕಳಸ ಸ್ಥಾಪನೆ ಮಾಡಿ ದೇವಿಗೆ ಪೂಜೆ ಸಲ್ಲಿಸಿದ ಬಳಿ ಮುತೈದೆಯರಿಗೆ ಉಡಿ ತುಂಬುವ ಶಾಸ್ತ್ರ ಆರಂಭಿಸಲಾಯಿತು. ದೇವಿಯ ಸನ್ನಿಧಿಯಲ್ಲಿ ಉಡಿ ತುಂಬಿಸಿಕೊಂಡರೆ ಜೀವನದ ಕಷ್ಟವೆಲ್ಲ ಕರಗಿ ದೀರ್ಘ ಸುಮಂಗಲೆಯ ಭಾಗ್ಯ ಸಿಗುತ್ತದೆ ಎನ್ನುವ ಧಾರ್ಮಿಕ ಭಾವನೆಯಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 5 ಗಂಟೆಯಿಂದ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಸಾವಿರಾರು ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ದೇವಿಯ ಸನ್ನಿಧಿಯಲ್ಲಿ ಅರಿಶಿನ, ಕುಂಕುಮ ಪಡೆದು ಉಡಿ ತುಂಬಿಸಿಕೊಂಡರು. ದೇವಸ್ಥಾನದ ಆಡಳಿತ ಮಂಡಳಿಯವರು 10 ಸಾವಿರ ಜನರಿಗೆ ಉಡಿ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ, ಅದಕ್ಕಿಂತ ಹೆಚ್ಚಿನ ಜನರು ಆಗಮಿಸಿದ್ದರು. ಆಡಳಿತ ಸಮಿತಿ ಹಾಗೂ ಪೊಲೀಸರು ಅಚ್ಚುಕಟ್ಟಾದ ವ್ಯವಸ್ಥೆಯಿಂದ ನೂಕು ನುಗ್ಗಲು ಉಂಟಾಗಲಿಲ್ಲ. ಎಲ್ಲ ಭಕ್ತಾದಿಗಳಿಗೂ ಬೆಳಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಮಾರಿಕಾಂಬ ಜಾತ್ರಾ ಸಮಿತಿ ಅಧ್ಯಕ್ಷ ರಾಮಾ ಮೊಗೇರ, ಸದಸ್ಯರಾದ ಭಾಸ್ಕರ ದೈಮನೆ, ಯಾದವ ಮೊಗೇರ, ಭಾಸ್ಕರ ಮೊಗೇರ, ರಾಜೀವ್ ಪೈ, ತಿಮ್ಮಪ್ಪ ಮೊಗೇರ ಸೇರಿದಂತೆ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net