ಸಮರ್ಪಕ ನೀರು ಪೂರೈಕೆಗೆ ಆಗ್ರಹ

ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಮುಂಡಗೋಡ ತಾಲೂಕಿನ ಸಾಲಗಾಂವ ಗ್ರಾಮ ಪಂಚಾಯಿತಿ ಎದುರು ಶುಕ್ರವಾರ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಮುಂಡಗೋಡ ತಾಲೂಕಿನ ಸಾಲಗಾಂವ ಗ್ರಾಮ ಪಂಚಾಯಿತಿ ಎದುರು ಶುಕ್ರವಾರ ಸ್ಥಳೀಯರು ಪ್ರತಿಭಟನೆ ನಡೆಸಿದರು.
Published on
ಮುಂಡಗೋಡ: ತಾಲೂಕಿನ ಸಾಲಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪ ಓಣಿಯಲ್ಲಿ ಕಳೆದ 15 ದಿನಗಳಿಂದ ಕುಡಿಯವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಸ್ಥಳೀಯರು ಶುಕ್ರವಾರ ಗ್ರಾಪಂ ಎದುರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಹೊಸಕೊಪ್ಪ ಓಣಿಯಲ್ಲಿ ಸುಮಾರು 65 ಕುಟಂಬಗಳಿದ್ದು, ಜೆಜೆಎಂ ಯೋಜನೆಯಡಿ ನಲ್ಲಿ ಹಾಕಲಾಗಿದೆ. ಆದರೆ, ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಕೋರಿಕೊಂಡರೂ ಪಂಚಾಯಿತಿಯವರು ಸ್ಪಂದಿಸುತ್ತಿಲ್ಲ. ಪ್ರತಿ ವರ್ಷ ಬೇಸಿಗೆಯಲ್ಲಿ ಈ ಓಣಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಆದರೆ, ಸಂಬಂಧಪಟ್ಟವರು ಈವರೆಗೂ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಅಲ್ಲದೆ, ವಾಟರ್‌ಮನ್ ಕೂಡ ಇಲ್ಲ. ಹೊಸ ಸಿಬ್ಬಂದಿಯನ್ನು ಈವರೆಗೂ ತೆಗೆದುಕೊಂಡಿಲ್ಲ. ಇನ್ನೂ ಕೆಲ ದಿನಗಳಲ್ಲಿಯೇ ಗ್ರಾಮ ದೇವಿ ಜಾತ್ರೆ ಇದೆ. ಮನೆಗಳಿಗೆ ಸಂಬಂಧಿಕರು ಬರುತ್ತಾರೆ. ಆಗಲೂ ನೀರಿನ ಸಮಸ್ಯೆಯಾದರೆ ನಾವು ಯಾರ ಬಳಿ ಹೋಗಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆಯೂ ಆರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದ್ದರು. ಇದೀಗ ಅದು ಬರುತ್ತಿಲ್ಲ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತ ಪರಿಹಾರ ನೀಡಬೇಕು. ಅಲ್ಲಿಯವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೊದಲಿದ್ದ ವಾಟರ್‌ಮನ್ ಜೆಜೆಎಂಗೆ ನೀರು ಸರಬರಾಜು ಮಾಡುವ ಬದಲು ನೇರವಾಗಿ ನೀರು ಬಿಡುತ್ತಿದ್ದ. ಅಲ್ಲದೆ, ಕೆಲ ಆರೋಪದ ಮೇಲೆ ನೋಟಿಸ್ ನೀಡಿ ಅವನನ್ನು ಕೆಲಸದಿಂದ ತೆಗೆಯಲಾಗಿದೆ. ನಮ್ಮ ನಾಲ್ಕು ಕೊಳವಿಬಾವಿಗಳಲ್ಲಿ ಅಂತರ್ಜಲ ಕುಸಿತದಿಂದ ನೀರು ಬರುತ್ತಿಲ್ಲ. ಹೀಗಾಗಿ ಸ್ಥಳೀಯರಿಂದ ಎರಡು ಖಾಸಗಿ ಬೋರವೆಲ್ ಪಡೆದು ನೀರು ಪೂರೈಸಲಾಗುತ್ತಿತ್ತು. ಆದರೆ, ಕೆಲವರಿಗೆ ನೀರು ಹೋಗುತ್ತಿತ್ತು. ಇನ್ನು ಕೆಲವರಿಗೆ ತಲುಪುತ್ತಿರಲಿಲ್ಲ. ಹೀಗಾಗಿ ಸ್ಥಳೀಯರು ಜೆಜೆಎಂನ ನಲ್ಲಿಯಲ್ಲಿಯೇ ನೀರು ಬಿಡಬೇಕು ಎನ್ನುತ್ತಿದ್ದರು. ಹಾಗಾಗಿ ಖುದ್ದು ನಾನೇ ನಿಂತು ನೀರು ಪೂರೈಕೆ ಮಾಡಿದ್ದೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net