ಯಲ್ಲಾಪುರದ ಬಸ್ ನಿಲ್ದಾಣದ ಎದುರು ಬೀದಿ ಬದಿಯ ವ್ಯಾಪಾರಿಗಳು ಕರ್ನಾಟಕ ರಾಜ್ಯ ರೈತಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ಗಣೇಶ ಪಾಟಣಕರ್ ಅವರನ್ನು ಗೌರವಿಸಿದರು. ಪ್ರಸಾದ ಹೆಗಡೆ, ಸೈಯ್ಯದ್ ಬಶೀರ, ಶಂಕರ ಜಾಧವ್, ಅಬ್ದುಲ್ ರಜಾಕ್ ಕುಟ್ಟಿ, ಮಹೇಶ ನಾಯ್ಕ, ಹನುಮಂತ ಅತ್ತರವಾಲಾ, ರಿಜಾಜ್ ಹಿರೂರು, ರಿಯಾಜ್ ಅಹಮ್ಮದ್ ಖುನ್ನೂರು ಇತರರಿದ್ದರು.
ರಾಜ್ಯ ರೈತಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ಗಣೇಶ ಪಾಟಣಕರ್ ಎಚ್ಚರಿಕೆ
ಯಲ್ಲಾಪುರ: ಪಟ್ಟಣದಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವವರನ್ನು ಕಾರಣವಿಲ್ಲದೇ ಎಬ್ಬಿಸುವ ಹುನ್ನಾರ ನಡೆದಿದ್ದು, ಈ ಬಗ್ಗೆ ಹೋರಾಟದ ಮೂಲಕ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ರಾಜ್ಯ ರೈತಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ಗಣೇಶ ಪಾಟಣಕರ್ ಎಚ್ಚರಿಸಿದರು.
ಪಟ್ಟಣದ ಬಸ್ ನಿಲ್ದಾಣದ ಎದುರು ಭಾನುವಾರ ಬೀದಿ ವ್ಯಾಪಾರಿಗಳಿಂದ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಯುದ್ಧದ ಪ್ರಕ್ಷುಬ್ಧ ಸಂದರ್ಭದಲ್ಲಿ ಬೆಲೆ ಏರಿಕೆ, ಇತ್ಯಾದಿಯಿಂದ ಬದುಕು ಸಾಗಿಸುವುದೇ ಕಷ್ಟವಾಗಿದೆ. ಈ ವೇಳೆ ಬೀದಿ ಬದಿಯ ವ್ಯಾಪಾರಿಗಳಿಗೆ ಅನವಶ್ಯಕ ತೊಂದರೆ ಕೊಟ್ಟರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಸಂವಿಧಾನದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ನಿಯಮದ ಕಾಯಂ ಸ್ಟ್ರಕ್ಚರ್ ಹಾಕಿ ಬೀದಿ ವ್ಯಾಪಾರ ಮಾಡಬಾರದು. ನಿಯಮದಂತೆ ಇರುವ ವ್ಯಾಪಾರಿಗಳಿಗೆ ತೊಂದರೆಯಾದರೆ, ಬೀದಿ ಬದಿಯ ವ್ಯಾಪಾರಿಗಳ ಪರವಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದರು.
ಬೀದಿ ಬದಿಯ ವ್ಯಾಪಾರಿಗಳಾದ ಸೈಯ್ಯದ್ ಬಶೀರ, ಶಂಕರ ಜಾಧವ್, ಅಬ್ದುಲ್ ರಜಾಕ್ ಕುಟ್ಟಿ, ಮಹೇಶ ನಾಯ್ಕ, ಹನುಮಂತ ಅತ್ತರವಾಲಾ, ರಿಜಾಜ್ ಹಿರೂರು, ರಿಯಾಜ್ ಅಹಮ್ಮದ್ ಖುನ್ನೂರು ಇತರರಿದ್ದರು.